ಮಕ್ಕಳ ದೂರುಗಳು ಗ್ರಾಮದ ಅಭಿವೃದ್ಧಿಗೆ ಪೂರಕ: ಜಿಲ್ಲಾಧಿಕಾರಿ ದಿವ್ಯ ಪ್ರಭು

 ಮಕ್ಕಳ ದೂರುಗಳು ಗ್ರಾಮದ ಅಭಿವೃದ್ಧಿಗೆ ಪೂರಕ: ಜಿಲ್ಲಾಧಿಕಾರಿ ದಿವ್ಯ ಪ್ರಭು Children's complaints contribute to village development: Deputy Commissioner Divya Prabhu

               ಧಾರವಾಡ 18: ಭವಿಷ್ಯತ್ತಿನ ಬೆಳಕಾಗಿರುವ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯ ಹಾಗೂ ಸೂಕ್ತ ಪರಿಸರ ಸೃಷ್ಟಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮಕ್ಕಳ ಹಕ್ಕು ಮತ್ತು ಕರ್ತವ್ಯಗಳನ್ನು ಕಾಪಾಡುವದರೊಂದಿಗೆ ಅವರ ಬೇಕು ಬೇಡಿಕೆಗಳಿಗೆ ಸ್ಪಂದಿಸುವುದರಿಂದ ಗ್ರಾಮದ ಅಭಿವೃದ್ಧಿಗೆ ಪೂರಕ ಕಾರ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  ಅವರು ಇಂದು (ನ. 18) ಬೆಳಿಗ್ಗೆ ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದ ಗ್ರಾಮಪಂಚಾಯತದಿಂದ ಗ್ರಾಮದ ಸರಕಾರಿ ಶಾಲಾ ಆವರಣಲದಲಿ ಆಯೋಜಿಸಿದ್ದ ಮಾದನಭಾವಿ ಗ್ರಾಮ ಪಂಚಾಯತ ಮಕ್ಕಳ ವಿಶೇಷ ಗ್ರಾಮ ಸಭೆ ಉದ್ಘಾಟಿಸಿ, ಮಾತನಾಡಿದರು.  

              ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಅವರ ಭವಿಷ್ಯ ಕೇವಲ ಶಾಲೆಯ ಹೊಣೆಯಲ್ಲ. ಇದು ನಮ್ಮ ಸಮುದಾಯದ ಸಂಯುಕ್ತ ಜವಾಬ್ದಾರಿ. ಮಕ್ಕಳ ಆರೋಗ್ಯವನ್ನು ಬೆಳೆಸುವುದು ಒಂದು ಸಮೂಹದ ಕಾರ್ಯ. ಶಾಲೆಯಲ್ಲಿ ಪೋಷಕಾಂಶಯುಕ್ತ ಮಧ್ಯಾಹ್ನ ಊಟ, ಶುದ್ಧ ಕುಡಿಯುವ ನೀರು, ಶೌಚಾಲಯಗಳ ಸ್ವಚ್ಛತೆ, ಕ್ರೀಡಾ ಚಟುವಟಿಕೆಗಳು ಇವು ಅತಿ ಅವಶ್ಯಕ. ಇದರ ಜೊತೆಗೆ ಪೋಷಕರು ಮತ್ತು ಸಾರ್ವಜನಿಕರೂ ಸಹ ಸಮಾನವಾಗಿ ಕೈಜೋಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

                 ಮಕ್ಕಳ ಮನಸ್ಸು ಮುಗ್ಧ. ಮುಗ್ಧ ಮಕ್ಕಳು ನಿರ್ಭಯವಾಗಿ ಮಾತನಾಡಿ, ಗ್ರಾಮ ಪಂಚಾಯತ ವ್ಯಾಪ್ತಿಯ ಮಾದನಭಾವಿ, ಹೊಸಟ್ಟಿ, ಮುಗಳಿ ಗ್ರಾಮಗಳ ಅನೇಕ ಮೂಲಭೂತ ಸೌಕರ್ಯಗಳ ಬಗ್ಗೆ ಮತ್ತು ಶಾಲಾ ಶಿಕ್ಷಣದ ಬಗ್ಗೆ ವಾಸ್ತವ ಬೆಳಕು ಚಲ್ಲಿದ್ದಾರೆ. ಅವರ ಬೇಡಿಕೆಗಳಿಗೆ ಸ್ಪಂದಿಸಿ, ಆಶಯಗಳನ್ನು ಈಡೆರಿಸಿದರೆ ಗ್ರಾಮದ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. 

