ತಾಯಿಯ ಋಣ ಎಂದಿಗೂ ತೀರಿಸಲಾಗದು: ಪ್ರಶಾಂತ ದೇಸಾಯಿ

A mother's debt can never be repaid: Prashant Desai

ಬೆಳಗಾವಿ 10: ತಾಯಿಯ ಋಣ ಎಂದಿಗೂ ತೀರಿಸಲಾಗದು ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಪ್ರಶಾಂತ ದೇಸಾಯಿ ಅವರು ಹೇಳಿದರು.  

ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದಿಂದ ಆಸ್ಪತ್ರೆಯ ಚರಕಾ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಾಯಂದಿರ ದಿನಾಚರಣೆಯನ್ನು ಕುರಿತು ಮಾತನಾಡುತ್ತಿದ್ದರು. ತನ್ನ ಕರುಳಬಳ್ಳಿಯಿಂದ ಬೆಳೆದ ಮಗುವನ್ನು ಒಬ್ಬ ಪ್ರಜೆಯಾಗಿ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದು, ತಾಯಿಯ ತ್ಯಾಗ, ಪ್ರೀತಿ, ಮಮತೆಯನ್ನು ನೆನೆಯುವದಕ್ಕಾಗಿ ಪ್ರತಿ ವರ್ಷ ಮೇ ತಿಂಗಳ 2ನೇ ಶನಿವಾರದಂದು ವಿಶ್ವದೆಲ್ಲೆಡೆ ವಿಶ್ವ ತಾಯಂದಿರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ತಾಯಿಯ ಮಮತೆಯನ್ನು ಪಡೆದು ಅವರಿಗೆ ಗೌರವ ಸಲ್ಲಿಸಲು ಸಿಕ್ಕಿರುವ ಈ ಅವಕಾಶಕ್ಕೆ ಚಿರ ಋಣಿ, ಅದೇ ರೀತಿ ಸುರಕ್ಷಿತ ತಾಯ್ತನವನ್ನು ಅನುಭವಿಸುವಂತೆ ಮಾಡಲು ಗರ್ಭಚೈತನ್ಯವೆಂಬ ವಿನೂತನ ಮಾದರಿಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕೋರಿದರು.   

ಅಧ್ಯಕ್ಷತೆಯನ್ನು ವಹಿಸಿದ್ದ್ದ ಆಸ್ಪತ್ರೆಯ ವೈದ್ಯಕೀಯ ಮುಖ್ಯಾಧಿಕಾರಿ ಡಾ. ಆರ್ ಜಿ ನೆಲವಿಗಿ ಅವರು ಮಾತನಾಡುತ್ತ  ಒಬ್ಬ ವ್ಯಕ್ತಿಯ ಜೀವನ ರೂಪಿಸುವಲ್ಲಿ ತಾಯಿ ತಂದೆಯರ ಪಾತ್ರ ನಗಣ್ಯ. ಅವರು ಮಗುವಿನ ಬೆಳವಣಿಗೆಗೆ ಪಟ್ಟ ಕಷ್ಟ, ನೋವುಗಳು ಆತನು ದೇಶಕ್ಕೆ ಒಬ್ಬ ಉಪಯುಕ್ತ ಪ್ರಜೆಯಾದಾಗಲೇ ಪಾವನವಾಗುವದು. ನಮ್ಮ ವೃತ್ತಿಗೆ ನಾವು ಸಲ್ಲಿಸುವ ಗೌರವವೇ ನಮ್ಮ ಪೋಷಕರಿಗೆ ನಾವು ಸಲ್ಲಿಸುವ ನಿತ್ಯಪೂಜೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಅರವಿಂದ ಸಂಗೊಳ್ಳಿ ವುರ್ಶಿಫ ಪುಲ್ ಮಾಸ್ಟರ ಲಾಡ್ಜ ವಿಕ್ಟೋರಿಯಾ 9 ಬೆಳಗಾವಿ ಅವರು ಮಾತನಾಡುತ್ತ ತಾಯಿಯಿ ಮಕ್ಕಳಿಗೆ  ಜನ್ಮ ನೀಡುತ್ತಾರೆ, ಮಕ್ಕಳ ಸಂತೋಷದಲ್ಲಿ ತಮ್ಮ ಖುಷಿಯನ್ನು ಕಾಣುತ್ತಾರೆ. ಮಕ್ಕಳಿಗೆ ಉತ್ತಮ ಆರೋಗ್ಯ, ಶಿಕ್ಷಣ, ಭವಿಷ್ಯ ಸಿಗಲಿ ಎಂದು ಹಗಲಿರುಳು ಶ್ರಮಿಸುತ್ತಾರೆ. ಅವರ ತ್ಯಾಗಮನೋಭಾವಗಳಿಗೆ ಮನಃ ಪೂರ್ವಕವಾಗಿ ವಂದನೆಗಳು ಎಂದು ನಮಸಿದರು.  

