ವಿಜ್ಞಾನ-ತಂತ್ರಜ್ಞಾನದಿಂದ ಸಮಾನತೆ ಸಾಧಿಸಿ: ಶಾಸಕ ಪ್ರಕಾಶ ಕೋಳಿವಾಡ

ವಿಜ್ಞಾನ-ತಂತ್ರಜ್ಞಾನದಿಂದ ಸಮಾನತೆ ಸಾಧಿಸಿ: ಶಾಸಕ ಪ್ರಕಾಶ ಕೋಳಿವಾಡ  Achieve equality through science and technology: MLA Prakash Koliwad


ರಾಣೇಬೆನ್ನೂರು, ಆ.21: ವಿವಿಧತೆಯಲ್ಲಿ ಏಕತೆ ಸಾರುವ ಭಾರತದ ಪ್ರತಿಯೊಬ್ಬರೂ ಆರ್ಥಿಕ ಸಮಾನತೆಯ ಜೊತೆಗೆ ಸಾಮಾಜಿಕ ಸಮಾನತೆಯ ಎಲ್ಲ ಅಂಶಗಳನ್ನು ಮೈಗೂಡಿಸಿಕೊಂಡು, ಪರಿಪೂರ್ಣ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಭವಿಷ್ಯದ ಯುವಜನರ ಮೇಲಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.  

ನಗರಸಭೆ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನದ ಪರಿಣಾಮದಿಂದ ಅಮೂಲಾಗ್ರ ಬದಲಾವಣೆಗಳು ಕಂಡುಬರುತ್ತಿದ್ದು, ದೇಶದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ. ರಾಣೇಬೆನ್ನೂರು ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿಗೆ ಚಾಲನೆ ದೊರೆತಿದ್ದು, ಪರಿಪೂರ್ಣ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.  

ವೈಜ್ಞಾನಿಕ ಬೆಳವಣಿಗೆಯೊಂದಿಗೆ ಸಮಾನತೆ ಸಾಧಿಸಲು ಕೃಷಿ, ವಿಜ್ಞಾನ, ತಂತ್ರಜ್ಞಾನ ಹಾಗೂ ಡಿಜಿಟಲೀಕರಣದ ಮೂಲಕ ತಾಲೂಕಿನಲ್ಲಿ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.  

80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಆರ್‌.ಎಚ್‌. ಭಗವಾನ್, ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ರಾಣೇಬೆನ್ನೂರು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಸಾಧಿಸಿರುವುದು ಸಾಕಷ್ಟಿದ್ದರೂ, ಸಾಧಿಸಬೇಕಿರುವುದು ಇನ್ನೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಪ್ರಗತಿಪರ ಚಿಂತನೆಯ ಶಾಸಕರು ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ತಾಲೂಕಿನ ಹೆಮ್ಮೆ ಎಂದರು.  

ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಸಾಧನ-ಸಲಕರಣೆ ವಿತರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪತ್ರಕರ್ತರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.  

ವೇದಿಕೆಯಲ್ಲಿ ನಗರಸಭೆ ಪೌರಾಯುಕ್ತ ಫಕೀರ​‍್ಪ ಇಂಗಳಗಿ, ಡಿವೈಎಸ್ಪಿ ಜೆ. ಲೋಕೇಶ್, ವಿವಿಧ ಕ್ಷೇತ್ರಗಳ ಗಣ್ಯರಾದ ಮಂಜುನಗೌಡ ಪಾಟೀಲ, ವೀರೇಶ್ ಮೊಟಗಿ, ಪಿ.ಜೆ. ಮರಿಯಮ್ಮನವರ, ಮಹೇಶ್ ಕಂಬಳಿ, ಮಂಜಪ್ಪ ಹಲವಾಗಲ್, ವೆಂಕಪ್ಪ ಕೆಂಚರೆಡ್ಡಿ, ಮಧು ಕೋಳಿವಾಡ, ಡಾ. ಮಂಜುನಾಥ್, ಎ.ಬಿ. ಚಂದ್ರಶೇಖರ, ಶ್ರೀಮತಿ ಪುಷ್ಪಲತಾ ವಿ.ಕೆ. ಸೇರಿದಂತೆ ಇತರರು ಉಪಸ್ಥಿತರಿದ್ದರು.  

ಶಾಲಾ ವಿದ್ಯಾರ್ಥಿಗಳು ವಂದೇ ಮಾತರಂ, ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಬಿಇಒ ಶ್ಯಾಮಸುಂದರ ಅಡಿಗ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರಿ ವಿಶ್ವವಿದ್ಯಾಲಯದ ಬಿಕೆ ಮಾಲತಿ ಅಕ್ಕ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ಎಂ.ಕೆ. ಸಾಲಿಮಠ ನಿರೂಪಿಸಿ ವಂದಿಸಿದರು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಕವಾಯತು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ನಾಗರಿಕರ ಗಮನ ಸೆಳೆದವು.