ವಕೀಲರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ

ವಕೀಲರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ

ಕಾಗವಾಡ 15 : ತಾಲೂಕಿನ ವಕೀಲರ ಸಂಘದ ವತಿಯಿಂದ ನ್ಯಾಯಲಯ ಕಟ್ಟಡ ನಿರ್ಮಾಣಕ್ಕೆ ಸ್ಥಳದ ಬೇಡಿಕೆಗಾಗಿ ತಾಲೂಕಾ ವಕೀಲರ ಸಂಘದಿಂದ ದಿ. 11 ರಿಂದ ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಶುಕ್ರವಾರ ದಿ. 15 ರಂದು ಭೇಟ್ಟಿ ನೀಡಿ, ಬೇಡಿಕೆ ಈಡೇರಿಸಲು ಪ್ರಾಮಾಣಿವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದು, ಬರುವ ಚಳಿಗಾಲದ ಅಧಿವೇಶನ ಪೂರ್ವದಲ್ಲಿ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇನೆಂಬ ಭರವಸೆ ನೀಡಿದ್ದಾರೆ.  

ನಾನು ಸಹಕಾರ ಸಚಿವ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನಿಮ್ಮ ಬೇಡಿಕೆ ನನ್ನ ಗಮನದಲ್ಲಿದೆ. ಸ್ಥಳೀಯ ಶಾಸಕ ರಾಜು ಕಾಗೆ ಅವರೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ, ಬರುವ ಚಳಿಗಾಲದ ಅಧಿವೇಶನ ಪೂರ್ವದಲ್ಲಿ ನಿಮಗೆ ಸಿಹಿಸುದ್ದಿ ನೀಡುತ್ತೇನೆ. ಒಂದು ವೇಳೆ ವಿಳಂಬವಾದಲ್ಲಿ ಇದೇ ಟೇಂಟಿನಲ್ಲಿ ನಿಮ್ಮೊಂದಿಗೆ ಮುಷ್ಮರಕ್ಕೆ ಕುಳಿತು, ನಿಮ್ಮ ಬೇಡಿಕೆ ಈಡೇರುವ ವರೆಗೆ  ನಿಮ್ಮೊಂದಿಗೆ ಇರುತ್ತೇನೆ ಎಂಬ ಭರವಸೆ ನೀಡಿ, ಮುಷ್ಕರ ಹಿಂದಕ್ಕೆ ಪಡೆಯಲು ಕೇಳಿಕೊಂಡರು. 

ನಂತರ ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಪಿ.ಎ. ಮಾನೆ ಮಾಡತಾಡಿ, ಲಕ್ಷ್ಮಣ ಸವದಿಯವರ ಭರವಸೆಯ ನಂತರ ನಮ್ಮ ಮುಷ್ಕರವನ್ನು ಹಿಂಪಡೆದಿದ್ದೇವೆ ಎಂದು ಘೋಷಿಸಿದರು. ಇದೇ ವೇಳೆ ವಕೀಲರಾದ ಬಿ.ಆರ್‌. ರಾವ ಮತ್ತು ಹಿರಿಯರಾದ ವೀರಭದ್ರ ಕಟಗೇರಿ ಮಾತನಾಡಿದರು.ಇದಕ್ಕೂ ಮೊದಲು ವಕೀಲರ ಸಂಘದ ಸದಸ್ಯರು ಸಭೆ ನಡೆಸಿ, ಲಕ್ಷ್ಮಣ ಸವದಿಯವರ ಭರವಸೆಯಂತೆ ಈಗ ಪ್ರಾರಂಭಿಸಿದ ಮುಷ್ಕರ ಹಿಂದಕ್ಕೆ ಪಡೆದು, ಅವರಿಗೆ ಸಾತ ನೀಡೋಣ. ಒಂದು ವೇಳೆ ಮತ್ತೆ ವಿಳಂಬವಾದಲ್ಲಿ ಉಗ್ರವಾದ ಹೋರಾಟಕ್ಕೆ ನಾವೆಲ್ಲರು ಸಜ್ಜಾಗೋಣವೆಂಬ ನಿರ್ಣಯ ಕೈಗೊಂಡರು.ಈ ಸಮಯದಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ, ವಕೀಲರ ಸಂಘದ ಅಧ್ಯಕ್ಷ ಪಿ.ಎ. ಮಾನೆ, ಉಪಾಧ್ಯಕ್ಷ ಬಿ.ಎ. ಮಗದುಮ್ಮ. ಕಾರ್ಯದರ್ಶಿ ಎಂ.ಜಿ. ವಡ್ಡರ ಸೇರಿದಂತೆ ತಾಲೂಕಾ ವಕೀಲರ ಸಂಘದ ಎಲ್ಲ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.  

ಕಳೆದ ಐದು ದಿನಗಳಿಂದ ತಾಲೂಕಿನ ಎಲ್ಲ ವಕೀಲರು ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದು, ಮುಷ್ಕರಕ್ಕೆ ಕುಳಿತು, ಸರ್ಕಾರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಈಗ ಕಾಗವಾಡ ಮತ್ತು ಅಥಣಿ ಶಾಸಕರು ಸ್ಥಳಕ್ಕೆ ಭೇಟ್ಟಿ ನೀಡಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದ ಮೇಲೆ ಮುಷ್ಕರ ಕೊನೆಗೊಂಡಿರುವುದು ತಾಲೂಕಿನ ಜನರಲ್ಲಿ ಸಂತಸ ಮೂಡಿಸಿದೆ.