ಆಗಸ್ಟ್‌ 1ರಂದು ಗದಗ ಜಿಲ್ಲಾ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನ

ಆಗಸ್ಟ್‌ 1ರಂದು ಗದಗ ಜಿಲ್ಲಾ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನ  Gadag District's Second Children's Literature Conference on August 1


ಗದಗ, ಜು. 31: ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ಹಾಗೂ ಶ್ರೀ ಜಗದ್ಗುರು ಬೂದೀಶ್ವರ ವಿದ್ಯಾಪೀಠ, ಹೊಸಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲಾ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಗಸ್ಟ್‌ 1ರಂದು ಹೊಸಹಳ್ಳಿ ಗ್ರಾಮದ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ತಿಳಿಸಿದ್ದಾರೆ.  

ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಸಾಹಿತಿ ಡಾ. ನಿಂಗು ಸೋಲಗಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭಾಗವಹಿಸಲಿದ್ದಾರೆ.

ಶ್ರೀ ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದು, ಮಾಜಿ ಶಾಸಕ ಡಿ.ಆರ್‌. ಪಾಟೀಲ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪಣ್ಣ ಇನಾಮತಿ ಅಧ್ಯಕ್ಷತೆ ವಹಿಸಲಿದ್ದು, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಗ್ರಂಥ ಬಿಡುಗಡೆ ಮಾಡಲಿದ್ದಾರೆ.  

ಮಧ್ಯಾಹ್ನ 12 ಗಂಟೆಗೆ ‘ಮರೆಯಲಾಗದ ನಾಡಿನ ಶರಣರು’ ವಿಷಯದ ಕುರಿತು ಗೋಷ್ಠಿ ನಡೆಯಲಿದ್ದು, ವಿವಿಧ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ಉಪನ್ಯಾಸ ನೀಡಲಿದ್ದಾರೆ.  

ಮಧ್ಯಾಹ್ನ 2.30ಕ್ಕೆ ‘ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಶ್ರೇಷ್ಠರು ಯಾರು ಹಿ ಶಿಕ್ಷಕರೋ ಅಥವಾ ಪಾಲಕರೋ?’ ಎಂಬ ವಿಷಯದ ಕುರಿತು ಮಕ್ಕಳ ಹರಟೆ ಗೋಷ್ಠಿ ಆಯೋಜಿಸಲಾಗಿದೆ. ಶಿಕ್ಷಕರು ಹಾಗೂ ಪಾಲಕರ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.  

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಿಗೆ ‘ಬಾಲ ಶರಣಸಿರಿ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.  

ಸಾಹಿತ್ಯಾಸಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪರಿಷತ್ ಮನವಿ ಮಾಡಿದೆ.