‘ಟಾಕ್ಸಿಕ್‌’ ಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಭರ್ಜರಿ ಪ್ರತಿಕ್ರಿಯೆ

 ‘ಟಾಕ್ಸಿಕ್‌’ ಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಭರ್ಜರಿ ಪ್ರತಿಕ್ರಿಯೆ 'Toxic' receives a tremendous response in North Karnataka

ಲೋಕದರ್ಶನ ವರದಿ 

 ಬೆಳಗಾವಿ, ಆ.25: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನೀರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್‌’ ಆಗಸ್ಟ್‌ 26ರಂದು ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾ ಬಿಡುಗಡೆಯ ಮುನ್ನವೇ ಅಡ್ವಾನ್ಸ್‌ ಬುಕಿಂಗ್ನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಟಿಕೆಟ್ಗಳು ಭರ್ಜರಿ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.  

ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ‘ಟಾಕ್ಸಿಕ್‌’ ಚಿತ್ರದ ಕುರಿತು ಅಭಿಮಾನಿಗಳಲ್ಲಿ ಹೆಚ್ಚಿನ ನೀರೀಕ್ಷೆ ಮೂಡಿದೆ. ಬಾಂಬೆ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ಶೋಗಳನ್ನು ನಿಗದಿಪಡಿಸಲಾಗಿದೆ.  

ಬಾಂಬೆ ಕರ್ನಾಟಕದ ಏಳು ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಂದ ಮೊದಲ ದಿನವೇ ಸುಮಾರು 700ಕ್ಕೂ ಹೆಚ್ಚು ಶೋಗಳನ್ನು ಚಿತ್ರಕ್ಕೆ ನೀಡಲಾಗಿದೆ. ಬೆಳಗಾವಿಯಲ್ಲಿ ಕನ್ನಡ ಹಾಗೂ ಹಿಂದಿ ಆವೃತ್ತಿ ಸೇರಿದಂತೆ 31 ಶೋಗಳು, ಹುಬ್ಬಳ್ಳಿಯಲ್ಲಿ 87 ಹಾಗೂ ಧಾರವಾಡದಲ್ಲಿ 25 ಶೋಗಳನ್ನು ನಿಗದಿಪಡಿಸಲಾಗಿದೆ.  

ಬೆಳಗಾವಿಯ ಕ್ಯಾಂಪ್ ರೋಡ್ನ ಐನಾಕ್ಸ್ನಲ್ಲಿ 7 ಕನ್ನಡ ಹಾಗೂ 2 ಹಿಂದಿ, ಕಪಿಲ್ ಸಿನಿಮಾಸ್ನಲ್ಲಿ 8 ಕನ್ನಡ ಹಾಗೂ 2 ಹಿಂದಿ, ಸ್ವರೂಪ್ ನೃತಕಿ ಮತ್ತು ಚಿತ್ರಾ ಥಿಯೇಟರ್ನಲ್ಲಿ ಒಟ್ಟು 8 ಕನ್ನಡ ಹಾಗೂ ಗ್ಲೋಬ್ ಸಿನಿಮಾಸ್ನಲ್ಲಿ 4 ಹಿಂದಿ ಶೋಗಳನ್ನು ‘ಟಾಕ್ಸಿಕ್‌’ ಚಿತ್ರಕ್ಕೆ ನೀಡಲಾಗಿದೆ. ಬಹುತೇಕ ಎಲ್ಲಾ ಶೋಗಳಿಗೂ ಬುಕ್ ಮೈ ಶೋನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  

‘ಟಾಕ್ಸಿಕ್‌’ ಚಿತ್ರದ ಅಡ್ವಾನ್ಸ್‌ ಬುಕಿಂಗ್ನಲ್ಲೇ ಸುಮಾರು 6 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಈ ಮೂಲಕ ಸಿನಿಮಾ ಮುಂಗಡ ಬುಕಿಂಗ್ನಲ್ಲೇ ಸುಮಾರು ?32 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎನ್ನಲಾಗಿದ್ದು, ಮೊದಲ ದಿನದ ಕಲೆಕ್ಷನ್ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ.  

ಗೀತು ಮೋಹನ್ದಾಸ್ ನಿರ್ದೇಶನದ ಈ ಕ್ರೈಮ್ ಆ್ಯಕ್ಷನ್ ಡ್ರಾಮಾದಲ್ಲಿ ಯಶ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಅವರ ಪಾತ್ರದ ಕುರಿತು ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  

ಬಹುನೀರೀಕ್ಷಿತ ‘ಟಾಕ್ಸಿಕ್‌’ ಆಗಸ್ಟ್‌ 26ರಂದು ವಿಶ್ವಾದ್ಯಂತ ತೆರೆಗೆ ಬರಲಿದ್ದು, ಅಡ್ವಾನ್ಸ್‌ ಬುಕಿಂಗ್ನಲ್ಲೇ 6 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿರುವ ಹಿನ್ನೆಲೆಯಲ್ಲಿ ಮೊದಲ ದಿನದ ಕಲೆಕ್ಷನ್ ಎಷ್ಟಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ‘ಕೆಜಿಎಫ್ 2’ ದಾಖಲೆಯನ್ನು ‘ಟಾಕ್ಸಿಕ್‌’ ಮುರಿಯಲಿದೆಯೇ ಅಥವಾ ಹೊಸ ದಾಖಲೆ ನಿರ್ಮಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.