ಡಾ.ಮಹಾಂತ ಶಿವಯೋಗಿರವರ ಜನ್ಮದಿನ-ವ್ಯಸನಮುಕ್ತ ದಿನಾಚರಣೆ

ಡಾ.ಮಹಾಂತ ಶಿವಯೋಗಿರವರ ಜನ್ಮದಿನ-ವ್ಯಸನಮುಕ್ತ ದಿನಾಚರಣೆ Dr. Mahant Shivayogi's Birthday - Drug-Free Day Celebration

ಡಾ.ಮಹಾಂತ ಶಿವಯೋಗಿರವರ ಜನ್ಮದಿನ-ವ್ಯಸನಮುಕ್ತ ದಿನಾಚರಣೆ 

ಹಾವೇರಿ 01: ಮಾದಕ ವಸ್ತುಗಳ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕುವಂತೆ ಮನವಿ ಮಾಡುವ ಮೂಲಕ, ವ್ಯಸನ ಮುಕ್ತ ಸಮಾಜದ ಕನಸುಕಂಡ ಅಪರೂಪದ ಮಹಾನ್ ವ್ಯಕ್ತಿ ಡಾ.ಮಹಾಂತ ಶಿವಯೋಗಿಗಳು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್‌.ಗಾಜಿಗೌಡ್ರ ಅವರು ಹೇಳಿದರು. 

ಹಾವೇರಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ  ಹಾಗೂ ಸಾಕ್ಷರತಾ ಇಲಾಖೆ,  ವೈದ್ಯಕೀಯ ಶಿಕ್ಷಣ ಇಲಾಖೆ,  ಸಮಾಜ ಕಲ್ಯಾಣ ಇಲಾಖೆ ಹಾಗೂ ಬಸವೇಶ್ವರ ಬಿ.ಎಡ್ ಕಾಲೇಜ್ ಸಹಯೋಗದಲ್ಲಿ ಆಯೋಜಿಸಲಾದ ಡಾ.ಮಹಾಂತ ಶಿವಯೋಗಿರವರ ಜನ್ಮದಿನ-ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.  

ಹಣ, ದವಸಧಾನ್ಯಗಳನ್ನು ಜೋಳಿಗೆಗೆ ಹಾಕಿ ಎಂದು ಕೇಳುವ ಇತರರಿಗಿಂತ ಭಿನ್ನವಾದ ನಡೆಯಿಂದ ಧಾರ್ಮಿಕ, ಆಧ್ಯಾತ್ಮಿಕ ಶ್ರೇಯಸ್ಸಿನೊಂದಿಗೆ ಸ್ವಚ್ಛ ಸಮಾಜದ ಏಳಿಗೆಗಾಗಿ ಯುವಜನರಲ್ಲಿರುವ ದುಶ್ಚಟಗಳನ್ನು ಕೈಬಿಡುವಂತೆ ಜಾಗೃತಿಮೂಡಿಸಿ, ಜೋಳಿಗೆಯಲ್ಲಿ ದುಶ್ಚಟಗಳನ್ನು ದಾನಮಾಡಿ ಎಂದು ಮಹಾಂತ ಜೋಳಿಗೆ ಹಿಡಿದು  ಮನೆ ಮನೆಗೆ ತೆರಳಿ ಆಂದೋಲನದ ರೀತಿಯಲ್ಲಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು ಎಂದು ಬಣ್ಣಿಸಿದರು. 

ವ್ಯಸನಗಳಿಂದ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ, ಹಾಗಾಗಿ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೇ, ತಮ್ಮ ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಗುರಿ ಹೊಂದಬೇಕು. ಮಹಾನ್ ವ್ಯಕ್ತಿಗಳ ಜೀವನ ಆದರ್ಶಗಳನ್ನು ತಿಳಿದುಕೊಂಡು ಉತ್ತಮ ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.  

