‘ಓದಿನಲ್ಲಿ ಬೇಕಾದದ್ದು ಏಕಾಗ್ರತೆ, ಆತ್ಮವಿಶ್ವಾಸ’

‘ಓದಿನಲ್ಲಿ ಬೇಕಾದದ್ದು ಏಕಾಗ್ರತೆ, ಆತ್ಮವಿಶ್ವಾಸ’ 'What is needed in reading is concentration and confidence'

ಧಾರವಾಡ 16: ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಬೇಕು. ಸಾಧನೆ ಮಾಡಿದ ಮಹನೀಯರ ಜೀವನ ಚರಿತ್ರೆ ಓದಿದರೆ ಜೀವನದಲ್ಲಿ ಏನನ್ನಾದರೂ ನಾನು ಸಾಧಿಸಬಹುದೆಂಬ ಮನಸ್ಸು ಆಗುವುದು. ಆದರೆ ಓದಿನಲ್ಲಿ ಬೇಕಾದದ್ದು ಏಕಾಗ್ರತೆ ಹಾಗೂ ಆತ್ಮವಿಶ್ವಾಸ ಎಂದು ಸಾಹಿತಿ ಪ್ರೊ. ಸಂಪಿಗೆ ತೋಂಟದಾರ್ಯ ಹೇಳಿದರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಕರ್ನಾಟಕ ರಾಜ್ಯೋತ್ಸವದ ತಿಂಗಳ ಪೂರ್ಣ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ‘ಧರೆಗೆ ದೊಡ್ಡವರು’ ಸನ್ಮಾನ ಸ್ವೀಕರಿಸಿ ಮಾತನಾಡಿದರು.  

ವಿದ್ಯಾರ್ಥಿಗಳು ಅಧ್ಯಯನ ನಿರತರಾದಾಗ ಅನ್ಯ ವಿಷಯಗಳತ್ತ ಗಮನ ಹರಿಸಬಾರದು. ನೀವು ಮನಸ್ಸು ಮಾಡಿದರೆ ಎಂತಹ ಮಹತ್ಸಾಧನೆಯನ್ನಾದರೂ ಜೀವನದಲ್ಲಿ ಮಾಡಹಬುದು. ಅದಕ್ಕೆ ಪ್ರಯತ್ನಶೀಲತೆ ಬಹಳ ಮುಖ್ಯ. ಅಧ್ಯಯನ ಮಾಡುವಾಗ ಕ್ಲಿಷ್ಟ ವಿಷಯಗಳನ್ನು  ನಿಮ್ಮ ಪ್ರಾಧ್ಯಾಪಕರಿಂದ ಕೇಳಿ ಪರಿಹಾರ ಕಂಡುಕೊಳ್ಳಬೇಕು. ಡಾ. ಅಬ್ದುಲ್ ಕಲಾಂರಂತಹ ಮಹಾನ್ ವ್ಯಕ್ತಿಗಳೇ ನಿಮಗೆ ಮಾದರಿ. ಪತ್ರಿಕೆ ಹಂಚಿ ಕಲಾಂ ಅವರು ಈ ದೇಶದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದು ನಿಮಗೆಲ್ಲಾ ಅವರಂತೆ ಸಾಧನೆ ಮಾಡಬೇಕೆಂಬ ಸ್ಫೂರ್ತಿ ಬರುವುದು.  

ಹುಟ್ಟು-ಸಾವುಗಳ ಮಧ್ಯ ನಿಮ್ಮ ಜೀವನ ಸಾರ್ಥಕವಾಗಬೇಕು. ನಾವು ಮಾಡಬೇಕಾದ ಕೆಲಸ ಪ್ರಾಮಾಣಿಕತೆಯಿಂದ ಮಾಡಬೇಕು. ಇಂದು ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರಬೇಕು. ಜೊತೆಗೆ ಅದು ವಿದ್ಯಾರ್ಥಿಗಳ ವರ್ತನೆಯಲ್ಲಿ ಪರಿವರ್ತನೆ ತರುವಂತಾಗಬೇಕು. ಧಾರವಾಡ ನನಗೆ ಏನೆಲ್ಲಾ ಕೊಟ್ಟಿದೆ. ನನಗೆ ಧಾರವಾಡ ತಾಯಿ ಇದ್ದಂತೆ. 40 ವರ್ಷಗಳ ನನ್ನ ಸೇವಾ ಅವಧಿ ನನಗೆ ತೃಪ್ತಿ ತಂದಿದೆ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.  

ಹೊಸತು ಪತ್ರಿಕೆ ಸಂಪಾದಕರಾದ ಡಾ. ಸಿದ್ಧನಗೌಡ ಪಾಟೀಲ ಧರೆಗೆ ದೊಡ್ಡವರಾದ ಪ್ರೊ. ಸಂಪಿಗೆ ತೋಂಟದಾರ್ಯರ ಜೀವನ ಸಾಧನೆ ಬಗ್ಗೆ ಪರಿಚಯಿಸಿ ಪ್ರೊ. ಸಂಪಿಗೆ ಅವರು ಒಬ್ಬ ಆದರ್ಶ ಗುರುವಾಗಿ ನಮಗೆಲ್ಲಾ ಮಾರ್ಗದರ್ಶನ ಮಾಡಿದವರು. ಅವರದು ಕೊರಳಿನ ಸಂಬಂಧವಲ್ಲ, ಕರುಳಿನ ಸಂಬಂಧ. ಅನೇಕ ವಿಜ್ಞಾನ ಸಂಘಟನೆ  ಮೂಲಕ ಜನರೆಡೆಗೆ ವಿಜ್ಞಾನ ಕೊಂಡೊಯ್ಯುವ ಕಾರ್ಯ ಮಾಡಿದ್ದಾರೆ. ರಂಗಭೂಮಿ ಸಿನೇಮಾ ಸಾಕ್ಷರತೆಗೆ ಅವರ ಕೊಡುಗೆ ದೊಡ್ಡದು ಎಂದು ಹೇಳಿದರು.    

ಅಂಜುಮನ್ ಹಾಗೂ ಆರ್‌.ಎಲ್‌.ಎಸ್ ಮತು ನಿಡವಣಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಂವಾದದಲ್ಲಿ ಪಾಲ್ಗೊಂಡಿದ್ದರು.  

ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಶ್ರೀನಿವಾಸ ವಾಡಪ್ಪಿ, ಎಂ.ಎಂ. ಚಿಕ್ಕಮಠ, ಕಾಲೇಜಿನ ಪ್ರಾಧ್ಯಾಪಕರು ಸೇರಿದಂತೆ ಮುಂತಾದವರು ಇದ್ದರು.