                ಮಕ್ಕಳಿಗೆ ತಮ್ಮ ಹಕ್ಕು, ಅಗತ್ಯ ಸೌಲಭ್ಯಗಳನ್ನು ಕೇಳುವ ಮುಕ್ತ ವಾತಾವರಣ ಇರಬೇಕು. ಇದರಿಂದ ಅವರಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಯುತ್ತದೆ. ಪ್ರಶ್ನೆ ಕೇಲುವ ಮನೋಭಾವ ಬೆಳೆಸಬೇಕು. ಇಂದಿನ ಸಭೆಯಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳು ಸಹಜ ನ್ಯಾಯಯುತ ಬೇಡಿಕೆಗಳಾಗಿವೆ. ಅಧಿಕಾರಿಗಳು ಸೀಮಿತ ಕಾಲಾವಧಿಯಲ್ಲಿ ಪರಿಹರಿಸಬೇಕು ಎಂದರು.  

              ನಿಯಮಿತ ಗ್ರಾಮ ಸಭೆಗಳಲ್ಲಿ ಮಕ್ಕಳ ಬೇಡಿಕೆಗಳಿಗೆ ಕಡಿಮೆ ಆದ್ಯತೆ ಸೀಗುವದರಿಂದ ಸರಕಾರವು ನವೆಂಬರ್ 14 ರಿಂದ ಜನವರಿ 24 ರವರಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲು ಸೂಚಿಸಿದೆ. ಅದರಂತೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಗಳ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಾದನಭಾವಿ ಗ್ರಾಮ ಪಂಚಾಯತದಿಂದ ಅಭಿಯಾನ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.  

              ಗ್ರಾಮದ ಮಕ್ಕಳ, ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವುದು ಗ್ರಾಮ ಪಂಚಾಯತ ಕರ್ತವ್ಯವಾಗಿದೆ. ಲಭ್ಯ ಅನುದಾನುವನ್ನು ಬಳಸಿಕೊಂಡು, ಸಮಸ್ಯೆ ಪರಿಹರಿಸಬೇಕು. ಮತ್ತು ಕ್ರಿಯಾಯೋಜನೆಯಲ್ಲಿ ಶಾಲಾ ಸುಧಾರಣೆ ಹಾಗೂ ಮಕ್ಕಳ ಮೂಲಭೂತ ಸೌಕರ್ಯಗಳ ಬಗ್ಗೆ ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.  ಇಂದಿನ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಹೆಣ್ಣುಮಕ್ಕಳ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಜಿಲ್ಲಾಧಿಕಾರಿಗಳು ಅವರನ್ನು ಅಭಿನಂದಿಸಿದರು.  

             ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಮಕ್ಕಳ ಗ್ರಾಮ ಸಭೆಯು ನಮ್ಮ ಮಕ್ಕಳ ಸಮಗ್ರ ಅಭಿವೃದ್ಧಿಗೆ ಅತ್ಯಂತ ಮಹತ್ವದ ವೇದಿಕೆ. ಮಕ್ಕಳ ಪ್ರತಿಭೆ, ಅವರ ಅಗತ್ಯಗಳು, ಶಾಲೆಯ ಪ್ರಗತಿ ಮತ್ತು ಗ್ರಾಮದಲ್ಲಿ ಮಕ್ಕಳ ಸಂಬಂಧಿತ ಸೌಕರ್ಯಗಳ ಬಗ್ಗೆ ಚರ್ಚಿಸುವುದು ಈ ಸಭೆಯ ಉದ್ದೇಶ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ನಾಯಕತ್ವ ಗುಣ, ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವ ಧೈರ್ಯ ಮತ್ತು ತಮ್ಮ ಹಕ್ಕುಗಳ ಅರಿವು ಮೂಡಿಸುತ್ತವೆ ಎಂದು ಹೇಳಿದರು. 

