ಅನ್ನ ಭಾಗ್ಯ ಅಕ್ರಮ ಅಕ್ಕಿ ಕಳ್ಳರ ಮೇಲೆ ಕಠಿಣ ಕ್ರಮಕ್ಕೆ ದಲಿತ ಸಾಹಿತ್ಯ ಪರಿಷತ್ತು ಆಗ್ರಹ

ಅನ್ನ ಭಾಗ್ಯ ಅಕ್ರಮ ಅಕ್ಕಿ ಕಳ್ಳರ ಮೇಲೆ ಕಠಿಣ ಕ್ರಮಕ್ಕೆ ದಲಿತ ಸಾಹಿತ್ಯ ಪರಿಷತ್ತು ಆಗ್ರಹ Dalit Sahitya Parishat demands strict action against 'Anna Bhagya' rice smugglers

ಲೋಕದರ್ಶನ ವರದಿ 

  ವಿಜಯಪುರ 29: ಬಡವರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಳ್ಳತನ ಮಾಡಿ ವ್ಯವಹಾರ ಮಾಡುತ್ತಿರುವ ಕುರಿತು ಜಿಲ್ಲೆಯ ಹಿರಿಯ ಪತ್ರಕರ್ತರಾದ ಪರಶುರಾಮ ಶಿವಶರಣ ಅವರು ನಿಷ್ಠುರವಾಗಿ ವರದಿ ಮಾಡಿರುವ ಹಿನ್ನೆಲೆಯಲ್ಲಿ, ಅವರ ಮನೆಗೆ ತೆರಳಿ ಧಮ್ಕಿ ಹಾಕಿರುವ ಘಟನೆಗೆ ದಲಿತ ಸಾಹಿತ್ಯ ಪರಿಷತ್ತು, ವಿಜಯಪುರ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿ ಧಮ್ಕಿ ಹಾಕಿದವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ರವಿ ಕಿತ್ತೂರ ಮಾತನಾಡಿ, ಸಾರ್ವಜನಿಕ ಸಮಸ್ಯೆಗಳು, ಜನಸಾಮಾನ್ಯರ ಕುಂದುಕೊರತೆಗಳು ಹಾಗೂ ಸಮಾಜದಲ್ಲಿ ನಡೆಯುವ ಅಕ್ರಮಗಳನ್ನು ಬೆಳಕಿಗೆ ತಂದು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ.

ಇಂತಹ ಸಾರ್ವಜನಿಕ ಹಿತಾಸಕ್ತಿಯ ವರದಿಗಳ ಮೂಲಕ ಸಮಾಜದಲ್ಲಿ ನಡೆಯುವ ಅಕ್ರಮಗಳನ್ನು ಪ್ರಶ್ನಿಸುವ ಪತ್ರಿಕಾರಂಗಕ್ಕೆ ಸಂವಿಧಾನಾತ್ಮಕವಾಗಿ ಮಹತ್ವದ ಸ್ಥಾನವಿದೆ. ಬಡವರಿಗಾಗಿ ಸರ್ಕಾರದಿಂದ ಹಂಚಿಕೆಯಾಗಬೇಕಾದ ಪಡಿತರ ಅಕ್ಕಿಯ ಅಕ್ರಮ ವ್ಯವಹಾರದ ಕುರಿತು ವರದಿ ಮಾಡಿದ ಕಾರಣಕ್ಕೆ ಪತ್ರಕರ್ತರ ಮನೆಗೆ ತೆರಳಿ ಧಮ್ಕಿ ಹಾಕುವುದು ಅತ್ಯಂತ ಗಂಭೀರ ಹಾಗೂ ಖಂಡನೀಯ ಕೃತ್ಯವಾಗಿದೆ. ಇಂತಹ ಘಟನೆಗಳು ಪತ್ರಕರ್ತರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಲ್ಲದೆ, ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನವಾಗಿವೆ ಎಂದು ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಆದ್ದರಿಂದ, ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಧಮ್ಕಿ ಹಾಕಿದವರ ವಿರುದ್ಧ ಪೊಲೀಸರು ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕಠಿಣಾತಿಕಠಿಣ ಕ್ರಮ ಜರುಗಿಸಬೇಕು.

ಈ ಪ್ರಕರಣದಲ್ಲಿ ಯಾವುದೇ ರೀತಿಯ ರಾಜಿ ಅಥವಾ ಒತ್ತಡಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗಳನ್ನು ಹಾಗೂ ಪೊಲೀಸ್ ಇಲಾಖೆಯನ್ನು ಪರಿಷತ್ತು ಒತ್ತಾಯಿಸುತ್ತದೆ ಎಂದರು.  ಅಕ್ರಮ ಹಾಗೂ ಭ್ರಷ್ಟಾಚಾರದ ವಿರುದ್ಧ ನಿಷ್ಠುರವಾಗಿ ವರದಿ ಮಾಡುವ ಪತ್ರಕರ್ತರಿಗೆ ರಕ್ಷಣೆ ನೀಡುವುದು ಆಡಳಿತ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಒಬ್ಬ ಪತ್ರಕರ್ತನಿಗೆ ಧಮ್ಕಿ ಹಾಕಿದ ಘಟನೆಗೆ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದರೆ, ಮುಂದೆ ಸಾರ್ವಜನಿಕ ಹಿತಾಸಕ್ತಿಯ ವರದಿ ಮಾಡುವ ಪತ್ರಕರ್ತರನ್ನು ಬೆದರಿಸುವ ಘಟನೆಗಳು ಹೆಚ್ಚಾಗುವ ಸಾಧ್ಯತೆಯಿದೆ.

ಆದ್ದರಿಂದ, ಪತ್ರಕರ್ತರ ಸುರಕ್ಷತೆ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ತಕ್ಷಣ ಕ್ರಮ ಕೈಗೊಂಡು, ಆರೋಪಿಗಳ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಜರುಗಿಸಬೇಕು. ಇಂತಹ ಘಟನೆಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದು ಎಂದರು. ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ದಸಾಪಾ ವಿಭಾಗೀಯ ಸಂಯೋಜಕರಾದ ಮೋಹನ ಕಟ್ಟಿಮನಿ, ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಮೋಹನ ಮೇಟಿ, ಸುರೇಶ ಬಿಜಾಪುರ ಹಾಗೂ ಅಯ್ಯಪ್ಪ ದೊಡ್ಡಮನಿ. ಮೊಹಮ್ಮದ್ ಶಫಿಶೆಖ. ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.