ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ 19ನೇ ಅಂತರ್ ಮಹಾವಿದ್ಯಾಲಯಗಳ ಶಕ್ತಿ ಸಂಭ್ರಮ ಕಾರ್ಯಕ್ರಮ
ವಿಜಯಪುರ 27 : ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರಿ ಇರಬೇಕು. ಜೀವನದಲ್ಲಿ ಗುರಿ ಇಲ್ಲದ್ದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ 19ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇವತ್ತು ಮಹಿಳೆ ಸಾಧನೆ ಮಾಡದ ಕೇತ್ರ ಯಾವುದೂ ಉಳಿದಿಲ್ಲ. ವೈಜ್ಞಾನಿಕ, ಕ್ರೀಡೆ ಹೀಗೆ ಎಲ್ಲ ಕೇತ್ರಗಳಲ್ಲಿ ಮಹಿಳೆಯರು ಮುಂದೆ ಇದ್ದೇವೆ. ಆದರೆ ಮಹಿಳೆಯರ ಸಾಧನೆಯನ್ನು ಗುರುತಿಸುವ ಕೆಲಸಗಳಾಗುತ್ತಿಲ್ಲ. ಅದಕ್ಕೆ ತಲೆ ಕೆಡಿಸಿಕೊಳ್ಳದೇ ಸಾಧನೆ ಮಾಡುವುದರತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ಮಾಡಿದರು.
ಜೀವನ ವಿಕಸನ ಮಾಡುವ, ಭವಿಷ್ಯ ರೂಪಿಸಿಕೊಳ್ಳುವ ಘಟ್ಟ ಕಾಲೇಜು ದಿನಗಳು. ಕಾಲೇಜು ವಿದ್ಯಾರ್ಥಿನಿಯರು ಆಗಿರುವ ನೀವು ಸ್ಪರ್ಧಾತ್ಮಕ ಜಗತ್ತನ್ನು ಮೀರಬೇಕು. ಮಹಿಳೆಯರು ನಾವೆಲ್ಲ ಒಂದು. ಮಹಿಳೆಯರು ಒಬ್ಬರಿಗೊಬ್ಬರು ಸಹಾಯ ಮಾಡುತ್ತ ಮುಂದೆ ಸಾಗಬೇಕು. ಅಂದಾಗ ಮಾತ್ರ ನಾವು ಯಶಸ್ಸು ಸಾಧಿಸಲು ಸಾಧ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕು. ಅದಕ್ಕೆ ಸತತ ಪರಿಶ್ರಮ ಬೇಕು. ಸುಂದರವಾದ ಸಮಾಜ, ದೇಶ, ಸಂಸ್ಕೃತಿ ನಮ್ಮಲ್ಲಿದೆ. ಮಹಾನ್ ವ್ಯಕ್ತಿಗಳ ನಾಡಿನಲ್ಲಿ ಹುಟ್ಟಿದ್ದೇವೆ. ಅವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಗುರಿ ಸಾಧಿಸಬೇಕು ಎಂದೂ ಅವರು ಹೇಳಿದರು.
ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಅದನ್ನು ಸ್ವೀಕರಿಸಿ ಅದನ್ನು ಎದುರಿಸುವ ಸಾಮರ್ಥ್ಯ ಗಳಿಸಿಕೊಳ್ಳಬೇಕು. ಅಂದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಜೀವನದಲ್ಲಿ ಹೋರಾಟ ಬಹಳ ಮುಖ್ಯ. ಜೀವನದ ಪತ್ರಿಯೊಂದು ಘಟದಲ್ಲಿ ಯಶಸ್ಸು ಸಾಧಿಸಲು ಹೋರಾಟ ಮಾಡಿ. ಅಂದಾಗ ಮಾತ್ರ ಜೀವನದಲ್ಲಿ ನೀವು ಯಶಸ್ಸು ಗಳಿಸಲು ಸಾಧ್ಯ. ಮಹಿಳಾ ಸಾಧಕಿಯರು ನಮ್ಮ ಆದರ್ಶಗಳಾಬೇಕು. ಅವರ ಜೀವನಾದರ್ಶಗಳನ್ನು ನಮ್ಮ ಮಾದರಿಯಾಗಿ ಇಟ್ಟುಕೊಂಡು ಅವರಂತೆ ಸಾಧನೆ ಮಾಡುವ ಪ್ರಯತ್ನಗಳನ್ನು ನೀವೆಲ್ಲರೂ ಮಾಡಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಸಮಾರಂಭದಲ್ಲಿ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಮಾತನಾಡಿ, ವಿದ್ಯಾರ್ಥಿನಿಯರು ಛಲಗಾರ್ತಿಯಾಗಬೇಕು. ಜೀವನದಲ್ಲಿ ದುರ್ಬಲರಾದರೆ ನಾವು ಏನನ್ನು ಸಾಧಿಸಲು ಸಾಧ್ಯವಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಯಶಸ್ಸುಗಳಿಸಲು ಸತತ ಪರಿಶ್ರಮ ಅಗತ್ಯ ಎಂದರು.
ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯವಾಗಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 100 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿಸಿಕೊಡಬೇಕು ಎಂದು ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಲ್ಲಿ ಮನವಿ ಮಾಡಿಕೊಂಡರು.
