ಯುಟೂಬರ್ ಮಾಡಿದ್ದ ಸೈಟ್ ಅತಿಕ್ರಮಣ ತೆರವು: ಮೂರು ದಿನಗಳಿಂದ ಹೋರಾಟ ಮಾಡಿದ್ದ ಮಹಿಳೆಯರಿಗೆ ಗೆಲುವು

ಯುಟೂಬರ್ ಮಾಡಿದ್ದ ಸೈಟ್  ಅತಿಕ್ರಮಣ ತೆರವು:  ಮೂರು ದಿನಗಳಿಂದ ಹೋರಾಟ ಮಾಡಿದ್ದ ಮಹಿಳೆಯರಿಗೆ ಗೆಲುವು YouTuber's site encroachment cleared: Victory for women who fought for three days

              ಕಾರವಾರ 14: ದಾಂಡೇಲಿ  ಡಿ.ಎಫ್‌.ಎ. ಟೌನ್ ಶಿಪ್ ನಲ್ಲಿ ಯುಟ್ಯೂಬರ್ ಬೆಲೆ ಬಾಳುವ ನಿವೇಶನವನ್ನು ಬಾಂಬು ಗೂಟ  ಹುಗಿದು   ಅತಿಕ್ರಮಿಸಿದ್ದನ್ನು,  ನಗರಸಭೆ ಪೌರಾಯುಕ್ತರು ಮತ್ತು ಸಿಬ್ಬಂದಿ  ತೆರವುಗೊಳಿಸಿದ ಘಟನೆ ಶುಕ್ರವಾರ ಜರುಗಿದೆ. ಯುಟೂಬರ್  ಒಬ್ಬ ತನ್ನ  ಪತ್ನಿ ಪದ್ಮಶ್ರೀ ಜಿನರಾಜ ಹೆಗ್ಡೆ ಹೆಸರಿನಲ್ಲಿ ದಾಂಡೇಲಿ ನಗರಸಭೆ ಲೆಟರ್ ಹೆಡ್ ನಲ್ಲಿ ನಿವೇಶನ ಹಂಚಿಕೆ ಪತ್ರ ಪಡೆದುಕೊಂಡಿದ್ದರು. ಆದರೆ ದಾಂಡೇಲಿ ನಗರಸಭೆಯಲ್ಲಿ ಈ ಬಗ್ಗೆ  ಯಾವುದೇ ಅಧಿಕೃತ ದಾಖಲೆಗಳು, ಸ್ವಾಧೀನ ಪತ್ರ ಇಲ್ಲದೇ  ಸೈಟ್ ಅತಿಕ್ರಮಣ ಮಾಡಿದ್ದನ್ನು  ಖಂಡಿಸಿ, ದಾಂಡೇಲಿಯ ನಿವೇಶನ ರಹಿತ ಮಹಿಳೆಯರು ಪ್ರತಿಭಟನೆಗೆ ಇಳಿದಿದ್ದರು. ನಮಗೂ ದಾಂಡೇಲಿಯಲ್ಲಿ ಮನೆ ಕಟ್ಟಲು ಜಾಗೆ ಕೊಡಿ ಎಂದು ಸ್ಥಳೀಯ ನಿವಾಸಿ ಮಹಿಳೆಯರ ಪ್ರತಿಭಟನೆಯು ಮೂರನೇ ದಿನ ತಲುಪಿತ್ತು.  

        ನ. 14  ಶುಕ್ರವಾರ   ಬೆಳಿಗ್ಗೆ ಹೋರಾಟವನ್ನು ತೀವ್ರಗೊಳಿಸಿ ಯುಟ್ಯೂಬರ್ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯ ಹಲವಾರು ಸಂಘಟನೆಗಳ ಮುಖಂಡರುಗಳು ಪ್ರತಿಭಟನಾನಿರತ   ಮಹಿಳೆಯರ ಬೆಂಬಲಕ್ಕೆ ನಿಂತು ಗಟ್ಟಿ ಧ್ವನಿಯಿಂದ ಮಾತನಾಡಿ ನಗರಸಭಾ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.ಮಧ್ಯಾಹ್ನದ ವೇಳೆಗೆ ಪ್ರತಿಭಟನಾನಿರತ ಮಹಿಳೆಯರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಪೋಲಿಸರು ಪಿ.ಎಸ್‌.ಐ ಅಮೀನ್ ಅತ್ತಾರ ನೇತ್ರತ್ವದಲ್ಲಿ ಸ್ಥಳಕ್ಕಾಗಮಿಸಿ ಹೋರಾಟಗಾರ ಮಹಿಳೆಯರ ಮನವೊಲಿಸಿ ಶಾಂತತೆ ಕಾಪಾಡಿದರು. ಅಷ್ಟರಲ್ಲೆ ನಗರಸಭಾ ಪೌರಾಯುಕ್ತರು, ಮ್ಯಾನೇಜರ್, ಸಿಬ್ಬಂಧಿಗಳೊಂದಿಗೆ ಆಗಮಿಸಿ ಹೋರಾಟ ನಿರತ ಮಹಿಳೆಯರ ಅಹವಾಲುಗಳನ್ನು ಕೇಳಿ ತಿಳಿದುಕೊಂಡು ನಿವೇಶನ ರಹಿತರಿಗೆ ಪರೀಶೀಲನೆಯಿಂದ ಮನೆ ಮತ್ತು ನಿವೇಶನ ನೀಡಲು ನಗರದಲ್ಲಿ ಈಗಾಗಲೇ 10 ಎಕರೆಯಷ್ಟು ಜಾಗೆಯನ್ನು ಗುರುತಿಸಲಾಗಿದೆ. ನಿವೇಶನ ರಹಿತರಾದ ನೀವೆಲ್ಲರೂ ಅರ್ಜಿಗಳನ್ನು ನೀಡಿ. ಶಾಸಕ ಆರಿ​‍್ವ.ದೇಶಪಾಂಡೆ ಅವರು ನಿವೇಶನ ರಹಿತರ ಅರ್ಜಿಗಳನ್ನು ಸ್ವೀಕರಿಸಿ.

