ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ: ಶೇಖರಗೌಡ ರಾಮತ್ನಾಳ

ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ: ಶೇಖರಗೌಡ ರಾಮತ್ನಾಳ Protecting children is everyone's responsibility: Shekhar Gowda Ramatnal

           ಹಾವೇರಿ 16 :  ಮಕ್ಕಳ ಹಕ್ಕುಗಳ ರಕ್ಷಣೆ ಕೇವಲ ಇಲಾಖೆಗಳ ಜವಾಬ್ದಾರಿ ಅಲ್ಲ, ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಹೇಳಿದರು.  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ರಕ್ಷಣೆ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,

             ಮಕ್ಕಳ ರಕ್ಷಣಾ ವಿಷಯದಲ್ಲಿ  ಪುನರ್ವಸತಿ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚಿಸಿ, ಮಕ್ಕಳ ಹಕ್ಕುಗಳು ಹಾಗೂ ಕಾನೂನುಗಳ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.  ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದಕ್ಕಾಗಿಯೇ ನಮ್ಮ ದೇಶವು ವಿಶ್ವ ಸಂಸ್ಥೆಯೊಂದಿಗೆ ಮಕ್ಕಳ ಹಕ್ಕುಗಳ ಒಡಂಬಡಿಕೆ ಮಾಡಿಕೊಂಡಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಕಾನೂನು ರಚಿಸಿ ಅನುಷ್ಠಾನಗೊಳಿಸಿದೆ. ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು, ಶೋಷಣೆ ವಿರುದ್ಧದ ಹಕ್ಕು, ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾಯ್ದೆ ಜಾರಿಗೊಳಿಸಿದೆ. ಹಾಗೆಯೇ ವಿಶೇಷ ಚೇತನ ಮಕ್ಕಳ ಕಲ್ಯಾಣಕ್ಕಾಗಿ ಗ್ರಾಮ ಪಂಚಾಯತ್ ಹಾಗೂ  ಸ್ಥಳಿಯ ಸರ್ಕಾರಗಳ ಅನುದಾನದಲ್ಲಿ ಶೇ.5ರಷ್ಟು ಮೀಸಲಿಟ್ಟು ಕಾರ್ಯಕ್ರಮ ರೂಪಿಸಲು ಅವಕಾಶ ನೀಡಿದೆ ಎಂದರು. 

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರುಚಿ ಬಿಂದಲ್ ಮಾತನಾಡಿ, ಮಕ್ಕಳ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ ಹೀಗಾಗಿ ನಾವು ನೀವು ಎನ್ನದೆ ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ  ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ ಇದನ್ನು ತಡೆಗಟ್ಟಲು ಪುನರ್ವಸತಿ ಕಾರ್ಯಕರ್ತರು ಮುಂದಾಗಬೇಕು ಮುಂಚಿತವಾಗಿ ಮಾಹಿತಿ ಗೊತ್ತಿದ್ದರೂ, ಕೆಲವರು ಸುಮನ್ನೇ ಇರುತ್ತಿದ್ದಾರೆ. ಚಿಕ್ಕ ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮನೆಯಲ್ಲಿನ ಪಾಲಕರ  ಒತ್ತಡ  ಹಾಗೂ ಅವರ ಆರ್ಥಿಕ ಪರಿಸ್ಥಿತಿಗಳಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿವೆ ಹೀಗಾಗಿ ಪುನರ್ವಸತಿ ಕಾರ್ಯಕರ್ತರು ಸಕ್ರಿಯವಾಗಿ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ, ಇಂತಹ ಘನಟನೆಗಳು ಕಂಡು ಬಂದರೆ ಅವರುಗಳಿಗೆ ತಿಳುವಳಿಕೆ ನೀಡಿ ಬಾಲ್ಯ ವಿವಾಹವನ್ನು ತಡೆಯಲು ಮುಂದಾಗಿ ಎಂದರು. ಹಾಗೆಯೇ  ಬಾಲ ಗರ್ಭಿಣಿಯರ ಸಂಖ್ಯೆಯು ಹೆಚ್ಚಾಗಿದ್ದು  ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆಯು ಮೊದಲು ಸ್ಥಾನದಲ್ಲಿದೆ ಇದು ನಾಚಿಕೆಗೆಡಿನ  ಸಂಗತಿ. ಇದನ್ನು ತಡೆಗಟ್ಟಲು ನಾವೆಲ್ಲರೂ ಶಕ್ತಿಮಿರಿ ಕೆಲಸಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ತಮ್ಮ ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣದ ಗಂಭಿರತೆಯ ಕುರಿತು ಅರಿವು ಮೂಡಿಸಬೇಕು. ಮಕ್ಕಳ ಸಹಾಯವಾಣಿ ಸಂಪರ್ಕಿಸಿ ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದರು.  

   ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಜಾಸ್ತಿ ಇರುವುದಾಗಿ ಮಾಹಿತಿ ಇದೆ ಅಂತಹ ಮಕ್ಕಳನ್ನು ಪತ್ತೆ ಹಚ್ಚಿ ಮಕ್ಕಳನ್ನು ಅಂಗನವಾಡಿ ಅಥವಾ ಮಕ್ಕಳ ಆರೈಕೆ ಕೇಂದ್ರಗಳಿಗೆ ಕಳುಹಿಸಿ ಎಂದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಅವರು ಮಾತನಾಡಿ, ಮಕ್ಕಳ ರಕ್ಷಣೆಗೆ ಪೊಲೀಸ್ ಇಲಾಖೆ ಯಾವಾಗಲು ಬದ್ದವಾಗಿದೆ ಅದಕ್ಕೆ ನಿಮ್ಮೆಲ್ಲರ ಸಹಕಾರ ತುಂಬಾ ಅವಶ್ಯಕತೆಯಿದೆ. ಪುನರ್ವಸತಿ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಕುರಿತು ಮಾಹಿತಿಯನ್ನು ಸಕಾಲದಲ್ಲಿ ನೀಡಿ. ಇದರಿಂದ ಮಕ್ಕಳನ್ನು ರಕ್ಷಣೆಮಾಡಲು ಸಾಧ್ಯವಾಗಲಿದೆ. ವಿವಿಧ ಕಾರಣದಿಂದ ಶಿಕ್ಷಣ ತೊರೆದು ಮಕ್ಕಳು ಮನೆಯಲ್ಲಿ ಉಳಿದು ಬಿಟ್ಟಿರುತ್ತಾರೆ.ಇವರು ಮನೆಯಲ್ಲಿ ಇದ್ದು ಖಿನ್ನತೆಗೆ ಒಳಗಾಗಿರುತ್ತಾರೆ. ಇಂತಹ ಮಕ್ಕಳ ಮೇಲೆ ಗಮನ ವಹಿಸುವುದು ತುಂಬಾನೇ ಮುಖ್ಯವಾಗಿದೆ ಇಂತಹ ಮಕ್ಕಳೇ ದೌರ್ಜನ್ಯಕ್ಕೆ ಒಳಗಾಗುವ ಸಂಭಂವವಿರುತ್ತದೆ.ಇವರುಗಳಿಗೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಹಾಗೆಯೇ ಮಕ್ಕಳಿಗೆ ಅವರ ಸೌಲಭ್ಯಗಳು ಮತ್ತು  ರಕ್ಷಣೆ ಕುರಿತು  ಅರಿವು ಮೂಡಿಸಿ ಮಕ್ಕಳ ರಕ್ಷಣೆಗಾಗಿ ಪೊಲೀಸ್ ಇಲಾಖೆಯ ಸಹಾಯವಾಣಿ 1098 ಹಾಗೂ 112 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು. 

ಕಾರ್ಯಕ್ರಮದಲ್ಲಿ  ಯುನಿಸೇಪ್ ಯೋಜನಾ ವ್ಯವಸ್ಥಾಪಕರಾದ ಹರೀಶ್ ಜೋಗಿ ಇವರು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ರೇವತಿ ಎಸ್‌. ಹೊಸಮಠ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಗೀತಾ ಪಾಟೀಲ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಆಶು ನದಾಫ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಜಯಶ್ರೀ ಪಾಟೀಲ ಹಾಗೂ ಪುನರವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.