ತಾಲೂಕಾ ಕಚೇರಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಶಾಸಕ ರಾಜು ಕಾಗೆ ಚಾಲನೆ
ಕಾಗವಾಡ 10: ತಾಲೂಕಾ ಕಚೇರಿ, ಸರ್ವೆ ಮತ್ತು ನೋಂದಣಿ ಇಲಾಖೆಯ ಎಲ್ಲಾ ಭೂ ದಾಖಲೆಗಳನ್ನು ಇ-ಖಜಾನೆಯ ಭೂ ಸುರಕ್ಷಾ ಯೋಜನೆಯಡಿ ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಶುಕ್ರವಾರ ದಿ.10 ರಂದು ಶಾಸಕರು ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಚಾಲನೆ ನೀಡಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ದೂರ ದೃಷ್ಟಿಯೊಂದಿಗೆ ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಸ್ವತ ಡಿಜಿ ದಾಖಲೆಗಳಾಗಿ ಪರಿವರ್ತನೆ ಮಾಡುವ ಕಾರ್ಯಕ್ಕೆ ಈಗಾಗಲೇ ರಾಜ್ಯಾದಾಂತ್ಯ ಚಾಲನೆ ನೀಡಲಾಗಿದ್ದು, ತಾಲೂಕಾ ಕಚೇರಿಯಲ್ಲಿಯೂ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕೆ ಇಂದು ಚಾಲನೆ ನೀಡಲಾಯಿತು.
ಶಾಸಕ ರಾಜು ಕಾಗೆ ಮಾತನಾಡಿ, ಸರ್ಕಾರಿ ಕಚೇರಿಯ ಸಿಬ್ಬಂದಿಗಳು ನೂತನ ತಂತ್ರಜ್ಞಾನ ಬಳಿಸಿ, ಕಾರ್ಯಾಲಯದ ಕಾರ್ಯಗಳನ್ನು ನಿರ್ವಹಿಸುವ ಅನಿವಾರ್ಯತೆಯ ಜೊತೆಗೆ ನಿಗದಿತ ಸಮಯದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಈಗಾಗಲೇ ಎಲ್ಲ ಇಲಾಖೆಗಳು ತಂತ್ರಜ್ಞಾನದೊಂದಿಗೆ ಉನ್ನತಿಕರಣಗೊಂಡು ಕಾರ್ಯ ನಿರ್ವಹಿಸುತ್ತಿದ್ದು, ಕಾಗದ ರೂಪದ ಭೂ ದಾಖಲೆ ಸೇರಿದಂತೆ ಸರ್ಕಾರಿ ಕಡತಗಳನ್ನು ನಿರ್ವಹಿಸಲು ಬಹಳ ಕಷ್ಟವಾಗುತ್ತಿದ್ದು, ಕಂದಾಯ ಸಚಿವರು ಅವುಗಳನ್ನು ಡಿಜಟಲೀಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ, 6 ತಿಂಗಳ ಗಡವು ನೀಡಿದ್ದಾರೆ. ಅದರಂತೆ ತಾಲೂಕಾ ಕಚೇರಿಯಲ್ಲಿ ಇಂದು ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ತಹಶೀಲ್ದಾರ ರಾಜೇಶ ಬುರ್ಲಿ ಮಾತನಾಡಿ, ಎಲ್ಲ ಹಳೆಯ ದಾಖಲೆಗಳನ್ನು ಸಂರಕ್ಷಣೆ ಮಾಡುವ, ಕಳುವು ತಡೆ, ತಿದ್ದಲು ಅಸಾಧ್ಯವಾದ ರೀತಿಯಲ್ಲಿ ಡಿಜಟಲೀಕರಣಗೊಳಿಸಲಾಗುತ್ತಿದ್ದು, ಇದರಿಂದ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳುವ ಸೌಲಭ್ಯ ಸಿಗಲಿದೆ. ಜೊತೆಗೆ ವಿಳಂಬ, ಅಡೆತಡೆಗಳನ್ನು ನಿವಾರಿಸಿ, ತ್ವರಿತ ಆಡಳತ ಸೇವೆ ನೀಡಲು ನೆರವಾಗಲಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕೆಂದರು.
ತಹಶೀಲ್ದಾರ ರಾಜೇಶ ಬುರ್ಲಿ, ಉಪತಹಶೀಲ್ದಾರ ರಶ್ಮೀ ಜಕಾತೆ, ತಾ.ಪಂ. ಎಓ ವೀರಣ್ಣಾ ವಾಲಿ, ಬಿಇಓ ಎಂ.ಆರ್. ಮುಂಜೆ, ಪಿಎಸ್ಐ ಜಿ.ಜಿ. ಬಿರಾದರ, ಅಣ್ಣಾಸಾಬ ಕೋರೆ, ರಾಜಶೇಖರ ಮುಕನ್ನವರ, ಸುರೇಖಾ ಬಸನಾಯಿಕ, ಮುಖಂಡರಾದ ರಮೇಶ ಚೌಗುಲೆ, ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ಕಾಕಾ ಪಾಟೀಲ, ಚಿದಾನಂದ ಅವಟಿ, ರಾಜು ಕರವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.