ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ 129 ನೇ ಜನ್ಮ ದಿನಾಚರಣೆ

ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ 129 ನೇ ಜನ್ಮ ದಿನಾಚರಣೆ  129th birth anniversary of India's iconic freedom fighter Netaji Subhas Chandra Bose


                  ವಿಜಯಪುರ 23 : ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವುದರ ಭಾಗವಾಗಿ ಇಂದು ದಿನಾಂಕ 23-01-2026 ರಂದು ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಮಂಜರಗಿ ತೋಟದ ವಸತಿ, ನಿಡೋಣಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಹೋರಾಟಗಾರ  ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ 129 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಕ್ರಿಯಾಶೀಲ ಶಿಕ್ಷಕರಾದ  ಪ್ರವೀಣ ಪತ್ತಾರ ಮಾತನಾಡಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿದ್ದ ನೇತಾಜಿಯವರು ಬ್ರಿಟಿಷರ ಪೈಶಾಚಿಕ ದಬ್ಬಾಳಿಕೆಯ ವಿರುದ್ಧ ಐ ಎನ್ ಎ ಸೈನ್ಯವನ್ನು ಕಟ್ಟಿ ಬ್ರಿಟಿಷ್ ರನ್ನು ದೇಶದಿಂದ ಹೊರಹಾಕಲು ಬದುಕಿನುದ್ದಕ್ಕೂ ದೃಢವಾಗಿ ಹೋರಾಡಿದರು.

           “ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ” ಎಂದು ಭಾರತೀಯರಿಗೆ ದೇಶಪ್ರೇಮದ ಕಿಚ್ಚನ್ನು ಹಚ್ಚಿದ ಅಪ್ರತಿಮ ದೇಶಭಕ್ತ ನೇತಾಜಿಯವರ ಆದರ್ಶಗಳು ನಮ್ಮೆಲ್ಲರಿಗೂ ಸ್ಪೂರ್ತಿ. ಅನ್ಯಾಯ ಹಾಗೂ ಅಸತ್ಯದೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೇ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ನೇತಾಜಿ ಹಾಗೂ ಭಗತ್‌ಸಿಂಗ್‌ರಂತಹ ಮಹಾನ್ ರಾಷ್ಟ್ರ ಪ್ರೇಮಿಗಳ ಕನಸು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಗಳಿಸುವುದಷ್ಟೇ ಅಲ್ಲ, ಭಾರತವನ್ನು ಎಲ್ಲ ರೀತಿಯ ಸಂಕೋಲೆಗಳಿಂದ ಮುಕ್ತಗೊಳಿಸಿ ಸಮಾನತೆಯ, ಶೋಷಣಾಮುಕ್ತ ಹಾಗೂ ಸೌಹಾರ್ದಯುತ ಭಾರತವನ್ನು ಸೃಷ್ಠಿಸುವುದಾಗಿತ್ತು. ಆದ್ದರಿಂದ ನಾವು ನೀವೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ದೇಶಪ್ರೇಮವನ್ನು ಮೆರೆಯಬೇಕು ಎಂದರು. 

           ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಗುರುಗಳಾದ ಶ್ರೀ ಎಸ್ ಜಿ ಹರನಾಳ ಮಾತನಾಡಿ ನಾವೆಲ್ಲರೂ ಯಾವುದೇ ವೇಷ, ಭಾಷೆ, ಪಂಗಡ, ಜಾತಿ, ಧರ್ಮ, ಗಡಿಗಳಂತಹ ಬೇಧಭಾವಗಳನ್ನು ಮೀರಿದ ಐಕ್ಯತೆಯ ಹಾಗೂ ಸಮನ್ವಯದ ಸಧೃಡ ಭಾರತವನ್ನು ನಿರ್ಮಿಸಲು ಪಣತೊಡಬೇಕೆಂದು ಕರೆ ನೀಡಿದರು.  ವಿದ್ಯಾರ್ಥಿನಿ ಆಶಾರಾಣಿ ಪ್ರಾರ್ಥಿಸಿದರು, ಸ್ಪೂರ್ತಿ ಸ್ವಾಗತಿಸಿದರು, ಶ್ರೀರಕ್ಷಾ ವಂದಿಸಿದರು.