ಹಾಸ್ಯಕೂಟದ 12 ನೇ ವಾರ್ಷಿಕೋತ್ಸವ ಸಂಭ್ರಮ

ಹಾಸ್ಯಕೂಟದ 12 ನೇ ವಾರ್ಷಿಕೋತ್ಸವ ಸಂಭ್ರಮ 12th anniversary celebration of comedy club

ಲೋಕದರ್ಶನ ವರದಿ 

ಬೆಳಗಾವಿ 29- ಹಾಸ್ಯ ಭಾಷಣ, ಹರಟೆ, ಮಕ್ಕಳಿಗಾಗಿ ಹಾಸ್ಯಭಾಷಣ ಸ್ಪರ್ಧೆ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಾಸ್ಯಕೂಟ ಹಮ್ಮಿಕೊಳ್ಳುತ್ತ ಬಂದಿದೆ. ಸತತವಾಗಿ 12 ವರ್ಷಗಳ ಕಾಲ ಪತ್ರಿತಿಂಗಳು ಹಮ್ಮಿಕೊಳ್ಳುತ್ತ ಬಂದಿರುವುದು ದೊಡ್ಡ ಸಾಹಸವೇ ಸರಿ. ಈ ಅಮೋಘವಾದ ಸೇವೆ ಕುರಿತು ನನಗೆ ಮೆಚ್ಚುಗೆ, ಗೌರವ ಎರಡೂ ಇದೆ ಎಂದು ಖ್ಯಾತ ನಗೆ ಬರೆಹಗಾರ ಎಂ. ಎಸ್‌. ನರಸಿಂಹಮೂರ್ತಿಯವರು   ಹಾಸ್ಯಕೂಟ ಸೇವೆಯನ್ನು ಕೊಂಡಾಡಿದರು. 

ಹಿಂದವಾಡಿಯಲ್ಲಿರುವ ಐ.ಎಂ.ಇ.ಆರ್‌. ಸಬಾಭವನದಲ್ಲಿ ಇದೇ ದಿ. 27 ಸೋಮವಾರದಂದು ಹಾಸ್ಯಕೂಟ 12 ನೇ ವಾರ್ಷಿಕೋತ್ಸವನು ಆಚರಿಸಲಾಯಿತು. ಈ ಸಂದರ್ಭದಲ್ಲಿ “ಹೆಂಡತಿ ಜೀವ ಹಿಂಡುತಿ” ಎಂಬ ಹರಟೆ ಕಾರ‌್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹರಟೆಯ ಸೂತ್ರಧಾರರಾಗಿ ಆಗಮಿಸಿದ್ದ ಖ್ಯಾತ ಹಾಸ್ಯಲೇಖಕ ಎಂ. ಎಸ್‌.ನರಸಿಂಹಮೂರ್ತಿಯವರು ಮೇಲಿನಂತೆ ಅಭಿಪ್ರಾಯಪಟ್ಟರು.  ಹರಟೆಯೆನ್ನುವುದು ಎಲ್ಲರೂ ಸೇರಿ ಸಂಭ್ರಮಿಸುವ ಸಮಯ. ವೇದಿಕೆಯಿಂದ ಕೆಳಗಿಳಿದೊಡನೆ ಎಲ್ಲರೂ ಒಂದೇ ಎಂದು ಕಿಕ್ಕಿರದ ಹಾಸ್ಯಾಸಕ್ತರ ಮಧ್ಯ ಹೇಳಿದ ಅವರು ಹಲವಾರು ನಗೆಪ್ರಸಂಗಗಳನ್ನು ಹಂಚಿಕೊಂಡು ಜನರನ್ನು ನಗೆಗಡಲಲ್ಲಿ ತೇಲಿಸಿದರು.  

 “ಹೆಂಡತಿ ಜೀವ ಹಿಂಡುತ್ತಾಳೆ” ಎಂದು ಗುಂಡೇನಟ್ಟಿ ಮಧುಕರ, ಪ್ರೊ. ಜಿ. ಕೆ. ಕುಲಕರ್ಣಿ, ಡಾ. ಅರವಿಂದ ಕುಲಕರ್ಣಿ, ರಾಜೇಂದ್ರ ಭಂಡಾರಿ ವಿನೋದಮಯವಾಗಿ ಮಾತನಾಡಿದರು. ಅರವಿಂದ ಹುನಗುಂದ, ಜಿ. ಎಸ್‌. ಸೋನಾರ, ಎಂ. ಬಿ. ಹೊಸಳ್ಳಿ, ತಾನಾಜಿ, “ಹೆಂಡತಿ ಜೀವ ಹಿಂಡುವುದಿಲ್ಲ” ಎಂದು ತುಂಬ ಹಾಸ್ಯಮಯವಾಗಿ ಮಾತನಾಡಿ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಹಿರಿಯ ಪತ್ರಕರ್ತ, ಲೇಖಕ ಎಲ್‌. ಎಸ್‌. ಶಾಸ್ತ್ರಿಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು. 

ಇದೇ ಸಂದರ್ಭದಲ್ಲಿ ಎಂ. ಎಸ್‌. ನರಸಿಂಹಮೂರ್ತಿ ದಂಪತಿಗಳನ್ನು ಶಾಲನ್ನು ಹೊದಿಸಿ,  ಪೇಟ ಹಾಕಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮತಿ ದೀಪಾ ಪದಕಿ ತುಂಬ ಸುಶ್ರಾವ್ಯವಾಗಿ ಪ್ರಾರ್ಥನಾ ಗೀತಿಯನ್ನು ಹಾಡಿದರು. ಚಿದಂಬರ ಮುನವಳ್ಳಿ ಪರಿಚಯಿಸಿದರು. ಪಾಂಡುರಂಗ ಮಾರಿಹಾಳ ವಂದಿಸಿದರು.