‘ಉತ್ತಮ ಆರೋಗ್ಯಕ್ಕೆ ಯೋಗ, ಪ್ರಕೃತಿ ಚಿಕಿತ್ಸೆ ಸಹಕಾರಿ’

‘ಉತ್ತಮ ಆರೋಗ್ಯಕ್ಕೆ ಯೋಗ, ಪ್ರಕೃತಿ ಚಿಕಿತ್ಸೆ ಸಹಕಾರಿ’ 'Yoga, naturopathy are helpful for good health'

ರಟ್ಟೀಹಳ್ಳಿ 8: ಒತ್ತಡ ಹಾಗೂ ಪಾಶ್ಚಾತ್ಯ ಜೀವನಶೈಲಿಯಿಂದಾಗಿ ಹಲವು ರೋಗಗಳು ಇಂದು ಜನಸಾಮಾನ್ಯರನ್ನು ಬಾಧಿಸುತ್ತಿದ್ದು, ಆರೋಗ್ಯವಂತ ಜೀವನಕ್ಕೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಅತ್ಯುತ್ತಮ ಮಾರ್ಗ ಎಂದು ಜನನಿ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಅಭಿಪ್ರಾಯಪಟ್ಟರು. 

ಇಲ್ಲಿನ ಲಯನ್ಸ್‌ ಕ್ಲಬ್ ಮತ್ತು ಲಯನ್ಸ್‌ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಪಂಚಭೂತಗಳಿಂದ ಮಾಡಲ್ಪಟ್ಟ ನಮ್ಮ ಶರೀರಕ್ಕೆ ಅಸ್ವಸ್ಥತೆ ಉಂಟಾದಾಗ ಅದಕ್ಕೆ ಚಿಕಿತ್ಸೆಯೂ ಪಂಚಭೂತಗಳಲ್ಲೇ ಅಡಗಿದೆ.  ಆರೋಗ್ಯವೇ ಜೀವನದ ದೊಡ್ಡ ಸಂಪತ್ತು. ಈ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಯಾವುದೇ ಅಡ್ಡ ಪರಿಣಾಮಗಳು ಇಲ್ಲದ ಇಂಥ ಚಿಕಿತ್ಸೆಯ ಬಗ್ಗೆ ಜನರು ಒಲವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಒತ್ತಡ ಜೀವನದಿಂದ ಮನಸ್ಸಿನ ಏರಿಳಿತಗಳು ಹೆಚ್ಚುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಕಾಯಿಲೆಗಳು ಹೆಚ್ಚುತ್ತಿವೆ. ನಾಲಿಗೆಗೆ ರುಚಿಕರ ಎನಿಸಿದ ಆಹಾರಕ್ಕೆ ಆದ್ಯತೆ ನೀಡುವ ಮೂಲಕ ರೋಗಗಳನ್ನು ನಾವೇ ಆಹ್ವಾನಿಸಿಕೊಳ್ಳುತ್ತಿದ್ದೇವೆ. ನಮ್ಮ ಆರೋಗ್ಯ ಸುಸ್ಥಿರವಾಗಿ ಇರಬೇಕಾದರೆ ಏನು ಬೇಕು ಎನ್ನುವುದನ್ನು ಅರಿತುಕೊಂಡು ಪ್ರಜ್ಞಾಪೂರ್ವಕ ಜೀವನಶೈಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. 

ಅಧ್ಯಕ್ಷತೆ ವಹಿಸಿದ್ದ ಲಯನ್ಸ್‌ ಅಧ್ಯಕ್ಷ ಎನ್‌.ಸಿ.ಕಠಾರೆ, "ನಮ್ಮ ಜೀವನಶೈಲಿಯನ್ನು ಆರೋಗ್ಯಕರವಾಗಿ ಪರಿವರ್ತಿಸಿಕೊಂಡು ರೋಗ ಬರದಂತೆ ತಡೆಯುವುದು ಅಗತ್ಯ. ಇತರ ವೈದ್ಯ ಪದ್ಧತಿಗಳು ರೋಗ ಬಂದ ಬಳಿಕ ಓಷಧಿ ನೀಡಿ ಅದನ್ನು ಗುಣಪಡಿಸಿದರೆ, ರೋಗ ಬಾರದಂತೆ ತಡೆಯುವಲ್ಲಿ ಪ್ರಕೃತಿ ಚಿಕಿತ್ಸೆ ಮುಖ್ಯವಾಗುತ್ತದೆ. ಏಕೈಕ ಓಷಧ ರಹಿತ ಚಿಕಿತ್ಸಾ ವಿಧಾನ ಎನಿಸಿದ ಇಲ್ಲಿ, ನಾವು ಸೇವಿಸುವ ಆಹಾರವೇ ನಮಗೆ ಓಷಧಿ. ನಮ್ಮ ಹಿರಿಯರು ಕಂಡುಕೊಂಡಿದ್ದ ಹಲವಾರು ಆರೋಗ್ಯ ಸಂರಕ್ಷಣಾ ಕ್ರಮಗಳನ್ನು ನಾವು ಮತ್ತೆ ಅಳವಡಿಸಿಕೊಳ್ಳುವ ಅಗತ್ಯವಿದೆ" ಎಂದು ಅಭಿಪ್ರಾಯಪಟ್ಟರು.ಲಯನ್ಸ್‌ ಕಾರ್ಯದರ್ಶಿ ವೈ.ಕೆ.ಬಾಜಿರಾಯರು, ಗಣ್ಯ ವರ್ತಕ ಎಸ್‌.ಬಿ.ಗೋಳೆಪ್ಪನವರು, ಪದಾಧಿಕಾರಿಗಳಾದ ವಿಜಯ ಬಳ್ಳಾಪುರ, ಶಾಲೆಯ ಮುಖ್ಯಶಿಕ್ಷಕ ಹಾಲಪ್ಪ ಮುದಿಗೌಡರ್, ನಿಂಗನಗೌಡ್ರು, ಯೋಗ ಪ್ರಾಧ್ಯಾಪಕ ಬಿ.ಜಯರಾಂ, ವ್ಯವಸ್ಥಾಪಕ ಅನೀಶ್ ಮತ್ತಿತರರು ಉಪಸ್ಥಿತರಿದ್ದರು.