ಕೇಂದ್ರ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ
ಕೇಂದ್ರ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ
ರಾಯಬಾಗ 15 : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಪ್ಪಾಸಾಹೇಬ ಕುಲಗುಡೆ ಅವರನ್ನು ಗುರುವಾರ ಸಾಯಂಕಾಲ ಪಟ್ಟಣದ ನಾಗರಿಕರು ಹಾಗೂ ತಾಲೂಕಿನ ಸಹಕಾರಿ ಸಂಘಗಳ ಸದಸ್ಯರು ಅದ್ಧೂರಿಯಾಗಿ ಸತ್ಕರಿಸಿದರು.
ಸಾಯಂಕಾಲ ಪಟ್ಟಣಕ್ಕೆ ಆಗಮಿಸಿದ ನೂತನ ಅಧ್ಯಕ್ಷರಾದ ಅಪ್ಪಾಸಾಹೇಬ ಕುಲಗುಡೆ ಅವರನ್ನು ವಾದ್ಯಮೇಳದೊಂದಿಗೆ ಸ್ವಾಗತಿಸಿಕೊಂಡ ಪಟ್ಟಣದ ನಾಗರೀಕರು, ನಂತರ ಕುಲಗುಡೆ ತೋಟದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಅಪ್ಪಾಸಾಹೇಬ ಕುಲಗುಡೆ ಅವರು, ಜಿಲ್ಲೆಯ ಎಲ್ಲ ಹಿರಿಯ ಮುಖಂಡರ ಸಹಕಾರದಿಂದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡಿರುವುದು ಅತ್ಯಂತ ಸಂತೋಷವಾಗಿದೆ. ನನ್ನ ಅಧಿಕಾರವಧಿಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಡಿಸಿಸಿ ಬ್ಯಾಂಕ್ ಏಳ್ಗೆಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ. ತಾಲೂಕಿನ ಎಲ್ಲ ಸಹಕಾರಿ ಸಂಘಗಳಿಗೆ ಕೇಂದ್ರ ಬ್ಯಾಂಕ್ನಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದರು.
ವಕೀಲ ಆರ್.ಎಸ್.ಶಿರಗಾಂವೆ ಮಾತನಾಡಿ, ಬಿಡಿಸಿಸಿ ಅಧ್ಯಕ್ಷರಾದ ಅಪ್ಪಾಸಾಹೇಬ ಕುಲಗುಡೆ ಅವರು 19 ವರ್ಷಗಳಿಂದ ನಿರ್ದೇಶಕರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರಿಂದ ಇಂದು ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಅವರ ಅಧಿಕಾರವಧಿಯಲ್ಲಿ ತಾಲೂಕಿನ ಸಹಕಾರಿಗಳಿಗೆ ಹೆಚ್ಚಿನ ಅನುದಾನ ದೊರಕುವಂತಾಗಲಿ ಎಂದು ಶುಭಹಾರೈಸಿದರು.
ಅಭಿನಂದನಾ ಸಮಾರಂಭದಲ್ಲಿ ಜಿನ್ನಪ್ಪ ಅಸ್ಕಿ, ಅಣ್ಣಾಸಾಹೇಬ ಕುಲಗುಡೆ, ಅಣ್ಣಾಸಾಹೇಬ ಮೇತ್ರಿ, ರಾಮಣ್ಣ ಗಸ್ತಿ, ಸುನೀಲಗೌಡ ಪಾಟೀಲ, ಕೃಷ್ಣಾ ಕೋಟಿವಾಲೆ, ನಾರಾಯಣ ಮೇತ್ರಿ, ಕಿರಣ ಸಂಕಪಾಳ, ಮಹೇಶ ಕೊರವಿ, ಗೋವಿಂದ ಕುಲಗುಡೆ, ಚನ್ನಪ್ಪ ಯಡವಣ್ಣವರ, ಪಾರೀಶ ಉಗಾರೆ, ಶಿವಪ್ಪ ಕುಲಗುಡೆ, ರವಿ ಮಾಳಿ, ಚನ್ನಮಲ್ಲ ಮಗದುಮ್ಮ, ವಸಂತ ಹೊಸಮನಿ, ಶ್ರೀಧರ ಖಿಚಡೆ, ವಸಂತ ಕುಲಗುಡೆ, ಹಾಜಿ ಮುಲ್ಲಾ, ಫಾರೂಕ ಮೊಮಿನ, ಗಂಗಪ್ಪ ಗೋಕಾಕ, ಸುರೇಶ ಜಂಬಗಿ ಸೇರಿದಂತೆ ಅನೇಕರು ಇದ್ದರು.