                  ಗ್ರಾಮದ ಪರಿಸರ ಆರೋಗ್ಯಕರವಾಗಿರಲು ಸಾರ್ವಜನಿಕರು ಪಂಚಾಯಿತಿ ಜೊತೆ ಸಹಕರಿಸಬೇಕು. ಹಾಗೂ ಗ್ರಾಮ ಪಂಚಾಯಿತಿಯೂ ಮಕ್ಕಳ ಹಿತದೃಷ್ಟಿಯಿಂದ ಎಲ್ಲ ಕೆಲಸಗಳನ್ನು ಮಾಡಲು ಸಂಪೂರ್ಣ ಸಿದ್ದವಾಗಿದೆ. ಶಾಲೆಯ ನವೀಕರಣ, ಕ್ರೀಡಾಂಗಣ ಅಭಿವೃದ್ಧಿ, ನೀರು, ವಿದ್ಯುತ್ ವ್ಯವಸ್ಥೆ, ಶಾಲಾ ಆವರಣ ಸ್ವಚ್ಛತೆ, ಮಕ್ಕಳಿಗೆ ಸುರಕ್ಷಿತ ಪ್ರವೇಶ ಮತ್ತು ನಿರ್ಗಮನವನ್ನು ಜಿಲ್ಲಾ ಪಂಚಾಯತ ಹಾಗೂ ಶಿಕ್ಷಣ ಇಲಾಖೆ ಸೇರಿಕೊಂಡು ನಿರ್ವಹಣೆ ಮಾಡುತ್ತವೆ ಎಂದು ಹೇಳಿದರು. 

ನಿಮ್ಮ ಗ್ರಾಮದ ಬದಲಾವಣೆ ನಿಮ್ಮ ಮೂಲಕವೇ ಆರಂಭವಾಗುತ್ತದೆ. ಶಾಲೆಯಲ್ಲಿ ಚೆನ್ನಾಗಿ ಕಲಿಯಿರಿ, ಆರೋಗ್ಯಕರ ಜೀವನ ಪಾಲಿಸಿರಿ, ನಿಮ್ಮ ಕನಸುಗಳು ದೊಡ್ಡವಾಗಿರಲಿ, ಅದಕ್ಕೆ ನಾವು ಮತ್ತು ಜಿಲ್ಲಾಡಾಳಿತ ನಿಮಗೇ ಬೇಕಾದ ಸಹಾಯ ಮಾಡುವೆವು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು. 

               ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಾದನಭಾವಿ, ಹೊಸಟ್ಟಿ ಮತ್ತು ಮುಗಳಿ ಗ್ರಾಮದ ಶಾಲಾ ಮಕ್ಕಳು ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ, ರಸ್ತೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ದೈಹಿಕ ಶಿಕ್ಷಕರ ನೇಮಕ, ಆಟದ ಮೈದಾನ, ಕಾಂಪೌಂಡ್ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ ಬಗ್ಗೆ, ರಂಗಮಂದಿರ ನಿರ್ಮಾಣದ ಬಗ್ಗೆ, ಕೌಶಲ್ಯ ಶಿಕ್ಷಕರ ನೇಮಕದ ಬಗ್ಗೆ, ಶಾಲಾ ದುರಸ್ತಿ ಬಗ್ಗೆ, ವಿದ್ಯುತ್ ವ್ಯವಸ್ಥೆಯ ಬಗ್ಗೆ, ಬಸ್ ಸೌಕರ್ಯದ ಬಗ್ಗೆ, ಶಾಲಾ ಆವರಣದ ಸ್ವಚ್ಛತೆ ಹೀಗೆ ಹಲವಾರು ವಿಷಯಗಳ ಬಗ್ಗೆ ಗ್ರಾಮ ಪಂಚಾಯತ ಅಧ್ಯಕ್ಷರನ್ನು, ಜಿಲ್ಲಾಧಿಕಾರಿಗಳನ್ನು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಪ್ರಶ್ನಿಸಿ, ಅವರ ಮುಂದೆ ತಮ್ಮ ಮನವಿಗಳನ್ನು ಹೇಳಿಕೊಂಡರು.  ಮಾದನಭಾವಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಲಪ್ಪ ಪಾಟೀಲ ಅವರು ಮಕ್ಕಳ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  

