ಮುಂಡಗೋಡನಲ್ಲಿ ಕಾಯಕ ಬಂಧು ತರಬೇತಿ ಕಾರ್ಯಾಗಾರಕ್ಕೆ ಚಾಲನೆ

Drive to Kayak Bandhu training workshop in Mundagoda

ಮುಂಡಗೋಡನಲ್ಲಿ ಕಾಯಕ ಬಂಧು ತರಬೇತಿ ಕಾರ್ಯಾಗಾರಕ್ಕೆ ಚಾಲನೆ 

ಕಾರವಾರ 16: ಮುಂಡಗೋಡ ತಾಲೂಕಿನ 16 ಗ್ರಾಮ ಪಂಚಾಯತಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಯಕ ಬಂಧುಗಳನ್ನು ಸಜ್ಜುಗೊಳಿಸುವ ಸಲುವಾಗಿ ತರಬೇತಿ ಕಾರ್ಯಾಗಾರಕ್ಕೆ ತಾಲೂಕ ಪಂಚಾಯತ ಸಭಾಭವನದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್‌. ದಾಸನಕೊಪ್ಪ ಗುರುವಾರ  ಚಾಲನೆ ನೀಡಿದರು. 

ಸದರಿ ತರಬೇತಿಯು ಲೋಯಲಾ ವಿಕಾಸ ಕೇಂದ್ರ ಮುಂಡಗೋಡ ರವರ ಸಹಭಾಗಿತ್ವದಲ್ಲಿ ಜ.16 ರಿಂದ ಫೆ.12 ರವರೆಗೆ ಜರುಗಲಿದ್ದು ಒಟ್ಟೂ 300 ಕಾಯಕ ಬಂಧುಗಳಿಗೆ ತರಬೇತಿ ನೀಡುವ ಉದ್ದೇಶಹೊಂದಿದೆ.ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ನರೇಗಾ ಯೋಜನೆಯಡಿ ಕಾಯಕ ಬಂಧುಗಳ ಪಾತ್ರ ಮಹತ್ವದ್ದಾಗಿದ್ದು, ಅವರು ಈ ತರಬೇತಿಯ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದು ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೆ ಉದ್ಯೋಗ ನೀಡುವ ಬಗ್ಗೆ ಹಾಗೂ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನವಾಗುವಂತೆ ಕರೆ ನೀಡಿದರು. 

ಮುಂಡಗೋಡ ಲೋಯಲಾ ವಿಕಾಸ ಸಂಸ್ಥೆಯ ಫಾದರ ಅನೀಲ್ ಡಿಸೋಜ್ ಮಾತನಾಡಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಾಮಗಾರಿ ಸ್ಥಳದ ನಿರ್ವಹಣೆಯನ್ನು ಸುಧಾರಿಸಲು ಮತ್ತು ಕಾರ್ಯಕ್ರಮದ ಅನುಷ್ಠಾನವನ್ನು ಸುಗಮಗೊಳಿಸಲು, ಅಜೀಂ ಪ್ರೇಮ್ ಜಿ ಫೌಂಡೇಶನ್ ಹಾಗೂ ಸಮಾಜದ ಸೇವಾ ಸಂಸ್ಥೆಗಳು ಜಂಟಿಯಾಗಿ ತಾಲೂಕ ಪಂಚಾಯತ ಮೂಲಕ ಕಾಯಕ ಬಂಧುಗಳ ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದು ಇದರಲ್ಲಿ ಭಾಗವಹಿಸುವ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಗಳ ಕಾಯಕ ಬಂಧುಗಳು ನರೇಗಾ ಯೋಜನೆಯ ಗುರಿ, ಉದ್ದೇಶ, ವ್ಯಾಪ್ತಿಯ ಮಾಹಿತಿಯನ್ನು ಸಂಪೂರ್ಣವಾಗಿ ತರಬೇತಿ ಮೂಲಕ ಪಡೆದು ತರಬೇತಿ ಯಶಸ್ವಿಗೊಳಿಸಲು ಹೇಳಿದರು. 

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ (ಗ್ರಾ,ಉ) ಸೋಮನಿಂಗಪ್ಪಾ ಛಬ್ಬಿ, ತಾ.ಪಂ ಸಹಾಯಕ ಲೇಕ್ಕಾಧಿಕಾರಿ ಪ್ರಕಾಶ ಎಮ್‌.ಕೆ, ಚವಡಳ್ಳಿ ಗ್ರಾಪಂ ಅಧ್ಯಕ್ಷ ಬಷಿರಾಭಿ ಮೌಲಾಸಾಬ ನದಾಫ್, ಗ್ರಾ,ಪಂ ಕಾಯಕ ಬಂಧುಗಳು, ನರೇಗಾ ಯೋಜನೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಮುಂಡಗೋಡ ಲೋಯಲಾ ವಿಕಾಸ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.