ಮುದ್ದೇಬಿಹಾಳದಲ್ಲಿ ಎ.ಎಸ್‌. ಪಾಟೀಲ ನಡಹಳ್ಳಿಯ ಆಕ್ರೋಶ: ಅತಿವೃಷ್ಟಿ ಹಾನಿಗೆ ಸ್ಪಂಧಿಸದ ಆಡಳಿತ, ಶಾಸಕರ ವಿರುದ್ಧ ವಾಗ್ದಾಳಿ

ಮುದ್ದೇಬಿಹಾಳದಲ್ಲಿ ಎ.ಎಸ್‌. ಪಾಟೀಲ ನಡಹಳ್ಳಿಯ ಆಕ್ರೋಶ: ಅತಿವೃಷ್ಟಿ ಹಾನಿಗೆ ಸ್ಪಂಧಿಸದ ಆಡಳಿತ, ಶಾಸಕರ ವಿರುದ್ಧ ವಾಗ್ದಾಳಿ A.S. Patil Nadahalli's anger in Muddebihal: Attack on the administration and MLAs for not responding

ಮುದ್ದೇಬಿಹಾಳ 29: ಮುದ್ದೇಬಿಹಾಳ ಕ್ಷೇತ್ರ ಹಾಗೂ ಇಡೀ ಉತ್ತರ ಕರ್ನಾಟಕದ ರೈತರು ನಿರಂತರ ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವೇಳೆ, ತಾಲೂಕಾಡಳಿತ ಮತ್ತು ಶಾಸಕರು ರೈತರ ಅಳಲಿಗೆ ಸ್ಪಂಧಿಸದಿರುವುದಕ್ಕೆ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  

ಸೋಮವಾರ ಬಿಜೆಪಿ ಕಾರ್ಯಾಲಯದಲ್ಲಿ ಮುಖಂಡರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು ಹಿ “ಮತ್ತೊಮ್ಮೆ ಮಳೆ ವಿಪತ್ತು ಎದುರಾಗಿದೆ. ಒಂದೂವರೆ ಲಕ್ಷ ಎಕರೆಯಷ್ಟು ಬೆಳೆ ನಾಶವಾಗಿದೆ. ಸುಮಾರು 1500 ಮನೆಗಳು ಹಾನೀಗೀಡಾಗಿವೆ. ಆದರೆ ಸ್ಥಳೀಯ ಶಾಸಕರು, ತಾಲೂಕಾಡಳಿತ, ಕೃಷಿ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ನಿಶ್ಚಿಂತೆಯಿಂದ ಕುಳಿತಿದ್ದಾರೆ. ಬಡ ರೈತರ ಕಣ್ಣೀರನ್ನು ಒರೆಸಲು ಸರ್ಕಾರ ಮುಂದೆ ಬಂದಿಲ್ಲ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಬಡವರ ಪರ ಸ್ಪಂಧಿಸಲು ಆಗದೆ ಕುಳಿತಿದೆ” ಎಂದು ಹರಿಹಾಯ್ದರು.  

“ಯಡಿಯೂರ​‍್ಪನವರ ಅವಧಿಯಲ್ಲಿ ಸ್ವತಃ ಸಿಎಂ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ವಿತರಿಸಿದ್ದರು. ಆದರೆ ಇಂದಿನ ಸಿಎಂ ರೈತರ ಸ್ಥಿತಿ ತಿಳಿಯಲೂ ಮುಂದೆ ಬರದೆ ಕುಳಿತಿದ್ದಾರೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗಳಲ್ಲಿ ಪರಿಹಾರ ವಿತರಿಸಲು ಒಂದು ರೂಪಾಯಿ ಬಿಡಿಗಾಸೂ ಇಲ್ಲ. ಮೊಸಳೆ ದಾಳಿಯಿಂದ ಮರಣ, ಮಳೆಗೆ ಮನೆ ಕುಸಿತ, ತೋಳ ದಾಳಿಯಿಂದ ಕುರಿಗಳ ಸಾವು, ಭೀಮಾ ಪ್ರವಾಹದಲ್ಲಿ ಯುವಕನ ಮರಣ ಹಿ ಇಂತಹ ಘಟನೆಗಳು ನಡೆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ” ಎಂದು ಖಂಡಿಸಿದರು.  

