ಜಗತ್ತಿನ ಅಭಿವೃದ್ಧಿಗೆ ಕಾರಣವಾಗಿರುವ ತಂತ್ರಜ್ಞಾನ ಸ್ಥಿರವಲ್ಲ: ಡಾ. ಎಸ್‌. ವಿದ್ಯಾಶಂಕರ

ಜಗತ್ತಿನ ಅಭಿವೃದ್ಧಿಗೆ ಕಾರಣವಾಗಿರುವ ತಂತ್ರಜ್ಞಾನ ಸ್ಥಿರವಲ್ಲ: ಡಾ. ಎಸ್‌. ವಿದ್ಯಾಶಂಕರ Technology that is driving the world's development is not static: Dr. S. Vidyashankar

ಬೆಳಗಾವಿ 19: ವಿಶ್ವದ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ಹಾಗೂ ಜೈವಿಕ ತಂತ್ರಜ್ಞಾನ ಪ್ರಮುಖವಾದವುಗಳಾಗಿವೆ. ಈ ಕ್ಷೇತ್ರಗಳಲ್ಲಿನ ಸಂಶೋಧನೆಗೆ ಸಂಬಂಧಿಸಿದಂತೆ ಅಮೇರಿಕಾ ಮೊದಲ ಸ್ಥಾನದಲ್ಲಿದ್ದರೆ, ಚೈನಾ ದ್ವಿತೀಯ ಸ್ಥಾನದಲ್ಲಿದ್ದು, ಭಾರತ 9ನೇ ಸ್ಥಾನದಲ್ಲಿದೆ. ಹೀಗಾಗಿ ಮುಂದುವರೆದ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ನಾವು ಜಗತ್ತನ್ನೇ ಆಳಬಲ್ಲೆವು ಎನ್ನುತ್ತಿವೆ. ಭಾರತ ಈ ಎಲ್ಲ ರಾಷ್ಟ್ರಗಳಿಗೆ ಪೈಪೋಟಿ ನೀಡಬೇಕೆಂದರೆ ಈ ಮೂರು ಕ್ಷೇತ್ರಗಳಲ್ಲಿ ಉನ್ನತ ಸಂಶೋಧನೆ ಮಾಡಬೇಕು. ತಂತ್ರಜ್ಞಾನ ನಿಂತ ನೀರಿನಂತೆ ಸ್ಥಿರವಾಗಿರುವುದಿಲ್ಲ ಬದಲಿಗೆ ಅದು ಪ್ರತಿನಿತ್ಯ ಬದಲಾಗುತ್ತಿರುತ್ತದೆ. ಯುವ ಸಂಶೋಧಕರು ಇದನ್ನರಿತು ಲಭ್ಯ ಅವಕಾಶಗಳನ್ನು ಬಳಸಿಕೊಂಡು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಮುನ್ನಡೆಸಬೇಕೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್ ವಿದ್ಯಾಶಂಕರ್ ಅಭಿಪ್ರಾಯಪಟ್ಟರು.  

ಅವರು ಇಂದು ಇಲ್ಲಿನ ಶಿವಬಸವ ನಗರದ ಎಸ್‌.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ 'ಪ್ರಥಮ ಅಂತಾರಾಷ್ಟ್ರೀಯ ಭವಿಷ್ಯಾತ್ಮಕ ತಂತ್ರಜ್ಞಾನಗಳ ಅಭಿವೃದ್ಧಿ ಸಮ್ಮೇಳನ'ವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದ ಮಾತನಾಡಿದ ಅವರು ಸಂಶೋಧನೆಗಳು ಪತ್ರಿಕಾವರದಿಗಳಿಗೆ ಮಾತ್ರ ಸೀಮಿತವಾಗಬಾರದು ಬದಲಿಗೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಭಾರತ ಅತಿ ಹೆಚ್ಚು ಸಕ್ಕರೆ ಕಾಯಿಲೆ ರೋಗಿಗಳನ್ನು ಹೊಂದಿದೆ. ತಂತ್ರಜ್ಞಾನದ ಸಂಶೋಧಕರು ಏಕಮುಖವಾಗಿ ಯೋಚಿಸದೇ ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದರು.  

ಇನ್ನೋರ್ವ ಅತಿಥಿ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಮಾತನಾಡಿ ಶಕ್ತಿಯ ಸದ್ಬಳಕೆ ಕುರಿತಾದ ದತ್ತಾಂಶಗಳು ದೇಶದಲ್ಲಿ ನಿಖರವಾಗಿ ಲಭ್ಯವಿರದ ಕಾರಣ ಅನೇಕ ರಾಜ್ಯಗಳು ಇಂದು ಶಕ್ತಿಯ ಕೊರತೆ ಅನುಭವಿಸುತ್ತಿವೆ. ಸಂಶೋಧಕರಾದವರಿಗೆ ದತ್ತಾಂಶಗಳ ದಾಖಲೀಕರಣ ಬಹಳ ಪ್ರಮುಖವಾದದು ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಸಂಶೋಧನಾ ಪಬಂಧಗಳ ಮಂಡನೆಯೇ ವಿದ್ಯಾರ್ಥಿಗಳ ಜೀವನದಲ್ಲಿ ಒಂದು ದೊಡ್ಡ ಸಾಧನೆ. ವಿದ್ಯಾರ್ಥಿ ದೆಸೆಯಲ್ಲಿಯೇ ದೊರೆತ ಸಂಶೋಧನಾ ಗುಣವನ್ನು ಪೋಷಿಸಿ, ರಾಷ್ಟ್ರ ಪ್ರಗತಿಗೆ ಸಹಕಾರಿಯಾಗುವ ಸಂಶೋಧನೆಗಳನ್ನು ಕೈಗೊಳ್ಳಲು ಪ್ರಯತ್ನಿಸಬೇಕು ಎಂದರು. ಎಸ್‌.ಜಿ.ಬಿ.ಐ.ಟಿ ಕಾಲೇಜಿನ ಸ್ಥಾನಿಕ ಆಡಳಿತ ಮನಡಳಿಯ ಅಧ್ಯಕ್ಷ ಡಾ. ಎಫ್‌. ವಿ. ಮಾನ್ವಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಆರ್‌. ಪಟಗುಂದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಡಾ. ಸುಪಣ್ಣ ಎಸ್‌. ಶಿರಗುಪ್ಪೆ, ಡಾ. ಶಂಕರಗೌಡ ಪಾಟೀಲ, ಡಾ. ಅಶೋಕ ಹುಲಗಬಾಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.