ರೈಲ್ವೆ ಸಂಘದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈಲ್ವೆ ಬೇಡಿಕೆಗಳಿಗೆ ಮನವಿ

ರೈಲ್ವೆ ಸಂಘದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈಲ್ವೆ ಬೇಡಿಕೆಗಳಿಗೆ ಮನವಿ Railway Association office bearers present a petition for railway demands at the District Collector

ವಿಜಯನಗರ 22:  ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಬಳ್ಳಾರಿ ಲೋಕಸಭಾ ಸದಸ್ಯರಾದ ಶ್ರೀ ಈ.ತುಕಾರಾಂ ಅವರನ್ನು ಭೇಟಿಯಾಗಿ ರೈಲ್ವೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. 

1) ಬೆಳಗಾವಿ-ಹೊಸಪೇಟೆ-ರಾಯಚೂರು-ಹೈದರಾಬಾದ್(ಮಣಗೂರು) ರೈಲುನ್ನು ಪುನರಾರಂಭಿಸುವ ಬಗ್ಗೆ. ಕಳೆದ 8 ವರ್ಷಗಳಿಂದ ಸಂಚರಿಸುತ್ತಿದ್ದ ಈ ರೈಲುನ್ನು ಕಳೆದ 6 ತಿಂಗಳ ಹಿಂದೆ ಯಾವುದೇ ಸಕಾರಣವಿಲ್ಲದೆ ರದ್ಧುಗೊಳಿಸಲಾಗಿದೆ. ಇದರಿಂದ ಉತ್ತರ ಕರ್ನಾಟಕದಿಂದ ಹೈದರಾಬಾದ್‌ಗೆ ನೇರ ಸಂಪರ್ಕ ಇಲ್ಲದಂತಾಗಿದೆ. ವಿಶೇಷವಾಗಿ ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಪ್ರತಿನಿತ್ಯ ಮಂತ್ರಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ಅನಾನುಕೂಲವಾಗಿದೆ. ಆದುದರಿಂದ ಸದ್ರಿ ರೈಲನ್ನು ಮೊದಲಿದ್ದಂತೆ ಪುನರಾರಂಭಿಸಬೇಕು. ಇಲ್ಲವೇ ಹುಬ್ಬಳ್ಳಿ-ರಾಯಚೂರು ನಡುವೆ ನೂತನ ರೈಲು ಆರಂಭಿಸಿದರೆ ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗುತ್ತದೆ. 

2) ಹೊಸಪೇಟೆ-ಕೊಟ್ಟೂರು-ದಾವಣಗೇರಾ ಮಾರ್ಗವಾಗಿ ಮಂಗಳೂರಿಗೆ ನೇರ ರೈಲು  

ಈ ರೈಲು ಆರಂಭಿಸಿದರೆ ವಿಶ್ವ ಪಾರಂಪರಿಕ ತಾಣವಾದ ಹಂಪಿ, ಹಾಸನ, ಬೇಲೂರು, ಹಳೇಬೀಡು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಮುಂತಾದ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ದೊರೆಯುತ್ತದೆ. ಅಲ್ಲದೇ ಶೈಕ್ಷಣಿಕ ಮತ್ತು ಬೃಹತ್ ಆಸ್ಪತ್ರೆ ಸ್ಥಳಗಳಾದ ಉಡುಪಿ, ಕರಾವಳಿ ಬಂದರು ನಗರ ಮಂಗಳೂರು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ನಡುವೆ ಸಂಪರ್ಕ ಉಂಟಾಗಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಆ ಜಿಲ್ಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿ, ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ದೊರೆಯುತ್ತದೆ. 

3) ಪ್ರಸ್ತುತ ಹೊಸಪೇಟೆ-ಸೊಲ್ಲಾಪುರದ ನಡುವೆ ಸಂಚರಿಸುತ್ತಿರುವ ರೈಲನ್ನು ಪಂಢರಪುರದವರೆಗೆ ವಿಸ್ತರಿಸಬೇಕೆಂಬುದು ಈ ಭಾಗದ ಅಸಂಖ್ಯಾತ ಪಾಂಡುರಂಗ ವಿಠಲ ಭಕ್ತಾದಿಗಳ ಕೋರಿಕೆಯಾಗಿದ್ದು ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಭಕ್ತಾದಿಗಳ ಆಗ್ರಹವಾಗಿದೆ. 

4) ಹೊಸಪೇಟೆ ರೈಲು ನಿಲ್ದಾಣದ ಆಧುನಿಕರಣ, ಪಿಟ್‌ಲೈನ್ ನಿರ್ಮಾಣ ಹಾಗೂ 2 ನೂತನ ಪ್ಲಾಟ್ ಫಾರಂಗಳ ನಿರ್ಮಾಣ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಹಾಗೂ ಉತ್ತರ ಕರ್ನಾಟಕದ ಪ್ರಮುಖ ನಗರವಾದ ಹೊಸಪೇಟೆಯು ಪ್ರವಾಸೋದ್ಯಮ ಮತ್ತು ಕೈಗಾರಿಕೆ ಬೆಳವಣಿಗೆ ಕೇಂದ್ರವಾಗಿದ್ದು ದೇಶ ವಿದೇಶಗಳಿಂದ ಅಸಂಖ್ಯಾತ ಜನರು ರೈಲು ಮಾರ್ಗದ ಮೂಲಕ ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದುದರಿಂದ ರೈಲು ಗಾಡಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ 2 ಹೊಸದಾಗಿ ಪ್ಲಾಟ್ ಫಾರಂ ಹಾಗೂ ಪಿಟ್‌ಲೈನ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. 

ಈ ಸಂದರ್ಭದಲ್ಲಿ ವಿಜಯನಗರ ರೈಲು ಬಳಕೆದಾರರ ಸಂಘದ ಅಧ್ಯಕ್ಷರಾದ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡತಿನಿ, ಮುಖಂಡರಾದ ದೀಪಕ್ ಉಳ್ಳಿ, ಜೀರ ಕಲ್ಲೇಶ್, ಪ್ರಭಾಕರ್, ಎಂ.ಶಂಕ್ರ​‍್ಪ, ಕೆ.ವಿ.ರಾಮಾಲಿ, ಆರ್‌.ರಮೇಶ್‌ಗೌಡ, ನಜೀರ್ ಸಾಬ್, ಶ್ರವಣ್‌ಕುಮಾರ್, ಜೆ.ವರುಣ್, ಮನೋಹರ್, ಕೃಷ್ಣಮೂರ್ತಿರಾವ್, ನಾಗರಾಜರಾವ್, ಅರುಣ್‌ಕುಮಾರ್, ಶ್ರೀನಿವಾಸರಾವ್, ಅಮರನಾಥ್ ಕಟಾರೆ, ಹರಿಶಂಕರರಾವ್, ಮುಂತಾದವರು ಉಪಸ್ಥಿತರಿದ್ದರು.