‘ಯುವಪೀಳಿಗೆ ಜ್ಞಾನದಾಹವನ್ನು ನೀಗಿಸುವ ಗ್ರಂಥಾಲಯಗಳ ಕೊಡುಗೆ ಅಪಾರ’

‘ಯುವಪೀಳಿಗೆ ಜ್ಞಾನದಾಹವನ್ನು ನೀಗಿಸುವ ಗ್ರಂಥಾಲಯಗಳ ಕೊಡುಗೆ ಅಪಾರ’ 'The contribution of libraries in quenching the thirst for knowledge among the younger generation is

ಲೋಕದರ್ಶನ ವರದಿ 

ಹಾರೂಗೇರಿ 11: ಮೊಬೈಲ್, ಟಿವಿಯಿಂದ ದಾರಿ ತಪ್ಪುತ್ತಿರುವ ಯುವಪೀಳಿಗೆ ಹಾಗೂ ವಿದ್ಯಾರ್ಥಿಗಳ ಜ್ಞಾನದಾಹವನ್ನು ನೀಗಿಸುವ ಗ್ರಂಥಾಲಯಗಳ ಕೊಡುಗೆ ಅಪಾರ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗುತ್ತಿರುವ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ವಿದ್ಯಾರ್ಥಿಗಳು ಮತ್ತು ಪುಸ್ತಕ ಪ್ರೇಮಿಗಳಿಗೆ ಗ್ರಂಥಾಲಯ ವರದಾನವಾಗಲಿದೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. 

ಪಟ್ಟಣದ ಒಡೆಯರ್ ಪ್ಲಾಟ್‌ನಲ್ಲಿ ಶನಿವಾರ ಮುಖ್ಯಮಂತ್ರಿಯವರ ಮೂಲಸೌಕರ್ಯ (ಶೈಕ್ಷಣಿಕ ಉದ್ದೇಶ) ಅಭಿವೃದ್ಧಿ ಯೋಜನೆಯಡಿ 1 ಕೋಟಿರೂ. ವೆಚ್ಚದ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಕೋಟಿ ರೂ. ವೆಚ್ಚದಲ್ಲಿ ಎರಡಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿರುವ ಡಿಜಿಟಲ್ ಗ್ರಂಥಾಲಯದಲ್ಲಿ ಉತ್ತಮ ಆಸನಗಳ ವ್ಯವಸ್ಥೆಗಳ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಮಾದರಿ ಗ್ರಂಥಾಲಯವನ್ನಾಗಿ ರೂಪಿಸಲಾಗುತ್ತದೆ. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವ ಪುಸ್ತಕಗಳನ್ನು ಒದಗಿಸಲಾಗುತ್ತಿದ್ದು, ಅದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕೆಂದು ಶಾಸಕ ತಮ್ಮಣ್ಣವರ ಹೇಳಿದರು. 

ವಿಶ್ರಾಂತ ಶಿಕ್ಷಕ ಅಶೋಕ ಅರಕೇರಿ ಮಾತನಾಡುತ್ತ ಈ ಭಾಗದ ಸಹಸ್ರಾರು ವಿದ್ಯಾರ್ಥಿಗಳು ಮತ್ತು ಪುಸ್ತಕ ಪ್ರೇಮಿಗಳ ಬಹುದಿನಗಳ ಬೇಡಿಕೆಯಾದ ಹೈಟೆಕ್ ಗ್ರಂಥಾಲಯ ನಿರ್ಮಾಣದ ಕನಸನ್ನು ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಈಡೇರಿಸಿದ್ದಾರೆ ಎಂದರು. 

ಗ್ರಂಥಾಲಯಕ್ಕೆ ಕೊನೆಗೂ ಕಟ್ಟಡ ಭಾಗ್ಯ : ಗ್ರಂಥಾಲಯ ಇಲ್ಲಿಯವರೆಗೂ ಪುರಸಭೆ ಹತ್ತಿರದ ಪಾಳು ಚಿಕ್ಕ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ. ಆಸನಗಳ ಅವ್ಯವಸ್ಥೆ, ಪುಸ್ತಕಗಳ ಕೊರತೆ, ಇಕ್ಕಟ್ಟಾದ ಜಾಗದಲ್ಲಿ ವಿದ್ಯಾರ್ಥಿಗಳು ಮತ್ತು ಓದುಗರಿಗೆ ಅನಾನುಕೂಲವಾಗಿದೆ. ನೂತನ ಕಟ್ಟಡ ನಿರ್ಮಾಣವಾಗುತ್ತಿರುವುದರಿಂದ ಓದುಗರ ಸಂತಸಕ್ಕೆ ಕಾರಣವಾಗಿದೆ. 

ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಗಣ್ಯರಾದ ಧನಪಾಲ ಶಿರಹಟ್ಟಿ, ಸಿದ್ದಪ್ಪ ನಾಗನೂರ, ಬಸವರಾಜ ಮುಗಳಿಹಾಳ, ಪುರಸಭೆ ಸದಸ್ಯರಾದ ಆನಂದಗೌಡ ಪಾಟೀಲ, ಗುಂಡುರಾವ ಬದ್ನಿಕಾಯಿ, ಬಸವರಾಜ ಚೌಗಲಾ, ಬಾಬು ನಡೋಣಿ, ಸಂತೋಷ ಸಿಂಗಾಡಿ, ಬಾಳೇಶ ಹಾಡಕಾರ, ಶಿವಾನಂದ ದಳವಾಯಿ, ಬಸವರಾಜ ಖೋತ, ವಿನಾಯಕ ಮುಡಸಿ, ಮಹೇಶ ಐಹೊಳೆ, ಪ್ರದೀಪ ಹಾಲ್ಗುಣಿ, ವಿಕ್ರಮ ಪತ್ತಾರ, ಬುರಾನಸಾಬ ಶೇಖ, ಮುಖ್ಯಾಧಿಕಾರಿ ಬಸವರಾಜ ಮನಗೂಳಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.