ಮಕ್ಕಳ ಸಾಹಿತಿ ಶಂ.ಗು.ಬಿರಾದಾರ ಅವರು ಬರೆದಿರುವ ನಾವು ‘ಎಳೆಯರು, ನಾವು ಗೆಳೆಯರು’ ಗೀತೆಯನ್ನು ರಾಜ್ಯದ ಅಧಿಕೃತ ಮಕ್ಕಳ ಗೀತೆಯನ್ನಾಗಿ ಮತ್ತು ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಗೀತಾ ಬಾಲಿ ಅವರು ಬರೆದಿರುವ ಮಹಿಳಾ ಗೀತೆಯನ್ನು ರಾಜ್ಯದ ಮಹಿಳಾ ಕಾಲೇಜುಗಳು ಮತ್ತು ರಾಜ್ಯ ಸರ್ಕಾರದ ಮಹಿಳಾ ಕಾರ್ಯಕ್ರಮಗಳಲ್ಲಿ ಧ್ಯೇಯಗೀತೆಯನ್ನಾಗಿ ಹಾಡುವಂತೆ ರಾಜ್ಯ ಸರ್ಕಾರ ಅದೇಶ ಹೊರಡಿಸಬೇಕು ಎಂದು ಬಬಲೇಶ್ವರ ಅವರು ಆಗ್ರಹಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ನಿಮ್ಮಲ್ಲಿರುವ ಉತ್ಸಾಹ, ಸೃಜನಶೀಲತೆ ಹಾಗೂ ಕೌಶಲ್ಯ ಅನಾವರಣಕ್ಕೆ ಇದು ಒಂದು ದೊಡ್ಡ ವೇದಿಕೆಯಾಗಿದೆ. ವಿಶ್ವವಿದ್ಯಾನಿಲಯದ ಮೂಲ ಉದ್ದೇಶ ಶಿಕ್ಷಣದ ಮೂಲಕ ಸಬಲೀಕರಣವಾಗಬೇಕು. ನಿಮ್ಮ ಸಬಲೀಕರಣದ ಮೂಲಕ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಜೀವನವನ್ನು ಕಟ್ಟಿಕೊಂಡು ಈ ಸಮಾಜಕ್ಕೆ ಆದರ್ಶ ಮಹಿಳೆಯಾಗಬೇಕು ಎಂದರು.
ಇಲ್ಲಿ ಸಾಕಷ್ಟು ಸವಾಲುಗಳು ಮತ್ತು ಅವಕಾಶಗಳು ಇದ್ದು ಅದರ ಮಧ್ಯ ಒಂದು ಗಟ್ಟಿ ಜೀವನವನ್ನು ಕಟ್ಟಿಕೊಳ್ಳಲು ವಿಶ್ವವಿದ್ಯಾನಿಲಯ ನಮಗೆ ನೀಡಿರುವ ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳಬೇಕು. ಇದರ ಜೊತೆಗೆ ವೃತ್ತಿಪರ ಜೀವನವನ್ನು ಕಟ್ಟಿಕೊಳ್ಳಬೇಕು. ವೃತ್ತಿಪರ ಜೊತೆಗೆ ಎಲ್ಲ ಕೌಶಲ್ಯಗಳನ್ನು ಕಲಿಯಬೇಕು. ಈ ಮೂರು ದಿನಗಳ ಕಾಲ ಎಲ್ಲ ಸ್ಪರ್ಧೆಗಳಲ್ಲಿ ನಿಮ್ಮ ಕೌಶಲ್ಯ ಅಭಿವ್ಯಕ್ತವಾಗುತ್ತಿದ್ದು ಅದನ್ನು ಎಲ್ಲ ರೀತಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್ ಹಾಗೂ ತೊರವಿ ಗ್ರಾಮ ಪಂಚಾಯತ ಅಧ್ಯಕ್ಷೆ ಪದ್ಮಾಬಾಯಿ ರೇವಣಸಿದ್ದಪ್ಪ ನಡಗಡಿ ಅವರನ್ನು ವಿಶ್ವವಿದ್ಯಾನಿಲಯದ ಪರವಾಗಿ ಸನ್ಮಾನಿಸಲಾಯಿತು.
ಯುವಜನೋತ್ಸವದ ಆರಂಭಕ್ಕೂ ಮುನ್ನ ವಿವಿಯ ಮುಂಭಾಗದಿಂದ ವೇದಿಕೆಯ ವರೆಗೆ ಸಾಂಸ್ಕೃತಿಕ ಮೆರವಣಿಗೆ ಏರಿ್ಡಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ತೊರವಿ ಗ್ರಾಮ ಪಂಚಾಯತ ಅಧ್ಯಕ್ಷೆ ಪದ್ಮಾಬಾಯಿ ರೇವಣಸಿದ್ದಪ್ಪ ನಡಗಡ್ಡಿ, ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ನಾಡಗೀತೆ ಮತ್ತು ಮಹಿಳಾ ಗೀತೆಯನ್ನು ಹಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪ್ರೊ.ವಿಷ್ಣು ಶಿಂದೆ ನಿರೂಪಿಸಿದರು. ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ವಂದಿಸಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ 19ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಕಾರ್ಯಕ್ರಮವನ್ನು ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮತ್ತಿತರು ಉದ್ಘಾಟಿಸಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ 19ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ 19ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಕಾರ್ಯಕ್ರಮದಲ್ಲಿ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಮಾತನಾಡಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಆಯೋಜಿಸಿದ್ದ 19ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಕೆ ತುಳಸಿಮಾಲ ಮಾತನಾಡಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಆಯೋಜಿಸಿದ್ದ 19ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಸಾಂಸ್ಕೃತಿಕ ಕಲಾಮೇಳ ಏರಿ್ಡಸಲಾಗಿತ್ತು.