ಆಸ್ಪತ್ರೆಯ ಸ್ತ್ರೀರೊಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ. ಸತೀಶ ದಾಮಣಕರ ಅವರು ಗರ್ಭಚೈತನ್ಯ ಕಾರ್ಯಕ್ರಮದ ಬಗ್ಗೆ  ವಿವರಣೆ ನೀಡುತ್ತ  ಗರ್ಭಚೈತನ್ಯ ಕಾರ್ಯಕ್ರಮವು ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಆಗಬಹುದಾದ ಹಿಂಜರಿಕೆ, ಭಯ, ಹೆರಿಗೆಯ ಬಗೆಗಿನ ತಪ್ಪುಕಲ್ಪಣೆಗಳನ್ನು ದೂರಗೋಳಿಸಿ, ಈ ಸಮಯದಲ್ಲಿ ಸೇವಿಸಬೇಕಾದ ಆಹಾರಗಳು, ವ್ಯಾಯಾಮ, ಸರಳ ಯೋಗಾಭ್ಯಾಸ, ವೈಯಕ್ತಿಕ ಸ್ವಚ್ಛತೆ ಹೀಗೆ ಅನೇಕ ವಿಷಯಗಳಿಂದ ಗರ್ಭಿಣಿಯರಲ್ಲಿ ಆತ್ಮವಿಶ್ವಾಸವನ್ನು ತುಂಬಿ, ಸುಲಭವಾಗಿ ಹೆರಿಗೆಗೆ ಅನಿಗೊಳಿಸಿ, ಹೆರಿಗೆಯ ನಂತರವೂ ಸಹ ಯಾವ ರೀತಿಯಾಗಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಶಿಕ್ಷಣ ನೀಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಪ್ರತಿ ತಿಂಗಳ 2ನೇ ಶನಿವಾರದಂದು ಹಮ್ಮಿಕೊಳ್ಳಲಾಗುವದು ಎಂದು ವಿವರಣೆ ನೀಡಿದರು.  

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಯಂದಿರಿಗೆ ಉಚಿತವಾಗಿ ಆರೋಗ್ಯ ಕಾಳಜಿ ಕಿಟ್‌ನ್ನು ವಿತರಿಸಲಾಯಿತು. 

ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ವೈದ್ಯರಾದ. ಡಾ. ಅಮೃತಾ ಸಾಲ್ಕರ, ಡಾ. ಕೆ ಎನ್ ಹೋಳಿಕಟ್ಟಿ, ಡಾ. ಸಂಗೀತಾ, ಡಾ. ಸಯ್ಯದಾ ಸೇರಿದಂತೆ ಉಳಿದ ವೈದ್ಯಕೀಯ ವೈದ್ಯಕೀಯೇತರ ಸಿಬ್ಬಂದಿ ಮತ್ತು ಲಾಡ್ಜ ವಿಕ್ಟೋರಿಯಾ 9 ಬೆಳಗಾವಿಯ ಮಹಿಳಾ ಮತ್ತು ಸ್ತ್ರೀ ಪದಾಧಿಕಾರಿಗಳು, ಗರ್ಭಿಣಿಯರು, ತಾಯಂದಿರು  ಮತ್ತು ಪೋಷಕರು ಭಾಗವಹಿಸಿದ್ದರು.  

ಸಂತೋಷ ಇತಾಪೆ ನಿರೂಪಿಸಿದರು. ಡಾ. ಸತೀಶ ಧಾಮಣಕರ ಸ್ವಾಗತಿಸಿದರು. ಡಾ. ಗೀತಾಂಜಲಿ ತೋಟಗಿ ವಂದಿಸಿದರು.