ಮುತ್ತಿನಂತ ಅತ್ತಿಗೆ ನಾಟಕದ 50ನೇ ಪ್ರದರ್ಶನ

ಮುತ್ತಿನಂತ ಅತ್ತಿಗೆ ನಾಟಕದ 50ನೇ ಪ್ರದರ್ಶನ 50th performance of the play 'Muttinanta Attige'

ಲೋಕದರ್ಶನ ವರದಿ, 

ಜಮಖಂಡಿ 13: ರಂಗಭೂಮಿ ಕಲಾವಿದರು ನೂರಾರು ಸಂಭಾಷಣೆಗಳನ್ನು ಕಂಠಪಾಠ ಮಾಡಿಕೊಂಡು ನೇರವಾಗಿ ಅಭಿನಯಿಸಬೇಕಾಗುತ್ತದೆ. ಆದ್ದರಿಂದ ರಂಗಭೂಮಿ ಕಲಾವಿದರ ಪ್ರತಿಭೆ ಅತ್ಯಂತ ವಿಶಿಷ್ಟವಾದದ್ದು ಎಂದು ಕಾಂಗ್ರೆಸ್ ಮುಖಂಡ ಸುಶೀಲಕುಮಾರ ಬೆಳಗಲಿ ಹೇಳಿದರು. ನಗರದಲ್ಲಿ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘ, ಜೇವರ್ಗಿ ವತಿಯಿಂದ ರಾಜಣ್ಣ ಜೇವರ್ಗಿ ರಚಿಸಿರುವ ‘ಮುತ್ತಿನಂತ ಅತ್ತಿಗೆ’ ನಾಟಕದ 50ನೇ ಪ್ರದರ್ಶನದ ವಿಶೇಷ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅಶ್ಲೀಲತೆ ಮತ್ತು ಅಗ್ಗದ ಹಾಸ್ಯಕ್ಕೆ ಒತ್ತು ನೀಡುವ ನಾಟಕಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ರಾಜಣ್ಣ ಜೇವರ್ಗಿ ಅವರ ತಂಡ ಸಾಮಾಜಿಕ ಮೌಲ್ಯಗಳನ್ನು ಒಳಗೊಂಡ ನಾಟಕಗಳನ್ನು ಪ್ರದರ್ಶಿಸುತ್ತಿದೆ. ಮೌಲ್ಯಾಧಾರಿತ ಹಾಗೂ ಅಶ್ಲೀಲತೆಯಿಂದ ದೂರವಿರುವ ರಂಗಭೂಮಿ ಉಳಿಯಬೇಕಾದರೆ ಜನರು ಟಿಕೆಟ್ ಖರೀದಿಸಿ ನಾಟಕಗಳನ್ನು ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು. ಅನೀಲ ಸಿಂಧೂರ, ಕಿರಣ ಕವಟಗೊಪ್ಪ ಮಾತನಾಡಿದರು, ಓಲೇಮಠದ ಆನಂದ ದೇವರು ಆಶೀರ್ವಚನ ನೀಡಿದರು. ಬಸವರಾಜ ಬಳಗಾರ ನಿರೂಪಿಸಿದರು. ಶಿವಾನಂದ ಕೊಣ್ಣೂರ ಸ್ವಾಗತಿಸಿದರು. ಸುಜಾತಾ ಗುಬ್ಬಿ ವಂದಿಸಿದರು.