ದಾಂಡೇಲಿಯ ಡಿಎಫ್‌ಎ ಟೌನ್ ಶಿಪ್‌ನಲ್ಲಿ ಮನೆ ನಿರ್ಮಾಣಕ್ಕೆ ಭೂಮಿ ಅತಿಕ್ರಮಣ: ಅಧಿಕಾರಿಗಳ ಜಾಣ ಮರೆವು

ದಾಂಡೇಲಿಯ ಡಿಎಫ್‌ಎ ಟೌನ್ ಶಿಪ್‌ನಲ್ಲಿ ಮನೆ ನಿರ್ಮಾಣಕ್ಕೆ ಭೂಮಿ ಅತಿಕ್ರಮಣ: ಅಧಿಕಾರಿಗಳ ಜಾಣ ಮರೆವು Land encroachment for house construction in Dandeli's DFA Township: Officials' clever forgetfulness

ಕಾರವಾರ 12: ದಾಂಡೇಲಿಯ  ಯುಟ್ಯೂಬರ್  ಹಾಗೂ ಮಾಧ್ಯಮ ಪ್ರತಿನಿಧಿಯೊಬ್ಬ ,  ಡಿ.ಎಫ್‌.ಎ. ಟೌನ್ ಶಿಪ್‌ನ 40 ಥ 40  ಆಳತೆಯ ಭೂಮಿಗೆ  ಬೇಲಿ ಹಾಕಿದ ಪರಿಣಾಮ, ಮನೆ ಕಟ್ಟಲು ಭೂಮಿ ಇಲ್ಲದ  ಸ್ಥಳೀಯರು , ಯುಟೂಬರ್ ಭೂಮಿಯ  ಅಕ್ಕ ಪಕ್ಕದಲ್ಲೆಲ್ಲ ಭೂಮಿ ಅತಿಕ್ರಮಿಸತೊಡಗಿದ ಘಟನೆ ಬುಧುವಾರ ಬೆಳಿಗ್ಗೆ  ಜರುಗಿತು . ದಾಂಡೇಲಿಯಲ್ಲಿ ಹಲವು ವರ್ಷ ಕಾರ್ಯ ನಿರ್ವಹಿಸಿದ  ಫೆರೋ ಮ್ಯಾಂಗನೀಜ್ ಕಾರ್ಖಾನೆ ಈಗ ಮುಚ್ಚಿದೆ. ಈ  ಕಾರ್ಖಾನೆಗೆ  ಸೇರಿದ ಜಾಗ ಇದು ಎಂದು  ,  ಕಾರ್ಖಾನೆಯ  ಪ್ರತಿನಿಧಿಗಳು ಹಾಗೂ ಅತಿಕ್ರಮಣದಾರರ ನಡುವೆ ಕ್ಷಣ ಕಾಲ ಮಾತಿನ ಚಕಮಕಿ ಸಹ  ನಡೆದು ಹೋಗಿದೆ. ಯುಟ್ಯೂಬರ್ ಜಾಗೆ ಅತಿಕ್ರಮಿಸಬಹುದಾದರೆ,  ಸ್ಥಳೀಯರಾಗಿ  ನಮಗೆ ಭೂಮಿ  ಇಲ್ಲ. ಮನೆ ಕಟ್ಟಲು ನಮಗೆ  ಭೂಮಿ  ಬೇಕು. ನಾವು ಭೂಮಿ  ಹಿಡಿದಿಟ್ಟುಕೊಳ್ಳುತ್ತೇವೆ. ನಮಗೆ ಆಶ್ರಯ ಪಟ್ಟಾ ಕೊಡಿ ಎಂದು ಅಧಿಕಾರಿಗಳಿಗೆ  ಬೇಡಿಕೊಂಡ ಘಟನೆ ಸಹ ನಡೆಯಿತು. ಈ ನಡುವೆ ಯುಟ್ಯೂಬರ್ ಮಾಧ್ಯಮ ಪ್ರತಿನಿಧಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೋರ್ವರು ಬೆಲೆ ಬಾಳುವ ಮೊಬೈಲ್ ಗಿಫ್ಟ್‌ ಕಳಿಸಿದಾಗ ತಾನದನ್ನು ನಿರಾಕರಿಸಿ ನನಗೆ ಸ್ವಂತ ಮನೆ ಇಲ್ಲ. ನನಗೊಂದು ಆಶ್ರಯದಲ್ಲಿ ಜಾಗೆ ಕೊಡಿ ಎಂದು ವಿನಂತಿಸಿದ್ದೆ.ಈ ಹಿನ್ನಲೆಯಲ್ಲಿ ನನಗೆ ಆಶ್ರಯ ಯೋಜನೆಯಡಿ ಪತ್ರವನ್ನು ನೀಡಿದ್ದಾರೆಂದು ತಾನು ಕಾನೂನು ಬದ್ಧವಾಗಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಏರಿಯಾದಲ್ಲಿ ಆಶ್ರಯ ಯೋಜನೆಗೆ ಸರ್ಕಾರ ನಿಗದಿ ಮಾಡಿದ ಭೂಮಿ ಎಂದಾಗಲಿ,  ಪ್ಲಾಟುಗಳನ್ನು  ನಿರ್ಮಿಸಲು ಎಂದಾಗಲಿ  ಅಧಿಕೃತ ಘೋಷಣೆಯಾಗಿಲ್ಲ.