ಹಿರಿಯ ಶಿಕ್ಷಣತಜ್ಞ ಡಾ. ಜಿ.ಬಿ. ಕಲಕೋಟಿ ಅವರಿಗೆ ಭಾವಪೂರ್ಣ ನುಡಿನಮನ

ಹಿರಿಯ ಶಿಕ್ಷಣತಜ್ಞ ಡಾ. ಜಿ.ಬಿ. ಕಲಕೋಟಿ ಅವರಿಗೆ ಭಾವಪೂರ್ಣ ನುಡಿನಮನ  A heartfelt tribute to veteran educationist Dr. G.B. Kalkoti

ಲೋಕದರ್ಶನ ವರದಿ 

ಹುಬ್ಬಳ್ಳಿ, ಜು.20: ಹಿರಿಯ ಶಿಕ್ಷಣತಜ್ಞ, ಕೆ.ಎಲ್‌.ಇ. ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಿ.ಬಿ. ಕಲಕೋಟಿ ಅವರ ಶಿಕ್ಷಣ ಕ್ಷೇತ್ರದ ಸೇವೆಯನ್ನು ಸ್ಮರಿಸಿ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಭಾವಪೂರ್ಣ ನುಡಿನಮನ ಕಾರ್ಯಕ್ರಮ ನಡೆಯಿತು.  

ಹಾವೇರಿ ಜಿಲ್ಲೆಯ ನೆಗಳೂರು ಸಂಸ್ಥಾನ ಹಿರೇಮಠದ ಷಟ್ಸ್ಥಳ ಬ್ರಹ್ಮಗುರು ಶಾಂತೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೂರಾರು ಶಿಷ್ಯರು, ಅಭಿಮಾನಿಗಳು, ಬಂಧುಗಳು ಹಾಗೂ ಗಣ್ಯರು ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.  

ಸುಮಾರು 30 ವರ್ಷಗಳ ಕಾಲ ಕೆ.ಎಲ್‌.ಇ. ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಕಲಕೋಟಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಎನ್ಸಿಸಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿ ಶಿಸ್ತು, ಸಮಯಪ್ರಜ್ಞೆ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರಾಗಿದ್ದರು ಎಂದು ವಕ್ತಾರರು ಸ್ಮರಿಸಿದರು.  

ಕಾರ್ಯಕ್ರಮದಲ್ಲಿ ಡಾ. ಕಲಕೋಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಆದರ್ಶ ಶಿಕ್ಷಕತ್ವ ಹಾಗೂ ಸಮಾಜಮುಖಿ ಸೇವೆಯನ್ನು ಕೊಂಡಾಡಲಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಯಿತು.  

ಕಾರ್ಯಕ್ರಮದಲ್ಲಿ ಡಾ. ಸುರೇಶ್ ಡಿ. ಹೊರಕೇರಿ, ಡಾ. ಲಿಂಗರಾಜ ಅಂಗಡಿ, ಪ್ರೊ. ಕೆ.ಎಸ್‌. ಕೌಜಲಗಿ, ಡಾ. ಲಿಂಗರಾಜ ಡಿ. ಹೊರಕೇರಿ, ಡಾ. ಮಹೇಶ್ ಡಿ. ಹೊರಕೇರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಣತಜ್ಞರು ಹಾಗೂ ಗಣ್ಯರು ಉಪಸ್ಥಿತರಿದ್ದರು.