          ಅವರೆಲ್ಲರಿಗೆ ನಿವೇಶನ ನೀಡುವ ಭರವಸೆಯನ್ನು ನೀಡಿರುವುದಾಗಿ ತಿಳಿಸಲು ಹೇಳಿದ್ದಾರೆ. ನಿವೇಶನ, ಮನೆ ಹಂಚಿಕೆಯ ಕುರಿತು ವಿವರಿಸಿದರು. ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಪೌರಾಯುಕ್ತರ ಮನವಿಯನ್ನು ಒಪ್ಪದ ಮಹಿಳೆಯರು,  ಅತಿಕ್ರಮಣ ಮಾಡಿ ಬೇಲಿ ಹಾಕಿದವರ ಹೆಸರು ಬಹಿರಂಗ ಪಡಿಸುವಂತೆ ಆಗ್ರಹಿಸಿ ಅದನ್ನು ಕಿತ್ತೆಸೆಯುವಂತೆ ಒತ್ತಾಯಿಸಿದರು. ಸೈಟ್ ಪಡೆದವರ ಹೆಸರು ಹೇಳದಿದ್ದರೆ , ನಾವು ಅದರ ಪಕ್ಕದಲ್ಲಿ ಜಾಗೆ ಅತಿಕ್ರಮಿಸುತ್ತೆವೆ. 2006 ರಿಂದ ಆಶ್ರಯಕ್ಕಾಗಿ ಅರ್ಜಿ ನೀಡುತ್ತಾ ಬಂದಿರುವ ನಮಗೆ ಜಾಗೆ ನೀಡದೆ ಬೇರೆ ಊರಿನಿಂದ ಬಂದು 2023ರಲ್ಲಿ ಅರ್ಜಿ ನೀಡಿದವನಿಗೆ ಜಾಗೆ ನೀಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಕಾರರ ಧ್ವನಿ ಏರುತ್ತಿದ್ದಂತೆ,  ಅಧಿಕಾರಿಗಳು , ಯುಟ್ಯೂಬರ್ ಹಾಗೂ  ಸ್ಟ್ರಿಂಜರ್  ಸಂದೇಶ ಜೈನ್ ಅವರ ಪತ್ನಿ ಪದ್ಮಶ್ರೀ ಹೆಸರು ಬಹಿರಂಗ ಮಾಡಿದರು. ಅಲ್ಲದೆ  ಅವರಿಗೆ ನಗರಸಭೆ ಲೆಟರ್ ಹೆಡ್ ನಲ್ಲಿ ನಿವೇಶನ ಹಂಚಿಕೆಪತ್ರ ನೀಡಿದ್ದು, ಯಾವುದೇ ಅಧಿಕೃತ ದಾಖಲೆಗಳಿಲ್ಲ ಎಂಬುದನ್ನು ನಗರಸಭೆ ಅಧಿಕಾರಿಗಳು ಪ್ರತಿಭಟನಾಕಾರರ ಎದುರು  ಸ್ಪಷ್ಟಪಡಿಸಿದರು. 

            ಈಗಾಗಲೇ ಯುಟ್ಯೂಬರ್ ಗಾಂಧಿನಗರದಲ್ಲಿ ಆಶ್ರಯ ಸೈಟ್ ಹೊಂದಿರುವ ಕುರಿತು ಮಾಹಿತಿ ಹೊರಬಿದ್ದಿದೆ. ಈ ಸಂದರ್ಭದಲ್ಲಿ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್, ಜೈಭೀಮ್ ಜಿಲ್ಲಾಧ್ಯಕ್ಷ ಸಂಜು ಕಾಂಬಳೆ, ಕರವೇಯ ಪ್ರವೀಣ ಕೊಠಾರಿ, ಆಶ್ರಯ ಸಮಿತಿ ಸದಸ್ಯ ಪ್ರಭುದಾಸ್ ಎನಿ ಬೇರಾ, ಉಮಾಕಾಂಬಳೆ, ರೇಣುಕಾ ಮಾದಾರ, ನಾಗಮ್ಮ ಹರಿಜನ ಈ ಸಂದರ್ಭದಲ್ಲಿ  ಮಾತನಾಡಿದರು.