‘ಇಷ್ಟಲಿಂಗ ಪೂಜೆಯಿಂದ ಅಂತರಂಗ ಶುದ್ಧಿ’ : ಡಾ.ಚಂದ್ರಶೇಖರ ಶಿವಾಚಾರ್ಯ
'Prayer of Ishtalinga leads to inner purity': Dr. Chandrashekar Shivacharya
ಲೋಕದರ್ಶನ ವರದಿ
ಧಾರವಾಡ 30 : ಇಷ್ಟಲಿಂಗ ಪೂಜೆ ಕೇವಲ ಒಂದು ಧರ್ಮದ ನೀತಿಯಾಗಿರದೇ, ಅದು ಬದುಕಿನ ಪ್ರತೀ ಕ್ಷಣವನ್ನು ಶಿವಮಯವಾಗಿಸುವ ಸಮಷ್ಟಿ ಭಾವಸಂಪನ್ನತೆಯ ವಿಶಿಷ್ಟ ಆಧ್ಯಾತ್ಮಿಕ ಸಾಧನೆ. ಇಷ್ಟಲಿಂಗ ಪೂಜೆಯಿಂದ ಅಂತರಂಗ ಶುದ್ಧಿ ಸಾಧಿಸುವಲ್ಲಿ ಬೆಳಕಿನ ಮಾರ್ಗ ಗೋಚರವಾಗುತ್ತದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ನಗರದ ಮರಾಠಾ ಕಾಲನಿಯಲ್ಲಿರುವ ಡಾ.ಎಸ್.ಆರ್. ರಾಮನಗೌಡರ ಆಸ್ಪತ್ರೆಯ ನೂತನ ಸಭಾಭವನದಲ್ಲಿ ಶ್ರೀಜಗದ್ಗುರು ಪಂಚಾಚಾರ್ಯ ಮಾನವಧರ್ಮ ಸಂಸ್ಥೆಯ ಜಿಲ್ಲಾ ಘಟಕ ರವಿವಾರ ಹಮ್ಮಿಕೊಂಡಿದ್ದ ವೀರಶೈವ-ಲಿಂಗಾಯತ ಸಂಸ್ಕಾರ ಜಾಗೃತಿ ಸಮಾವೇಶದಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಮಾನವನ ಅಖಂಡ ಬದುಕೇ ಒಂದು ಪೂಜೆ. ನಿತ್ಯದಲ್ಲಿ ಇಷ್ಟಲಿಂಗ ಪೂಜೆ ಮಾಡುವುದರಿಂದ ಮಾನವ ಹೊಂದಿರಬಹುದಾದ ‘ನಾನು’ ಎಂಬ ಅಹಂಭಾವ ಕಡಿಮೆಯಾಗಿ ಅಲೌಕಿಕ ಜ್ಞಾನ ಚಕ್ಷು ತೆರೆದುಕೊಳ್ಳಲು ಸಾಧ್ಯವಾಗುತ್ತಿದ್ದು, ಆಗ ಮೋಕ್ಷಮಾರ್ಗದತ್ತ ಮನಸ್ಸು ಕೇಂದ್ರೀಕೃತವಾಗುತ್ತದೆ ಎಂದರು.
ವೀರಶೈವ ಧರ್ಮದ ಅಷ್ಟಾವರಣಗಳಲ್ಲಿ ಎರಡನೆಯ ಸ್ಥಾನದಲ್ಲಿರುವ ಇಷ್ಟಲಿಂಗದ ಅರ್ಚನೆ-ಆರಾಧನೆಗೆ ತನ್ನದೇ ಆದ ಮಹತ್ವವಿದೆ. ಇದು ಶಿವ ಮತ್ತು ಜೀವರ ಭೇದವನ್ನಳಿದು ಶಿವಜೀವೈಕ್ಯ ಸಾಧನೆಗೆ ಸೋಪಾನವನ್ನು ಒದಗಿಸುತ್ತದೆ. ಇಹದ ಬದುಕಿನ ಭಯ, ಆತಂಕ, ಒತ್ತಡ, ದ್ವಂದ್ವ, ವೈರುಧ್ಯ, ಸಂಕೀರ್ಣತೆಗಳ ದುರಾಲೋಚನೆಗಳು ನಿವಾರಣೆಯಾಗಿ ಎಲ್ಲರಲ್ಲಿ ಮತ್ತು ಎಲ್ಲ ಕೈಂಕರ್ಯಗಳಲ್ಲಿ ಶಿವನನ್ನೇ ಕಾಣುವ ಭಗವತ್ ಸಾನ್ನಿಧ್ಯದ ಸತ್ಯ ದರ್ಶನವಾಗಲು ಸಾಧ್ಯವಾಗುತ್ತದೆ ಎಂದೂ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ವಿಶ್ವಹಿಂದೂ ಪರಿಷತ್ತಿನ ಬಸವರಾಜ ಕೌಜಲಗಿ ಹಾಗೂ ಲೇಖಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ಹೊಸಯಲ್ಲಾಪೂರ ಮಳೆಮಲ್ಲೇಶ್ವರ ಸಂಸ್ಥಾನ ಹಿರೇಮಠದ ಶ್ರೀಶಶಾಂಕ ದೇವರು, ಶ್ರೀಜಗದ್ಗುರು ಪಂಚಾಚಾರ್ಯ ಮಾನವಧರ್ಮ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಆರ್. ರಾಮನಗೌಡರ, ಲೇಖಕಿ ರಾಜೇಶ್ವರಿ ಮಹೇಶ್ವರಯ್ಯ, ಸಾಹಿತಿ ಪ್ರೊ.ಬಸಯ್ಯ ಶಿರೋಳ, ರುದ್ರಬಳಗದ ಪ್ರಧಾನ ಬೋಧಕಿ ಕವಿತಾ ಹಿರೇಮಠ, ಮಾಜಿ ಸೈನಿಕ ಚಂದ್ರಶೇಖರ ಅಮಿನಗಡ, ನಿವೃತ್ತ ಪೊಲೀಸ್ ಅಧೀಕ್ಷಕ ಬಸವರಾಜ ಕಡಕೋಳ, ಉದ್ಯಮಿ ಸಿ.ಎಸ್.ಪಾಟೀಲ, ಉಮೇಶ ನೇಸರಗಿ, ಬಸವರಾಜ ಕೆಂಚರಳ್ಳಿ, ಪ್ರೇಮಲತಾ ಶೆಟ್ಟಿ, ಜಯಶ್ರೀ ಪಾಟೀಲ, ವಿಕ್ರಮ ಪಾಟೀಲ, ಹೇಮಲತಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು. ಪ್ರಶಾಂತ ರಾಮನಗೌಡರ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 