ವೀರ ವನಿತೆ ಒನಕೆ ಓಬವ್ವ ಅವರ ಧೈರ್ಯ ಸಾಹಸ ಮಹಿಳೆಯರಿಗೆ ಆದರ್ಶ: ಕೆ.ಇ.ಚಿದಾನಂದಪ್ಪ
Heroic woman Onake Obavva's courage and adventure an example for women: K.E. Chidanandappa
ಬಳ್ಳಾರಿ 11: ವೀರ ವನಿತೆ ಒನಕೆ ಓಬವ್ವ ಅವರ ಕಾಯಕ ನಿಷ್ಠೆ, ಧೈರ್ಯ, ಸಾಹಸ ನಾಡಿನ ಮಹಿಳೆಯರಿಗೆ ಆದರ್ಶವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹೈದರಾಲಿ ಸೈನಿಕರು ಚಿತ್ರದುರ್ಗದ ಕೋಟೆಯನ್ನು ಮುತ್ತಿಗೆ ಹಾಕಿದಾಗ ಮನೆಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿಸಿ ಎದುರಾಳಿಯ ನೂರಾರು ಸೈನಿಕರನ್ನು ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು. ಅಂತಹ ವೀರ ವನಿತೆ ಒನಕೆ ಓಬವ್ವ ಅವರ ಧೈರ್ಯ ಮಹಿಳೆಯರಿಗೆ ಒಂದು ಸ್ಪೂರ್ತಿಯಾಗಿದ್ದು, ಅವರ ಸಾಹಸವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಕಾಯಕ ನಿಷ್ಠೆಯಿಂದ ಧೈರ್ಯವಾಗಿ ಬದುಕಬಹುದು ಎಂದು ಹೇಳಿದರು.
ಬಳ್ಳಾರಿಯ ಸಾಹಿತಿ ಎನ್.ಡಿ.ವೆಂಕಮ್ಮ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಗುಡೇಕೋಟೆ ಪಾಳೆಗಾರರಲ್ಲಿ ಕಹಳೆಯವರಾಗಿ ಸೇವೆ ಸಲ್ಲಿಸುತ್ತಿದ್ದ ತಂದೆ ಚಿನ್ನಪ್ಪ ತಾಯಿ ಚಿನ್ನಮ್ಮ ದಂಪತಿಯ ಸುಪುತ್ರಿಯಾಗಿ ಕ್ರಿ.ಶ.1721 ರ ನ.11 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೆಕೋಟೆಯಲ್ಲಿ ಜನಿಸಿದಳು. ಓಬವ್ವಗೆ ಕದುರ್ಪ ಮತ್ತು ತಿಮ್ಮಣ್ಣ ಎಂಬ ಅಣ್ಣಂದಿರಿದ್ದರು. 18 ನೇಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪ ಓಬವ್ವಳ ಪತಿ ನಂಬಿದ ದೊರೆಗೆ ಯಾವುದೇ ಲೋಪ ಮಾಡಿದವನಲ್ಲ. ಅವನ ವ್ಯಕ್ತಿತ್ವಕ್ಕೆ ಸರಿಸಮವಾದ ಸಂಗಾತಿ ಓಬವ್ವ ಎಂದು ಜೀವನದ ಯಶೋಗಾಥೆ ಬಗ್ಗೆ ತಿಳಿಸಿದರು.
ಓಬವ್ವ ಮಾತೆಯ ಸಾಹಸ ಕಾರ್ಯಕ್ಕೆ ರಾಜವೀರ ಮದಕರಿನಾಯಕರು ಅಭಿನಂದಿಸಿ, ಆ ಸಾಹಸ ಕಾರ್ಯದ ನೆನಪಿಗೆ ಇನ್ನೊಂದು ಸುತ್ತು ಕೋಟೆ ಕಟ್ಟಿಸಿ, ಅದರ ಬಾಗಿಲಿಗೆ “ಒನಕೆ ಕಿಂಡಿ ಬಾಗಿಲು” ಎಂದು ಹೆಸರಿಟ್ಟಿದ್ದರು. ಒನಕೆ ಓಬವ್ವನನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ. ಓಬವ್ವ ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿಪುಂಜ. ಮಹಿಳೆಯರು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾಡಿನ ರಕ್ಷಣೆಗೆ ಪಣತೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರಿಗೆ ಸನ್ಮಾನಿಸಲಾಯಿತು ಹಾಗೂ ಬಳ್ಳಾರಿಯ ಎಸ್.ಲಕ್ಷ್ಮಿ ಪವನ್ ಕುಮಾರ್ ಸಂಗಡಿಗರು ಸುಗಮ ಸಂಗೀತ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರ್ಪ, ಭಾರತೀಯ ಬೌದ್ಧ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಕಮಲರತ್ನ ಬಂತೇಜಿ, ಸರಳಾದೇವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ.ಸೋಮನಾಥ, ದಲಿತ ರಕ್ಷಣಾ ವೇದಿಕೆ ಕಾರ್ಯದರ್ಶಿ ಶಂಕರ್ ನಂದಿಹಾಳ್, ಹಿರಿಯ ಪತ್ರಕರ್ತ ಸಿ.ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಮುಖಂಡರು ಹಾಗೂ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 