ಶಾಸಕರ ವಿರುದ್ಧ ಕಿಡಿಕಾರಿದ ನಡಹಳ್ಳಿ “ಸ್ಥಳೀಯ ಶಾಸಕರು ಎರಡು ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಆದರೆ ಒಂದೇ ಒಂದು ಹಳ್ಳಿಗೂ ಭೇಟಿ ನೀಡಿ ರೈತರ ಸಂಕಷ್ಟ ತಿಳಿಯಲು ಮುಂದೆ ಬಂದಿಲ್ಲ. ಸಾಧನೆಯ ಮಾತು ಬಿಟ್ಟು ಅಜ್ಜ-ಅಜ್ಜಿ ಕಥೆ ಹೇಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಜನ ಮತ ಹಾಕಿದ್ದು ಕಥೆ ಕೇಳಲು ಅಲ್ಲ, ನಿಮ್ಮ ಕಾರ್ಯ ತಿಳಿಯಲು. ಮುಂದಿನ ದಿನಗಳಲ್ಲಿ ನಿಮ್ಮ ಕುಟುಂಬ ನಡೆಸಿದ ದೌರ್ಜನ್ಯಗಳನ್ನೂ ಬಯಲಿಗೆಳೆದು ತೋರಿಸುತ್ತೇನೆ” ಎಂದು ನಡಹಳ್ಳಿಯವರು ಎಚ್ಚರಿಕೆ ನೀಡಿದರು.  

ಸಮೀಕ್ಷೆ ಧರ್ಮ ಕಾಲಂ ವಿವಾದ ಹಿ “ಹಿಂದು ಎಂದೇ ಬರೆಸಿ” ಬಣಜಿಗ ಸಮಾಜ ಕಾರ್ಯಕ್ರಮದಲ್ಲಿ ಶಾಸಕರ ಮಾತುಗಳನ್ನು ಟೀಕಿಸಿದ ನಡಹಳ್ಳಿಯವರು ಹಿ “ಕೆಲವು ಕಾಂಗ್ರೆಸ್ ನಾಯಕರು ಸಮೀಕ್ಷೆಯಲ್ಲಿ ‘ಹಿಂದು’ ಬರೆಸಬೇಡಿ, ‘ಲಿಂಗಾಯತ’ ಬರೆಸಿ ಎಂದು ಹೇಳುತ್ತಿದ್ದಾರೆ. ಇದು ಸಂಪೂರ್ಣ ತಪ್ಪು. ಹಿಂದುಗಳು ಹಿಂದೂ ಎಂದೇ ಬರೆಸುತ್ತಾರೆ. ಸಮಾಜವನ್ನು ವಿಭಜಿಸಲು ಕೆಲವು ದಾರಿ ತಪ್ಪಿದವರು ಮಾಡುತ್ತಿರುವ ಕುತಂತ್ರಕ್ಕೆ ಜನ ಮನ್ನಣೆ ಕೊಡುವುದಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.  

ಉಗ್ರ ಹೋರಾಟದ ಎಚ್ಚರಿಕೆ: “ದಸರಾ ಹಬ್ಬ ಮುಗಿದ ಕೂಡಲೇ ಶಾಸಕರು, ತಾಲೂಕಾಡಳಿತ, ಕೃಷಿ ಇಲಾಖೆ ಅಧಿಕಾರಿಗಳು ಬಾಧಿತ ರೈತರ ನೆರವಿಗೆ ಧಾವಿಸಿ ಪರಿಹಾರ ನೀಡುವ ಕೆಲಸ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಉಗ್ರ ಹೋರಾಟ ನಡೆಸಲು ನಾನು ಹಿಂಜರಿಯುವುದಿಲ್ಲ” ಎಂದು ನಡಹಳ್ಳಿಯವರು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಡಲಾಧ್ಯಕ್ಷ ಜಗದೀಶ ಪಂಪಣ್ಣವರ, ಕಾರ್ಯದರ್ಶಿ ಸಂಜು ಬಾಗೇವಾಡಿ, ರೈತಮೋರ್ಚಾ ತಾಲೂಕಾಧ್ಯಕ್ಷ ಶಂಕರಗೌಡ ಶಿವಣಗಿ, ಯುವಮೋರ್ಚಾ ಅಧ್ಯಕ್ಷ ಗೀರೀಶಗೌಡ ಪಾಟೀಲ ಹಿರೇಮುರಾಳ, ಜಿಲ್ಲಾ ಮುಖಂಡ ಅಶೋಕ ರಾಠೋಡ, ನಾಗೇಶ ಕವಡಿಮಟ್ಟಿ ಮುಂತಾದವರು ಉಪಸ್ಥಿತರಿದ್ದರು.