18 ವರ್ಷ ತುಂಬಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಮತದಾರರ ಪಟ್ಟಿಗೆ ಸೇರೆ​‍್ಡಯಾಗಿ

18 ವರ್ಷ ತುಂಬಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಮತದಾರರ ಪಟ್ಟಿಗೆ ಸೇರೆ​‍್ಡಯಾಗಿ Every student who has turned 18 should get enrolled in the voters' list

ಲೋಕದರ್ಶನ ವರದಿ

       ಶಿಗ್ಗಾವಿ 21:  18 ವರ್ಷ ತುಂಬಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರೆ​‍್ಡ ಮಾಡಿಕೊಳ್ಳಬೇಕು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಪ್ರತಿಯೊಂದು ಮತವೂ ಅತ್ಯಂತ ಮೌಲ್ಯಯುತವಾಗಿದ್ದು, ಯುವಜನತೆ ಮತದ ಪ್ರಾಮುಖ್ಯತೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಮತದಾನ ಜಾಗೃತಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಪಿ.ಎಸ್‌.ವಸ್ತ್ರದ ಹೇಳಿದರು. 

ಪಟ್ಟಣದ ಡಾಽ ಬಿ.ಆರ್‌. ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ತಾಲೂಕು ಆಡಳಿತ ಹಾಗೂ ಸ್ವೀಪ್ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 'ಮತದಾನ ಜಾಗೃತಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಭವಿಷ್ಯವನ್ನು ನಿರ್ಧರಿಸುವ ಶಕ್ತಿ ಯುವಜನತೆಯ ಕೈಯಲ್ಲಿದೆ. ಅರ್ಹತೆ ಹೊಂದಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಪವಿತ್ರ ಕರ್ತವ್ಯ. ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ, ಜಾಗರೂಕರಾಗಿ ಮತ್ತು ಜವಾಬ್ದಾರಿಯುತವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. 

               ಕಾರ್ಯಕ್ರಮದ ಅಂಗವಾಗಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ವಿಷಯದ ಕುರಿತು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು "ನನ್ನ ಮತ - ನನ್ನ ಹಕ್ಕು", "ಕಡ್ಡಾಯವಾಗಿ ಮತದಾನ ಮಾಡಿ" ಸೇರಿದಂತೆ ಹಲವು ಜಾಗೃತಿ ಸಂದೇಶಗಳನ್ನು ಸಾರುವ ಆಕರ್ಷಕ ರಂಗೋಲಿಗಳನ್ನು ಬಿಡಿಸುವ ಮೂಲಕ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಸಕ್ರಿಯವಾಗಿ ಪಾಲ್ಗೊಂಡರು. ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳ ಸೃಜನಶೀಲತೆಗೆ ಉಪಸ್ಥಿತರಿದ್ದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. 

              ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದಲ್ಜೀತ್ ಕುಮಾರ್, ಉಪ ಕಾರ್ಯದರ್ಶಿ ಡಾಽ ಪುನೀತ್, ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ್, ಇಓ ಮಂಜುನಾಥ ಸಾಳುಂಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಇಂದುಧರ ಮುತ್ತಳ್ಳಿ, ನಿಲಯ ಪಾಲಕಿ ರೂಪಾ ಸುಣಗಾರ ಉಪಸ್ಥಿತರಿದ್ದು, ಯುವ ಮತದಾರರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಇದಲ್ಲದೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು, ವಸತಿ ನಿಲಯದ ಸಿಬ್ಬಂದಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.