ವೈದ್ಯರು ದೇವರಿಗೆ ಸಮಾನ; ಆರೋಗ್ಯಕರ ಆಹಾರಕ್ಕೆ ಸಲಹೆ

ವೈದ್ಯರು ದೇವರಿಗೆ ಸಮಾನ; ಆರೋಗ್ಯಕರ ಆಹಾರಕ್ಕೆ ಸಲಹೆ Doctors are akin to God; advice on healthy food

 ಬ್ಯಾಡಗಿ, ಜು. 3: ವೈದ್ಯರು ದೇವರಿಗೆ ಸಮಾನರು. ರೋಗಿಗಳನ್ನು ಗುಣಪಡಿಸುವ ವೈದ್ಯರು ಸಮಾಜದ ಅಮೂಲ್ಯ ಆಸ್ತಿ ಎಂದು ನವಚೈತನ್ಯ ವಿದ್ಯಾಲಯದ ಮುಖ್ಯೋಪಾಧ್ಯಾಯ ಬಿ.ಕೆ. ಶೇರಗೌಡ ಹೇಳಿದರು.  ನಗರದ ಖ್ಯಾತ ವೈದ್ಯರಾದ ಡಾ. ಪ್ರಕಾಶ ಭಸ್ಮೆ ಅವರನ್ನು ವೈದ್ಯರ ದಿನಾಚರಣೆ ಅಂಗವಾಗಿ ಅವರ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ವೈದ್ಯರು ರೋಗಿಗಳೊಂದಿಗೆ ಶಾಂತಿ, ಸಹನೆ ಮತ್ತು ಆತ್ಮೀಯತೆಯಿಂದ ನಡೆದುಕೊಳ್ಳುವುದರಿಂದ ಅರ್ಧ ಕಾಯಿಲೆಯೇ ಗುಣವಾಗುತ್ತದೆ ಎಂದರು. ಡಾ. ಭಸ್ಮೆ ಅವರು ವೃತ್ತಿಪರತೆ, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಸೇವೆ ಸಲ್ಲಿಸುತ್ತಿದ್ದು, ಇಂತಹ ವೈದ್ಯರ ಅಗತ್ಯ ಸಮಾಜಕ್ಕೆ ಇದೆ ಎಂದು ಪ್ರಶಂಸಿಸಿದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರಕಾಶ ಭಸ್ಮೆ, ಬಿಸ್ಕತ್, ಕೇಕ್ ಸೇರಿದಂತೆ ಮೈದಾ ಆಧಾರಿತ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು. ಇವುಗಳಲ್ಲಿ ಅಧಿಕ ಸಕ್ಕರೆ, ಕೊಬ್ಬು ಹಾಗೂ ಸಂಸ್ಕರಿತ ಹಿಟ್ಟು ಇರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂದರು. ಅವುಗಳ ಬದಲಿಗೆ ಪ್ರೋಟೀನ್ ಹಾಗೂ ತರಕಾರಿಗಳು ಸಮೃದ್ಧವಾಗಿರುವ ಪೌಷ್ಟಿಕ ಆಹಾರ ಸೇವಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ನವಚೈತನ್ಯ ವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.