‘ಇಂದಿನ ಆರ್ಥಿಕ ಬಿಕ್ಕಟ್ಟಿನ ಪರಿಹಾರ ಭಗತ್ ಸಿಂಗ್ ವಿಚಾರಗಳಲ್ಲಿದೆ’

 ‘ಇಂದಿನ ಆರ್ಥಿಕ ಬಿಕ್ಕಟ್ಟಿನ ಪರಿಹಾರ ಭಗತ್ ಸಿಂಗ್ ವಿಚಾರಗಳಲ್ಲಿದೆ’ 'The solution to today's economic crisis lies in the ideas of Bhagat Singh'

ಧಾರವಾಡ 24: ಸ್ವ್ವಾತಂತ್ರ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಶಹೀದ್ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ 95ನೇ ಹುತಾತ್ಮ ದಿನದ ಅಂಗವಾಗಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಓ) ಯುವಜನ ಸಂಘಟನೆಯಿಂದ ಉದ್ಯೋಗಾಕಾಂಕ್ಷಿ ಯುವಜನರೊಂದಿಗೆ ಕೆಯುಡಿ ಮೈದಾನದಲ್ಲಿ ಕಾರ್ಯಕ್ರಮ ಮಾಡಲಾಯಿತು.  

ಈ ಸಂದರ್ಭದಲ್ಲಿ ಭಾಗವಹಿಸಿದ್ದ ಯುವಜನರು ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾಧ್ಯಕ್ಷ ಭವಾನಿ ಶಂಕರ್ ಎಸ್ ಗೌಡ ಮಾತನಾಡಿ, ಸಮಾಜದಲ್ಲಿ ಇಂದು ಹೆಚ್ಚುತ್ತಿರುವ ಆರ್ಥಿಕ, ಸಾಮಾಜಿಕ ಬಿಕ್ಕಟ್ಟು ಹಾಗೂ ಮೌಲ್ಯಗಳು ಕುಸಿಯುತ್ತಿರುವ ಸಂಧರ್ಭದಲ್ಲಿ, ಇವುಗಳಿಗೆ ಪರಿಹಾರ ಭಗತ್ ಸಿಂಗ್ ವಿಚಾರಗಳಲ್ಲಿದೆ. ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸುವ ಸಮಾಜವಾದಿ ಭಾರತ ನಿರ್ಮಾಣ ಭಗತ್ ಸಿಂಗ್ ರ ಕನಸಾಗಿತ್ತು. ಆದರೆ ಸ್ವತಂತ್ರ ನಂತರ ಬಂಡವಾಳಶಾಹಿಗಳು, ಅವರ ಏಜೆಂಟ್ ಪಕ್ಷಗಳು ಅಧಿಕಾರವನ್ನು ಹಿಡಿದ ಪರಿಣಾಮ ಭಗತ್ ಸಿಂಗ್ ಅವರ ಕನಸು ಸಂಪೂರ್ಣ ನುಚ್ಚುನೂರಾಗಿದೆ. ಇಂದು ಶೇ. 1 ಅಗರ್ಭ ಶ್ರೀಮಂತರ ಕೈಲಿ ಇಡೀ ದೇಶದ ಸಂಪತ್ತು ಶೇಖರಣೆಯಾಗಿದ್ದು, ದುಡಿಯುವ ಜನಗಳ ಬದುಕು ಮೂರಾಬಟ್ಟೆಯಾಗಿದೆ. ಇಂದು ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿವೆ, ನಿರುದ್ಯೋಗ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಿಲ್ಲ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತಿಲ್ಲ. ಶಿಕ್ಷಣ, ಆರೋಗ್ಯ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್, ಸಾರಿಗೆ ಸೇರಿದಂತೆ ಮೂಲಭೂತ ಸೌಕರ್ಯಗಳ ಖಾಸಗಿಕರಣ ಮಾಡುತ್ತಾ ಬಂಡವಾಳಗಾರ ಜೇಬನ್ನೇ ತುಂಬಿಸುವ ಕೆಲಸಗಳನ್ನು ಸರ್ಕಾರಗಳು ಮಾಡುತ್ತಿವೆ. ಮತ್ತೊಂದೆಡೆ ತಾವು ಮಾಡುವ ಅನ್ಯಾಯಗಳ ವಿರುದ್ಧ ಯುವಜನರು ಧ್ವನಿಯುತ್ತದಂತೆ ಅವರನ್ನು ಅಶ್ಲೀಲತೆ, ಮಧ್ಯಪಾನ, ಡ್ರಗ್, ಆನ್ಲೈನ್ ಗೇಮ್ಸ್‌, ಬೆಟ್ಟಿಂಗ್, ಜಾತಿವಾದ ಕೋಮುವಾದ ವಿಚಾರಗಳಲ್ಲಿ ಸಂಪೂರ್ಣವಾಗಿ ಮುಳುಗಿಸಿ ನೈತಿಕವಾಗಿ ಕುಸಿಯುವಂತೆ ಮಾಡುತ್ತಿವೆ. ಇವುಗಳಿಂದ ಹೊರಬಂದು ಈ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಲು, ಶೋಷಣಾರಹಿತ ಸಮಾಜ ನಿರ್ಮಾಣ ಮಾಡಲು ಯುವಜನರು ಭಗತ್ ಸಿಂಗ್ ರ ವಿಚಾರಗಳಿಗೆ ಮೊರೆ ಹೋಗಬೇಕಾಗಿದೆ. ಭಗತ್ ಸಿಂಗ್ ರ ವಿಚಾರಗಳನ್ನು ಅರ್ಥ ಮಾಡಿಕೊಂಡು ಅವರ ನೈಜ ಉತ್ತರಾಧಿಕಾರಿಗಳಾಗಿ ಯುವಜನರು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮುಂದಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ರಣಜಿತ್ ದುಪದ್, ಯಲ್ಲಪ್ಪ ದೊರೆ, ಪುನೀತ್ ಹೊನ್ನಣ್ಣವರ್, ಮಲ್ಲೇಶ್, ಹನುಮಂತ ಮುಂತಾದವರು ಭಾಗವಹಿಸಿದ್ದರು.