ಇದೆಲ್ಲವು ನಗರದ ಹೃದಯ ಭಾಗದ ಬೆಲೆ ಬಾಳುವ ನಿವೇಶನವಾಗಿದೆ. ಆಶ್ರಯ ಪತ್ರ ಪಡೆದರೆ ಸಾಲದು. ಅದು ಸಬ್ ರಜಿಷ್ಟ್ರಾರ ಕಛೇರಿಯಲ್ಲಿ ನೊಂದಣಿಯಾಗಬೇಕು. ನಂತರ ನಗರಸಭೆಯಲ್ಲಿ ದಾಖಲಿಸಿ ಸ್ವಾಧೀನ ಪತ್ರ ಪಡೆಯಬೇಕು. ಅದರ ನಂತರ ನಗರಸಭೆ ಪರವಾನಗಿ ಪಡೆದು ಬೇಲಿ, ಮನೆ ನಿರ್ಮಿಸಬೇಕಾಗುತ್ತದೆ. ಇದು ಆಶ್ರಯ ಮನೆ ಪಡೆಯುವ  ನಿಯಮ ಎಂಬುದು ಕಾನೂನು ತಜ್ಞರ ಅಭಿಪ್ರಾಯ.  ಆಶ್ರಯ  ಯೋಜನೆಯ ನಿಯಮ ಗಳನ್ನು ಉಲ್ಲಂಘನೆ ಮಾಡಿ , ಆಶ್ರಯಕ್ಕೆ ಮೀಸಲಾದ ಜಾಗೆಯನ್ನು ಬಿಟ್ಟು,  ನಗರದ ಮಧ್ಯಭಾಗದಲ್ಲಿ ಅತಿಕ್ರಮಣ ಮಾಡಿ ಬೇಲಿ ಕಟ್ಟಿದ್ದು ಸ್ಥಳೀಯರನ್ನು ಕೆರಳಿಸಿತು. ಈ ಬಗ್ಗೆ  ದಾಂಡೇಲಿ ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶಿವಾನಂದ ಗಗ್ಗರಿ ಜಿಲ್ಲಾಧಿಕಾರಿ ಹಾಗೂ ದಾಂಡೇಲಿ ನಗರಸಭೆಯ ಆಡಳಿತಾಧಿಕಾರಿಯಾದ ಲಕ್ಷ್ಮಿಪ್ರಿಯಾ ಅವರಿಗೆ ವ್ಯಾಟ್ಸಪ್ ಮೂಲಕ ಮಾಹಿತಿ ನೀಡಿದ್ದರು. ಜಿಲ್ಲಾಧಿಕಾರಿಗಳು ಪರೀಶೀಲನೆ ನಡೆಸಿ ಕ್ರಮ ಜರುಗಿಸಲು ತಹಶೀಲದಾರ ಮತ್ತು ಪೌರಾಯುಕ್ತರಿಗೆ ಸೂಚಿಸಿದ್ದಾರೆ. ಪೌರಾಯುಕ್ತರು ಯುಟೂಬರ್ ಗೆ ಅತಿಕ್ರಮಿಸಿ ಕಟ್ಟಿದ ಬೇಲಿಯನ್ನು ತೆರವುಗೊಳಿಸುವಂತೆ ಸೂಚಿಸಿದರೂ ತೆರವುಗೊಳಿಸಿಲ್ಲ. ಪರಿಣಾಮ ಸ್ಥಳೀಯ ಜನರು ಅಕ್ಕ ಪಕ್ಕದ ಜಾಗೆಯನ್ನು ಅತಿಕ್ರಮಿಸತೊಡಗಿದರು. ಅತಿಕ್ರಮಣದಾರ ಮಾಧ್ಯಮ ಪ್ರತಿನಿಧಿ ಗಾಂಧಿನಗರದಲ್ಲಿ ಈ ಹಿಂದೆ ಪತ್ನಿಯ ಹೆಸರಿನಲ್ಲಿ ಆಶ್ರಯ ನಿವೇಶನ ಪಡೆದು ನೊಂದಾಯಿಸಿಕೊಂಡಿರುವ ಮಾಹಿತಿ ಬಂದಿದೆ. ಈ ಸೈಟ್ ಪ್ರಕರಣ ಲೋಕಾಯುಕ್ತದ ತನಿಖೆಯ ವ್ಯಾಪ್ತಿಯಲ್ಲಿರುವುದರಿಂದ ಬದಲಿಗೆ ಮತ್ತೊಂದು ಆಶ್ರಯ ನಿವೇಶನ ಪಡೆಯುವ ಪ್ರಯತ್ನ ಇದಾಗಿದೆಯಂದು ಗಗ್ಗರಿ ಆರೋಪಿಸಿದ್ದಾರೆ.ಯುಟೂಬರ್ ನ  ಆದಾಯ ಪ್ರಮಾಣ ಪತ್ರದ ವಾಸ್ತವಿಕ ಅಂಶಗಳನ್ನು ಹಾಗೂ  ಸ್ಥಳ ಪರೀಶೀಲನೆ ಮಾಡಿದರೆ ಆಶ್ರಯದ ವ್ಯಾಪ್ತಿಗೆ ಬರುವುದೇ ಇಲ್ಲ. ಈ ಬಗ್ಗೆ ಪರೀಶೀಲನೆಯಾಗಲಿ ಎಂದು ಶಿವಾನಂದ ಗಗ್ಗರಿ ಒತ್ತಾಯಿಸಿದ್ದಾರೆ.