                   ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಅವರು ಸ್ವಾಗತಿಸಿದರು. ಮಾದನಭಾವಿ ಗ್ರಾಮ ಪಂಚಾಯತ ಪಿಡಿಓ ಆಗಿರುವ ಐಎಎಸ್ ಪ್ರೊಬೇಷನರಿ ಅಧಿಕಾರಿ ರೀತೀಕಾ ವರ್ಮಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಭಾಗಿ ಅವರು ಮಕ್ಕಳ ವಿಶೇಷ ಗ್ರಾಮ ಸಭೆಯ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ತಡಕೋಡ ಸಿಆರ್‌ಪಿ ಆರ್‌.ಎಮ್‌.ಕುರ್ಲಿ, ಮಾದನಭಾವಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ಸಪ್ನಾ ಅರ್ಕಸಾಲಿ ಹಾಗೂ ರವಿ ದಾಸರ ಅವರು ನಿರೂಪಿಸಿದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್‌.ಆರ್‌. ಬೆಟದೂರ ವಂದಿಸಿದರು.  

                ಮಕ್ಕಳ ಅಹವಾಲು ಸಲ್ಲಿಕೆ: ಕಾರ್ಯಕ್ರಮದಲ್ಲಿ ತಡಕೋಡ ಸಿಆರ್‌ಪಿ ಆರ್‌.ಎಂ.ಕುರ್ಲಿ, ಮಾದನಭಾವಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕುಮಾರ ಜಿ.ಎನ್‌., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಆನಂದ ಲಮಾಣಿ, ಹೊಸಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ತಿಪ್ಪೇಶ ಆರ್‌., ಮುಗಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಂಡಿತ ಪೋತೆ ಹಾಗೂ ಅವರು ತಮ್ಮ ತಮ್ಮ ಶಾಲೆಯ ವಿದ್ಯಾರ್ಥಿಗಳ ಮನವಿಗಳನ್ನು ಹೊಂದಿರುವ ಕಡತಗಳನ್ನು ಮಾದನಭಾವಿ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಸಲ್ಲಿಸಿದರು.  

               ಕ್ರೀಡಾ ಸಾಮಾಗ್ರಿ ವಿತರಣೆ: ಮಕ್ಕಳ ಗ್ರಾಮ ಸಭೆಯಲ್ಲಿ ವಿವಿಧ ಶಾಲೆಗಳಿಗೆ ಹಾಗೂ ಮಾದನಭಾವಿ ಗ್ರಾಮ ಪಂಚಾಯತಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಸಿಇಓ ಅವರು ಕೆರಂ, ಪುಟಬಾಲ್, ವ್ಹಾಲಿಬಾಲ್, ರಿಂಗ್, ಗುಂಡು ಎಸೆತ ಸಾಧನ, ಜಾವಲಿನ್ ಎಸತ ಸಾಧನ, ಬ್ಯಾಟಮಿಟನ್, ಕ್ರಿಕಟ್ ಸಾಮಗ್ರಿ ಸೇರಿದಂತೆ ವಿವಿಧ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿದರು. 

                    ಮಕ್ಕಳೊಂದಿಗೆ ಸಹ ಬೋಜನ: ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಹಾಗೂ ಮಾದನಭಾವಿ ಗ್ರಾಮ ಪಂಚಾಯತ ಪಿಡಿಓ ಆಗಿರುವ ಐಎಎಸ್ ಪ್ರೊಬೇಷನರಿ ಅಧಿಕಾರಿ ರೀತೀಕಾ ವರ್ಮಾ, ಬಿಇಓ ರಾಮಕೃಷ್ಣ ಸದಲಗಿ ಅವರು ವಿದ್ಯಾರ್ಥಿಗಳೊಂದಿಗೆ ನೆಲಹಾಸಿನ ಮೇಲೆ ಕುಳಿತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಮಧ್ಯಾಹ್ನ ಬಿಸಿಯೂಟ ಸೇವಿಸಿದರು.  ಮಕ್ಕಳ ಜಾಗೃತಿಗಾಗಿ ವಿಶೇಷ ಉಪನ್ಯಾಸ: ಮಾದನಭಾವಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ಮಕ್ಕಳ ವಿಶೇಷ ಗ್ರಾಮ ಸಭೆಯ ನಂತರ ಮಕ್ಕಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಅಧಿಕಾರಿಗಳು ವಿಶೇಷ ಉಪನ್ಯಾಸದ ಮೂಲಕ ಪರಿಚಯಿಸಿದರು.  

