ವಿದ್ಯಾರ್ಥಿಗಳ ಹಕ್ಕಿಗಾಗಿ ಬಲಿಷ್ಠ ಚಳವಳಿ ಅಗತ್ಯ

ವಿದ್ಯಾರ್ಥಿಗಳ ಹಕ್ಕಿಗಾಗಿ ಬಲಿಷ್ಠ ಚಳವಳಿ ಅಗತ್ಯ A strong movement for students' rights is essential

ಹಾವೇರಿ  14: ವಿದ್ಯಾರ್ಥಿಗಳು ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಓದಿ ಅರ್ಥೈಸಿಕೊಂಡು ಸ್ಫೂರ್ತಿ ಪಡೆಯಬೇಕು. ಪ್ರಸಕ್ತ ಸಂದರ್ಭದಲ್ಲಿ ವಿದ್ಯಾರ್ಥಿ ಚಳವಳಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಉಪನ್ಯಾಸಕ ಮಾರುತಿ ಅಂಬಿಗೇರ ಹೇಳಿದರು.  ನಗರದ ಪಿ.ಬಿ. ರಸ್ತೆಯಲ್ಲಿರುವ ಭಗತ್ ಅಕಾಡೆಮಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ತಾಲೂಕು ಸಮಿತಿ ಆಯೋಜಿಸಿದ್ದ 10ನೇ ವಿದ್ಯಾರ್ಥಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.  

ಸರ್ಕಾರಿ ಶಾಲಾ-ಕಾಲೇಜು ಹಾಗೂ ಹಾಸ್ಟೆಲ್‌ಗಳ ಬಲವರ್ಧನೆ, ತಾಲ್ಲೂಕಿನ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು. ಶಿಕ್ಷಣ ಸಾಮಾನ್ಯ ವಿದ್ಯಾರ್ಥಿಗಳಿಗೆ ಸಿಗುವ ಬದಲು ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಣದ ಖಾಸಗೀಕರಣದ ವಿರುದ್ಧ ವಿದ್ಯಾರ್ಥಿಗಳು ಸಂಘಟಿತರಾಗಿ ಸಂವಿಧಾನದ ಆಶಯಗಳನ್ನು ಪಾಲಿಸುವ ಮೂಲಕ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದರು.  

ಮುಖ್ಯ ಅತಿಥಿಯಾಗಿದ್ದ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಮಾರುಕಟ್ಟೆಯಲ್ಲಿ ಸರಕುಗಳನ್ನು ಮಾರಾಟ ಮಾಡುವಂತೆ ಶಿಕ್ಷಣವನ್ನೂ ವ್ಯಾಪಾರ ಮಾಡಲಾಗುತ್ತಿದೆ ಎಂದು ಟೀಕಿಸಿದರು. ಸರ್ಕಾರಗಳು ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿದ್ದು, ದೇಶದ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿಯರ ಜವಾಬ್ದಾರಿಗೆ ಒಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕುಗಳಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ-ಯುವಜನರು ಬಲಿಷ್ಠ ಚಳವಳಿ ರೂಪಿಸಬೇಕು ಎಂದು ಹೇಳಿದರು.  

ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್‌. ಮಾತನಾಡಿ, ಶಿಕ್ಷಣದ ಉಳಿವು ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಎಲ್ಲ ಶಿಕ್ಷಣ ಪ್ರೇಮಿಗಳು ಮುಂದಾಗಬೇಕು. ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಐಕ್ಯ ಹೋರಾಟ ರೂಪಿಸುವ ಅಗತ್ಯವಿದೆ ಎಂದರು.  ಅರುಣ್ ಕುಮಾರ್ ನಾಗವತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾವಿತ್ರಿ ವಾಲ್ಮೀಕಿ ಸ್ವಾಗತಿಸಿದರು. ಚೈತ್ರಾ ಕೊರವರ್ ನಿರೂಪಿಸಿದರು.  

ವೀರನಗೌಡ ಎನ್‌., ವಿಠಲ ಗೌಳಿ, ಶೋಭಾ ದೇವರಮನಿ, ದ್ಯಾಮಣ್ಣ ಆರೇರ, ನಂಜುಂಡ ಬಿಳಿಗಾರ, ಗೌತಮ್ ಮಾಳಾಪುರ, ರಿಹಾನ್ ನದಾಫ್, ಲಲಿತಾ ಮೆಕ್ಕಿ, ಶಿವರಾಜ ಸಾವಕ್ಕನವರ, ಉದಯಕುಮಾರ್ ಆರ್‌., ಪ್ರದೀಪ ಪೂಜಾರ, ಮಂಜುನಾಥ್ ಡಿ., ಧನುಷ್ ದೊಡ್ಡಮನಿ, ನಾಗವೇಣಿ ಹೊಸೂರು, ಕೀರ್ತಿ ಇಟಗಿ, ಕವಿತಾ ಎಚ್‌., ನವೀನ್ ಏಕಳ್ಳಿಮನಿ, ರುಕ್ಮಿಣಿ ಎನ್‌. ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.