ಮಲ್ಲಾಡಿಯವರ ಕವಿತೆಗಳು ತೀವ್ರವಾದ ಸಾಮಾಜಿಕ ಬದ್ಧತೆಯಿಂದ ಹುಟ್ಟಿವೆ : ಡಾ. ವಿನಯಾ ವಕ್ಕುಂದ
ಧಾರವಾಡ 22 : ಇತ್ತೀಚಿನ ದಿನಗಳಲ್ಲಿ ನಾವು ಸಾಮಾಜಿಕ ಬದ್ಧತೆ ಬಗ್ಗೆ ಮಾತಾಡುವುದೇ ತಪ್ಪೇನೋ? ಅಪರಾಧವೇನೋ? ಸಾಮಾಜಿಕ ಬದ್ಧತೆ ಇರುವುದು ಒಳ್ಳೆಯ ಕವಿತೆ ಆಗಲಾರದೇನೋ? ಎನ್ನುವಂತ ತೊಳಲಾಟಕ್ಕೆ ಈಗಿನ ಕವಿಗಳು ಬಿದ್ದಿದ್ದಾರೆ ಎಂದು ಖ್ಯಾತ ಸಾಹಿತಿಗಳು ಹಾಗೂ ಮಹಿಳಾ ಪರ ಚಿಂತಕರು ಆದ ಡಾ. ವಿನಯಾ ವಕ್ಕುಂದ ಅವರು ಅಭಿಪ್ರಾಯ ಪಟ್ಟರು. ಅವರು, ಸಮುದಾಯ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಅವರ ಸಹಯೋಗದಲ್ಲಿ ವಿದ್ಯಾವರ್ಧಕ ಸಂಘ, ರಾ.ಹ. ದೇಶಪಾಂಡೆ ಭವನದಲ್ಲಿ ಜೋಸೆಫ್ ಮಲ್ಲಾಡಿ ಅವರ ಸುಡುವ ಕನಸುಗಳು ಎಂಬ ಕವನ ಸಂಕಲನ ಬಿಡುಗಡೆ ಗೊಳಿಸಿ, ಸಂಕಲನ ಪರಿಚಯಿಸುತ್ತಾ ಮಾತನಾಡಿದರು. ಸಾಮಾಜಿಕ ಬದ್ಧತೆ ಮತ್ತು ಜೀವನ ಬದ್ಧತೆ ಎರಡೂ ಬೇರೆ ಬೇರೆಯಲ್ಲ. ಎಷ್ಟೋ ಸಲ ದೊಡ್ಡ ದೊಡ್ಡ ಕವಿಗಳು ಕೂಡ ನಾನು ಬದ್ಧ ಕವಿಯಲ್ಲ, ಆದರೆ ನಾನು ಜೀವನಕ್ಕೆ ಬದ್ಧನಾಗಿದ್ದಿನಿ ಎಂದು ಹೇಳುತ್ತಾರೆ. ಅಂದರೆ ಧಮನಿತರ ಪರವಾಗಿದ್ದೇನೆ ಎಂದರ್ಥವಲ್ಲವೇ. ಮನುಷ್ಯನಾಗುವುದೆಂದರೆ ನಾನೊಬ್ಬ ಬದುಕಬೇಕೆನ್ನುವ ಅವಕಾಶವಾದಿತನವನ್ನು ಕಳೆದುಕೊಳ್ಳದೇ ಮನುಷ್ಯನಾಗುವ ಪ್ರಕ್ರಿಯೆ. ಹಾಗಾಗಿ ಸಾಮಾಜಿಕ ಬದ್ಧತೆ ಮತ್ತು ಜೀವನದ ಬದ್ಧತೆ ಎನ್ನುವುದು ವಿರುದ್ಧಾರ್ಥಕ ಶಬ್ಧಗಳಲ್ಲ ಎಂದು ಅವರು ಹೇಳಿದರು.ಸಮಾಜದಲ್ಲಿ ತಪ್ಪುಗಳಿವೆ, ಅವರಲ್ಲೊ ತಪ್ಪುಗಳಿದ್ದಾವೆ ಎಂದು ಮಾತಾನಾಡುವುದು ಒಂದು ದಾಟಿ. ಆ ತಪ್ಪುಗಳ ಜೊತೆ ನಾನೂ ಇದ್ದೇನೆ ಎನ್ನುವಂತ ಆತ್ಮ ವಿಮರ್ಶೆ, ಯಾವ ಕಾಲದಲ್ಲಿ ನಾವು ಬದುಕುತ್ತಿದ್ದೇವೊ ನಾವು ಆ ಕಾಲದ ಭಾಗವೇ ಆಗಿರುತ್ತೇವೆ. ಆ ಕಾಲದಲ್ಲಿ ನಡೆಯುವಂತಹ ಎಲ್ಲಾ ವಿದ್ಯಮಾನಗಳು ನಮ್ಮ ಸಾಕ್ಷಿ ಪ್ರಜ್ಞೆಯಲ್ಲಿಯೇ ನಡೆಯುತ್ತಿರುತ್ತವೇ. ನಮ್ಮ ಮೌನ ಕೂಡ ಆ ಕೆಡಕನ್ನು ಬೆಳೆಸುತ್ತಲೇ ಇರುತ್ತದೆ. ಹಾಗಾಗಿ ಅಂತಹದ್ದೊಂದು