‘ನವೀಕರಿಸಬಹುದಾದ ಇಂಧನ ಹಾಗೂ ಮಳೆನೀರು ