ಪದ್ಮಶ್ರೀ ಸೂಲಗಿತ್ತಿ ನರಸಮ್ಮ 106ನೇ ಜನ್ಮದಿನ ಆಚರಣೆ

ಪದ್ಮಶ್ರೀ ಸೂಲಗಿತ್ತಿ ನರಸಮ್ಮ 106ನೇ ಜನ್ಮದಿನ ಆಚರಣೆ  Celebration of Padma Shri Sulagitti Narasamma's 106th Birth Anniversary

ಸವದತ್ತಿ    03: ವೈದ್ಯಕೀಯ ಸೌಲಭ್ಯಗಳ ಕೊರತೆಯಿದ್ದ ಕಾಲದಲ್ಲಿ, ಸುಮಾರು ಏಳು ದಶಕಗಳ ಕಾಲ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಾವಿರಾರು ತಾಯಂದಿರ ಪಾಲಿಗೆ ದೇವದೂತರಾಗಿ ಸೇವೆ ಸಲ್ಲಿಸಿದ ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ಡಾ. ನರಸಮ್ಮ ಅವರ 106ನೇ ಜನ್ಮದಿನಾಚರಣೆಯನ್ನು ಸವದತ್ತಿಯ ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೃಹರಕ್ಷಕಿ ರೇಣುಕಾ ಎನ್‌. ದೇಸಾರ ಮಾತನಾಡಿ, ನರಸಮ್ಮ ಅವರು ಕೇವಲ ಹೆರಿಗೆ ಮಾಡಿಸುವವರಾಗಿರಲಿಲ್ಲ, ಬದಲಾಗಿ ಅಸಂಖ್ಯಾತ ಕುಟುಂಬಗಳ ಪಾಲಿನ ಆಶಾಕಿರಣವಾಗಿದ್ದರು.

ಹಳ್ಳಿ-ಹಳ್ಳಿಗಳಿಗೆ ತೆರಳಿ 1500ಕ್ಕೂ ಹೆಚ್ಚು ಸುರಕ್ಷಿತ ಹೆರಿಗೆಗಳನ್ನು ಮಾಡಿಸುವ ಮೂಲಕ ಅವರು ತೋರಿದ ನಿಸ್ವಾರ್ಥ ಸೇವೆಗೆ ಇಡೀ ದೇಶವೇ ಗೌರವ ಸಲ್ಲಿಸಿದೆ. ಇಂದಿನ ಯುವ ಪೀಳಿಗೆ ಅವರ ಜೀವನಮೌಲ್ಯಗಳನ್ನು ಮತ್ತು ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ, ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಡಾ. ನರಸಮ್ಮ ಅವರ ಜೀವನದ ಆದರ್ಶಗಳನ್ನು ಪರಿಚಯಿಸಲಾಯಿತು. ಈ ಮಹಾನ್ ಚೇತನದ ಸ್ಮರಣೆಯು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಲ್ಲೂ ಸೇವಾ ಮನೋಭಾವವನ್ನು ಉತ್ತೇಜಿಸುವಂತಾಯಿತು.ಈ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಆರ್‌.ಎನ್‌. ಕದಂ, ಎಸ್‌.ಜಿ. ಸಿಂಗಾರಗೊಪ್ಪ, ಉಮೇಶ್ ಹಡಪದ, ಕಲ್ಲನಗೌಡ ಸುಳ್ಳದ, ಮಂಜುನಾಥ ಈಟಿ, ವಸತಿ ನಿಲಯದ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.