‘ಜನನಿ-ಜನ್ಮಭೂಮಿ ಋಣ ತೀರಿಸಿದಾಗಲೇ ಮೋಕ್ಷ’

‘ಜನನಿ-ಜನ್ಮಭೂಮಿ ಋಣ ತೀರಿಸಿದಾಗಲೇ ಮೋಕ್ಷ’ 'Salvation is achieved only when the debt of the motherland is paid'

ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ನವರಾತ್ರಿ ಸಂದೇಶ 

ಧಾರವಾಡ 28: ತನ್ನೊಡಲಿನಲ್ಲಿ ಹೊತ್ತು ಹೆತ್ತು ಸಲುಹಿ ಇಹದ ಬದುಕಿನ ಜ್ಞಾನಮೃತ ನೀಡಿದ ಜನ್ಮದಾತೆಯ ಹಾಗೂ ತನ್ನ ಜನನಕ್ಕೆ ಆಶ್ರಯ ನೀಡಿದ ಜನ್ಮ ಭೂಮಿಯ ಋಣವನ್ನು ತೀರಿಸಿದಾಗಲೇ ಮಾನವನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಮೂಲತಃ ಕನ್ನಡಿಗರಾಗಿರುವ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.  

ಅವರು ಉತ್ತರ​‍್ರದೇಶದ ವಾರಾಣಾಸಿ ನಗರದ ತಮ್ಮ ಜ್ಞಾನ ಪೀಠದಲ್ಲಿ ಶರನ್ನವರಾತ್ರಿ ಆಚರಣೆಯ ಅಂಗವಾಗಿ ರವಿವಾರ 7ನೆಯ ದಿನದ ಶುಭಾಶೀರ್ವಾದ ಸಂದೇಶ ನೀಡಿ ಮಾತನಾಡುತ್ತಿದ್ದರು. ಜನ್ಮದಾತೆಯಾದ ತಾಯಿಗೆ ಕೊಟ್ಟ ಗೌರವವನ್ನು ನಮ್ಮ ಜನ್ಮ ಭೂಮಿಯ ಮಣ್ಣಿನ ಕಣಗಳಿಗೂ ನೀಡಬೇಕಾಗುತ್ತದೆ. ಮಾತೆಯ ಮಡಿಲಿನ ಮನೆಯ ಅಂಗಳವೆಂದರೆ ಅದು ಮಹಾಸ್ವರ್ಗ. ಅಲ್ಲಿ ತನ್ನೊಡಲ ಕುಡಿಯನ್ನು ಉಣಿಸಿ-ತಿನಿಸಿ ಬೆಳೆಸಿ ಬದುಕನ್ನು ಪರಿಚಯಿಸುವ ರೀತಿಯನ್ನು ಗಮನಿಸಿದಾಗ ತಾಯಿ ಪಡುವ ಕಷ್ಟಗಳು ಅರಿವಿಗೆ ಬರುತ್ತವೆ ಎಂದರು.  

ಸ್ವರ್ಗವನ್ನು ನೋಡುವುದು ಸುಲಭದ ಮಾತಲ್ಲ. ಅನುಭಾವಿಗಳು ಹೇಳುವಂತೆ ಹಡೆದ ತಾಯಿಯ ಪಾದಗಳು ತುಳಿದ ಮಣ್ಣಿನಲ್ಲಿಯೇ ಸ್ವರ್ಗವಿರುತ್ತದೆ ಎನ್ನುವುದು ನಿಜಕ್ಕೂ ಹೃದ್ಯವಾದ ಸಂದೇಶವಾಗಿದೆ. ಶಾಲಾ ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ಸ್ವರ್ಗದ ಹಿಡಿ ಮಣ್ಣನ್ನು ತರಲು ಹೇಳಿದ್ದರಂತೆ. ಎಲ್ಲಾ ವಿದ್ಯಾರ್ಥಿಗಳೂ ಬರಿಗೈಯಿಂದ ಮರಳಿದರೆ, ಓರ್ವ ವಿದ್ಯಾರ್ಥಿ ತನ್ನ ತಾಯಿಯನ್ನು ಮನೆಯಂಗಳದಲ್ಲಿ ನಿಲ್ಲಿಸಿ ಅವಳು ತುಳಿದ ನೆಲದ ಮಣ್ಣನ್ನು ಶಾಲೆಗೆ ತೆಗೆದುಕೊಂಡು ಹೋಗಿ ‘ಇದೇ ಸ್ವರ್ಗದ ಮಣ್ಣು’ ಎಂದು ಹೇಳಿ ತನ್ನ ಅಧ್ಯಾಪಕರಿಂದ ಮೆಚ್ಚಿಗೆ ಸಂಪಾದಿಸಿದ್ದನಂತೆ. ಅದಕ್ಕೆಂದೇ ಭಾರತೀಯ ಸನಾತನ ಸಂಸ್ಕೃತಿಯು ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಎಂದು ಉಗ್ಗಡಿಸುತ್ತದೆ. ತಂದೆ, ತಾಯಿ ಮತ್ತು ಧರ್ಮಗುರುಗಳ ಸೇವೆ ಮಾಡುವುದನ್ನು ಎಂದಿಗೂ ಮರೆಯಬಾರದು. ಜನ್ಮ ನೀಡಿದ ಮಾತೋಶ್ರೀಯನ್ನು ಗೌರವದಿಂದ ಕಂಡು ಇಹದಲ್ಲಿಯೇ ಸ್ವರ್ಗ ಸುಖ ಕಾಣುವದು ಭಾರತೀಯ ಸಂಸ್ಕೃತಿಯ ಹಿರಿಮೆಯಾಗಿದೆ ಎಂದೂ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.  

ನವರಾತ್ರಿ ಅಂಗವಾಗಿ ಲಲಿತ ಸಹಸ್ರನಾಮ ಮತ್ತು ದುರ್ಗಾ ಸಪ್ತಶತಿ ಪಾರಾಯಣಗಳು ಜರುಗಿದವು. ಆದಿಶಕ್ತಿ ಮಾತೆಗೆ ವಿಶೇಷ ಕುಂಕುಮಾರ್ಚನೆ ನಡೆಯಿತು.