ಬಾದಿಮನಾಳದಲ್ಲಿ ‘ಅಲಾಯಿ ದೇವರು’ ಪತ್ತೆ ಪ್ರಕರಣ: ಕನಸಿನ ಪವಾಡವಲ್ಲ, ನಾಟಕ ಬಹಿರಂಗ

ಬಾದಿಮನಾಳದಲ್ಲಿ ‘ಅಲಾಯಿ ದೇವರು’ ಪತ್ತೆ ಪ್ರಕರಣ: ಕನಸಿನ ಪವಾಡವಲ್ಲ, ನಾಟಕ ಬಹಿರಂಗ  The discovery of 'Alai Dev' in Badimanala: Not a miracle of dreams, drama revealed

            ಹನುಮಸಾಗರ  24:  ಸಮೀಪದ ಬಾದಿಮನಾಳ ಗ್ರಾಮದಲ್ಲಿ ಜಮೀನಿನ ಹುತ್ತದಲ್ಲಿ ‘ಅಲಾಯಿ ದೇವರು’ ಪತ್ತೆಯಾಗಿದೆ ಎಂಬ ಸುದ್ದಿ ಮೊದಲಿಗೆ ಪವಾಡದ ರೂಪದಲ್ಲಿ ಹರಿದಾಡಿದರೂ, ನಂತರ ನಡೆದ ಪರೀಶೀಲನೆಯಲ್ಲಿ ಇದು ಪೂರ್ವಯೋಜಿತ ನಾಟಕವಾಗಿರುವುದು ಬಹಿರಂಗವಾಗಿದೆ.ಬಾದಿಮನಾಳ ಗ್ರಾಮದ ಯಮನೂರ​‍್ಪ ಅವರ ಜಮೀನಿನಲ್ಲಿ ಹುತ್ತದೊಳಗೆ ಮೂರು ಅಲಾಯಿ ದೇವರ ಮೂರ್ತಿಗಳು ಪತ್ತೆಯಾಗಿವೆ ಎಂದು ಹೇಳಲಾಗಿತ್ತು. ರಾಮನಗೌಡ ಎಂಬವರು ಕನಸಿನಲ್ಲಿ ದೇವರು ಬಂದು ಸೂಚನೆ ನೀಡಿದ್ದಾನೆ ಎಂದು ಹೇಳಿಕೊಂಡು ಗ್ರಾಮಸ್ಥರೊಂದಿಗೆ ಹುತ್ತವನ್ನು ಅಗೆಸಿದ್ದರು. ಈ ಘಟನೆಯ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿದರು.

           ಗ್ರಾಮದಲ್ಲಿ ಮುಸ್ಲಿಮರ ಸಂಖ್ಯೆ ಇಲ್ಲದಿದ್ದರೂ ಹಿಂದೂಗಳು ಮೊಹರಂ ಆಚರಣೆ ಮಾಡುವ ಪರಂಪರೆ ಇದೆ. ಈ ಹಿನ್ನೆಲೆ ಪತ್ತೆಯಾದ ಅಲಾಯಿ ದೇವರ ಮೂರ್ತಿಗಳನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಗ್ರಾಮದ ಮಸೀದಿಗೆ ಸ್ಥಳಾಂತರಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಜನಸಾಗರವೇ ಮಸೀದಿಗೆ ಹರಿದುಬಂದಿತ್ತು.ಆದರೆ ನಂತರ ನಡೆದ ತನಿಖೆಯಲ್ಲಿ ಈ ಪವಾಡದ ಹಿಂದೆ ವಂಚನೆ ಇರುವುದಾಗಿ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಆಗೋಲಿ ಗ್ರಾಮದ ನಿವಾಸಿ ಮುತ್ತಪ್ಪ ಎಂಬ ವ್ಯಕ್ತಿ ಮುಂಚಿತವಾಗಿ ಅಲಾಯಿ ದೇವರ ಮೂರ್ತಿಗಳನ್ನು ತಂದು ಹುತ್ತದಲ್ಲಿ ಅಡಗಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

           ರಾಮನಗೌಡ ಹಾಗೂ ಮುತ್ತಪ್ಪ ಸೇರಿ ‘ಕನಸಿನ ಪವಾಡ’ ಎಂಬ ನಾಟಕವಾಡಿರುವುದು ಗ್ರಾಮಸ್ಥರ ಅನುಮಾನಕ್ಕೆ ಕಾರಣವಾಯಿತು.ಮಾಹಿತಿ ದೊರಕುತ್ತಿದ್ದಂತೆ ಪಿಎಸ್‌ಐ  ಹಾಗೂ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಹಂಪಿಯ ಪುರಾತತ್ವ ಇಲಾಖೆ ಅಧಿಕಾರಿಗಳಿಂದಲೂ ಮೂರ್ತಿಗಳ ಪರೀಶೀಲನೆ ನಡೆಯುತ್ತಿದ್ದು, ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಘಟನೆಯಿಂದ ಗ್ರಾಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ವದಂತಿಗಳಿಗೆ ಮರುಳಾಗದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.