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಶ್ರೀಮತಿ ಶರಣ್ಣ ಅವರು ಮಾತನಾಡಿ, ಯುವಪೀಳಿಗೆ ವ್ಯಸನಗಳಿಗೆ ದಾಸರಾಗುತ್ತಿರುವುದು ವಿಷಾಧಕರ ಸಂಗತಿಯಾಗಿದೆ. ಬೆಳೆಯುವ ಮಕ್ಕಳು ದುಶ್ಚಟಗಳಿಂದ ದೂರವಿರಬೇಕು. ವ್ಯಸನ ದುಸ್ಥಿತಿಗೆ ತಳ್ಳುತ್ತದೆ ಹಾಗೂ ದೈಹಿಕ ಆರೋಗ್ಯ ಹಾಳಾಗಿ ಖಾಯಿಲೆಗಳು ಬರುತ್ತವೆ. ದುಶ್ಚಟಗಳಿಗೆ ದಾಸರಾಗುವುದರಿಂದ ಮನೆಗೆ ಒಳ್ಳೆಯ ಮಗ ಆಗಲ್ಲ,  ಒಳ್ಳೆಯ  ಪತಿ ಆಗಲ್ಲ, ಮಕ್ಕಳಿಗೆ ಒಳ್ಳೆಯ ತಂದೆ ಆಗಲ್ಲ ಎಂದು ಹೇಳಲಾಗುತ್ತದೆ. ನಮ್ಮ ಶರಣರು-ಸಂತರು  ನಮಗೆ ಒಳ್ಳೆಯ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ತಿಳಿದುಕೊಳ್ಳಬೇಕು. ಯುವ ಸಮೂಹ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಸಾಮಾಜಿಕ ಜಾಲತಾಣ ಹಾಗೂ ದೃಶ್ಯಮಾಧ್ಯಮಗಳಲ್ಲಿ  ದಿನದ 24 ಗಂಟೆ ಅಪರಾಧ ಸುದ್ದಿಗಳನ್ನು ಬಿತ್ತರಲಾಗುತ್ತಿದೆ. ಏನು ಮಾಡಬೇಕು, ಏನು ಮಾಡಬಾರದು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಬೇಕು.  ವ್ಯಸನ ಮುಕ್ತ ಭಾರತ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. 

ಉಪನ್ಯಾಸಕರಾಗಿ ಭಾಗವಹಿಸಿದ ಹಾವೇರಿ ಬಾಲಕಿಯರ ಸರ್ಕಾರಿ  ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಪ್ರೊ.ಶೇಖರ ಭಜಂತ್ರಿ ಅವರು  ಮಾತನಾಡಿ, ಡಾ.ಮಹಾಂತ ಶಿವಯೋಗಿಗಳು ಮಾದಕ ವಸ್ತುಗಳ ವ್ಯಸನ ಬಿಡಿಸಲು ಮನೆಗೆ ತೆರಳಿ ಮಹಾಂತ ಜೋಳಿಗೆಗೆ ಹಾಕುವಂತೆ ಸತತ ಪ್ರಯತ್ನ ಮಾಡುವ ಮೂಲಕ ಸದೃಢ  ರಾಜ್ಯ ಹಾಗೂ ದೇಶಕಟ್ಟಲು ಶ್ರಮಿಸಿದರು. ಮಹಾಂತ ಶಿವಯೋಗಿಗಳ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.  ಸದೃಡ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. 

ಕಾಲೇಜು ಉಪನ್ಯಾಸಕ ಮುಳಗುಂದ ಅವರು ಮಾದಕ ವಸ್ತು ವಿರೋಧಿ  ಪ್ರತಿಜ್ಞಾ ವಿಧಿ ಬೋಧಿಸಿದರು. ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ  ಎಂ.ಎಂ. ಮೈದೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಭಾರತಿ ಎಚ್‌., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೂತನ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.  

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್‌.ವಿ.ಚಿನ್ನಿಕಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  

ಕಾರ್ಯಕ್ರಮಕ್ಕೂ ಮೊದಲು ಬಸವೇಶ್ವರ ಬಿ.ಎಡ್ ಕಾಲೇಜ್  ಆವರಣದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಆಯೋಜಿಸಲಾದ ಜಾಗೃತಿ ಜಾಥಾಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಭಾರತಿ ಎಚ್‌.  ಅವರು ಚಾಲನೆ ನೀಡಿದರು.  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್‌.ವಿ.ಚಿನ್ನಿಕಟ್ಟಿ, ಕಾಲೇಜು ಉಪನ್ಯಾಸಕ ಮುಳುಂದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರ.ದ.ಸ.ರಾಘವೇಂದ್ರ ಕುರಣೆ ಇತರರು  ಉಪಸ್ಥಿತರಿದ್ದರು. ಗಾಂಧಿ ಭವನದ ವರೆಗೆ ಜಾಗೃತಿ ಜಾಥಾ ಜರುಗಿತು.