                 ಯುವಜನ ಮತ್ತು ಕ್ರೀಡಾ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮಲಾಪುರ, ಕಲೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ರವೀಂದ್ರ ದ್ಯಾಬೇರಿ, ಶಾಲಾ ಶಿಕ್ಷಣ ಇಲಾಖೆ ಕುಮಾರ್ ಕೆ.ಎಫ್‌. ಅವರು ಮಕ್ಕಳ ವಿಶೇಷ ಗ್ರಾಮ ಸಭೆಯ ಯೋಜನೆಗಳ ಕುರಿತು, ಮಕ್ಕಳ ಯೋಜನೆಗಳ ಕುರಿತು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಕುಂಬಾರ, ಪೌಷ್ಟಿಕಾಂಶ ಮತ್ತು ಮಕ್ಕಳ ಆರೋಗ್ಯದ ಕುರಿತು ಆಲ್ಮಾಸ ನದಾಫ, ಮಹಿಳಾ ಪೊಲೀಸ್ ಠಾಣೆಯ ಪ್ರೊಫೆಷನರಿ ಪಿಎಸ್‌ಐ ನೇತ್ರಾವತಿ ಪವಾರ ಅವರು ಪೋಕ್ಸೋ ಕಾಯ್ದೆಯ ಬಗ್ಗೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಡಿಸಿಪಿಯು ಕರೆಪ್ಪ ಕೌಜಲಗಿ ಅವರು ಮಕ್ಕಳ ಹಕ್ಕುಗಳ ಕುರಿತು ಹಾಗೂ ನ್ಯಾಯವಾದಿ ಸಾವಿತ್ರಿ ಪಾಟೀಲ ಅವರು ಸಖಿ ಒನ್ ಕೇಂದ್ರದ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದರು.  

                  ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.ಕೆಳದಿಮಠ, ಧಾರವಾಡ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ಎಚ್‌.ಎಚ್‌.ಕುಕನೂರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್‌.ಎಮ್‌.ಹೊನಕೇರಿ, ಧಾರವಾಡ ತಾಲೂಕಾ ವೈದ್ಯಾಧಿಕಾರಿ ಡಾ. ಕೆ.ಎನ್‌.ತನುಜಾ ಮತ್ತು ಮಾದನಭಾವಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಮಹಾದೇವಿ ಈರಯ್ಯ ಹಿರೇಮಠ, ಸದಸ್ಯರಾದ ಗೌರವ್ವ ನಂದಿಹಳ್ಳಿ, ಶೋಭಾ ಗುಳದಕೊಪ್ಪ, ಗಂಗಪ್ಪ ತೋಟಗಿ, ಮಂಜು ಗುಳದಕೊಪ್ಪ, ರತ್ನಾ ಭಜಂತ್ರಿ, ಶೋಭಾ ಕಂಬಾರಗಣವಿ, ಮಂಜುನಾಥ ಕೇರಾಳಿ, ಮಂಜುನಾಥ ಪಾಟೀಲ, ಕಸ್ತೂರೆವ್ವ ದೊಡವಾಡ, ಮಾರುತಿ ನಾಯ್ಕರ, ಸುಖಮುನಿ ಹಜೇರಿ, ಈಶ್ವರ​‍್ಪ ಸಿದ್ದುಮನಿ, ಸುಶೀಲಾ ದಳವಾಯಿ, ಭಾರತಿ ಮಡಿವಾಳರ ಇದ್ದರು.  ವಿಶೇಷ ಮಕ್ಕಳ ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮಾದನಭಾವಿ, ಹೊಸಟ್ಟಿ ಮತ್ತು ಮುಗಳಿ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳು, ಯುವಕರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಸದಸ್ಯರು, ಶಾಲಾ ಶಿಕ್ಷಕರು, ಗ್ರಾಮದ ಪ್ರಮುಖರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.