ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಡಾ. ವರ್ಧನ್ ಅಧಿಕಾರ ಸ್ವೀಕಾರ

ಧಾರವಾಡ 08: ಬಾಗಲಕೋಟ, ವಿಜಯಪೂರ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾ ಟಕ ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ನೂತನ ನಿರ್ದೇಶಕರಾಗಿ ಕೆ.ಇ.ಎಸ್. ಶ್ರೇಣಿಯ ಹಿರಿಯ ಅಧಿಕಾರಿ ಡಾ.ಬಿ.ಕೆ.ಎಸ್. ವರ್ಧನ್ ಇಲ್ಲಿಯ ಅಪರ ಆಯುಕ್ತರ ಕಛೇರಿಯಲ್ಲಿ ಶನಿವಾರ ಅಧಿಕಾರ ಸ್ವೀಕರಿಸಿದರು.

1994ರಲ್ಲಿ ಕೆ.ಇ.ಎಸ್. ತೇರ್ಗಡೆಯಾಗುವ ಮೂಲಕ ಗದಗ ಜಿಲ್ಲೆ ಹರ್ಲಾ ಪೂರ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿ ನೇಮಕಗೊಂಡ ಇವರು, ಡಯಟ್ ಉಪನ್ಯಾಸಕರಾಗಿ, ವಿಷಯ ಪರಿವೀಕ್ಷಕರಾಗಿ, ಶಿಕ್ಷಣಾಧಿಕಾರಿಯಾಗಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಉಪನಿರ್ದೇಶಕರಾಗಿ ಬೆಳಗಾವಿಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರರಾಗಿ ಮತ್ತು ರೀಡರ್ ಆಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ನಗರದ ಅಪರ ಆಯುಕ್ತರ ಕಛೇರಿಯಲ್ಲಿಯೇ ಸಹ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದರು. ಪ್ರಸ್ತುತ ಪದೋನ್ನತಿ ಹೊಂದಿ ಇಲ್ಲಿಯೇ ನಿರ್ದೇಶಕರಾಗಿದ್ದಾರೆ. 

ಬರಿಗಾಲಿನ ನಡಿಗೆ : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತುಪ್ಪದ ಕುರಹಟ್ಟಿ ಗ್ರಾಮದವರಾದ ಡಾ.ವರ್ಧನ್ ಅನರಕ್ಷರಸ್ಥ ಕುಟುಂಬದಿಂದ ವಿದ್ಯಾರ್ಜನೆ ಬಯಸಿ ಬರಿಗಾಲಿನಿಂದ ನಡೆಯುತ್ತ ಧಾರವಾಡಕ್ಕೆ ಬಂದು ಪ್ರಸ್ತುತ ವಿದ್ಯಾಕಾಶಿಯಲ್ಲಿಯೇ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಉನ್ನತ ಹುದ್ದೆಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಡಾ.ವರ್ಧನ್ ಭಾವುಕರಾದರು. 

ಬೆಳಗಾವಿ ವಿಭಾಗವು ರಾಜ್ಯದಲ್ಲಿ ಗುಣಾತ್ಮಕ ಶಿಕ್ಷಣ ನೀಡಿಕೆ ಹಾಗೂ ಶಿಕ್ಷಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇಲಾಖೆಯ ನೆಚ್ಚಿನ ಅಪರ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರ ಜೊತೆಗೂಡಿ ಕರ್ತವ್ಯ ನಿರ್ವಹಿಸಿದ್ದನ್ನು ಪರಿಗಣಿಸಿ ಇಲಾಖೆ ಪದೋನ್ನತಿ ನೀಡಿದ್ದನ್ನು ಸ್ಮರಿಸಿದ ಡಾ. ವರ್ಧನ್ ಅವರು, ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಇದು ಎಲ್ಲವೂ ಸಾಧ್ಯವಾಗಿದೆ ಎಂದರು. 

ಮನವಿ : ತಾವು ನಿದರ್ೆಶಕ ಹುದ್ದೆಗೆ ಪದೋನ್ನತಿ ಹೊಂದಿದ ಸಂದರ್ಭದಲ್ಲಿ ಅಭಿನಂದಿಸಲು ಬರುವವರು ಶಾಲು, ಮಾಲೆ, ಹೂಗುಚ್ಛ ತರದೇ ನೋಟಬುಕ್ ಇಲ್ಲವೇ ಶಿಕ್ಷಣ ಸಾಹಿತ್ಯ ಕೃತಿಗಳನ್ನು ತರಬೇಕೆಂದು ಮನವಿ ಮಾಡಿದ್ದು, ಸಂಗ್ರಹವಾಗುವ ನೋಟಬುಕ್ಗಳನ್ನು ಬಡ ವಿದ್ಯಾರ್ಥಿ ಗಳಿಗೆ ವಿತರಿಸಲಾಗುವುದೆಂದು ಡಾ. ವರ್ಧನ್ ಹೇಳಿದ್ದಾರೆ. 

ಇಲಾಖೆಯ ಹಲವಾರು ಅಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರ ಸಂಘಟನೆಗಳು ಹಾಗೂ ಇತರೇ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದು ಡಾ.ವರ್ಧನ್ ಅವರನ್ನು ಹೂ ಗುಚ್ಛ ನೀಡಿ ಅಭಿನಂದಿಸಿದರು.