ಅಪರಾಧಿ ಪ್ರಜ್ಞೆ ಈ ಕವಿತೆಗಳನ್ನು ಹೆಚ್ಚು ಮೃಧುವಾಗಿಸಿದೆ. ನಾನು ಕೂಡ ತಪ್ಪಿತಸ್ಥನೆ ಎನ್ನುವ ಪ್ರಶ್ನೆ ತುಂಬಾ ತೀವ್ರವಾಗಿ ಇಲ್ಲಿ ಹಲವಾರು ಕವನಗಳಲ್ಲಿ ವ್ಯಕ್ತವಾಗಿದೆ. ವರ್ತಮಾನ ಎದುರಿಟ್ಟುಕೊಂಡು ಕಾವ್ಯವನ್ನು ರಚನೆ ಮಾಡುವುದು ಬಹಳ ಸವಾಲಿನ ಕೆಲಸ, ಆ ಸವಾಲನ್ನು ಕವಿ ಜೋಸೆಫ್ ತುಂಬಾ ಮುಖ್ಯವಾದ ಧಾತುವಿನಲ್ಲಿ ಎದುರಿಸಿದ್ದಾರೆ. ಸಮಾಜದ ಪರವಾಗಿ ನಿಂತು ಕೆಲಸಮಾಡುವಂತಹ ವ್ಯಕ್ತಿ, ರಾಜ್ಯಮಟ್ಟದ ಪ್ರಶಸ್ತಿಗಳು ಬಂದರೂ ಕೂಡ ಅವರಲ್ಲಿರುವ ವಿನಮ್ರತೆ, ಧನ್ಯತೆ ಕಡಿಮೆ ಆಗಿಲ್ಲ ಎಂದು ಹೇಳಿದರು.ಕಲಘಟಗಿಯ ಗುಡ್ ನ್ಯೂಸ್ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಬಿ.ಜಿ. ಬಿರಾದಾರ ಅವರು ಮಾತನಾಡಿ, ಮಲ್ಲಾಡಿಯವರಿಗಿರುವ ಸಾಮಾಜಿಕ ಕಳಕಳಿಯೇ ಅವರನ್ನು ಉತ್ತಮ ಕವಿಯಾಗಿಸಿದೆ ಎಂದರು. ನ್ಯಾಯವಾದಿ ಹಾಗೂ ಚಿಂತಕರಾದ ಅಮೋಘಸಿದ್ಧ ಮಾ. ಖೋಬ್ರಿ ಅವರು ವಿವಿಧ ಮಗ್ಗಲುಗಳ ಅನುಭವಗಳನ್ನು ಚಿಂತನೆಮಾಡಿ ಅನುಭವದಿಂದ ಬಂದಂತಹ ಅತ್ಯುತ್ತಮ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು. ಸಮುದಾಯ ಸಂಘದ ಅಧ್ಯಕ್ಷರಾದ ಬಿ.ಐ. ಈಳಿಗೇರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಗೀಗೀ ಪದ ಕಲಾವಿದರಾದ ಯಲ್ಲಪ್ಪ ತಿರ್ಲುಕೊಪ್ಪ ಮತ್ತು ಸಂಗಡಿಗರಿಂದ ಗೀತಗಾಯನ ನಡೆಯಿತು. ಜೋಸೆಫ್ ಮಲ್ಲಾಡಿಯವರ ಎರಡು ಕವನಗಳನ್ನು ಹೇಮಂತ ಲಮಾಣಿ ಹಾಗೂ ಸಂಗಡಿಗರು ಶಾಸ್ತ್ರೀಯ ಸಂಗೀತದಲ್ಲಿ ಪ್ರಸ್ತುತ ಪಡಿಸಿದರು.ಸಮುದಾಯದ ಕಾರ್ಯದರ್ಶಿ ಈರಣ್ಣ ಐನಾಪೂರ ಸ್ವಾಗತಿಸಿದರೆ, ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಿ. ಹೆಚ್. ಕುರಿಯವರು ನಿರೂಪಿಸಿದರು. ಭೂಮಿ ಪತ್ತಾರ ವಂದಿಸಿದರು. ಕಾರ್ಯಕ್ರಮದಲ್ಲಿ ವಿಭಾಗ ಪರಿಸರ ಮಾಲಿನ್ಯ ಅಧಿಕಾರಿಗಳಾದ ಜಗದೀಶ ಈಳಗೇರ, ಪತ್ರಕರ್ತ ಬಸವರಾಜ ಬೋದೂರು ಸೇರದಂತೆ ಅನೇಕ ಹಿರಿಯ ಸಾಹಿತಿಗಳು, ಗಣ್ಯರು ಭಾಗವಹಿಸಿದ್ದರು.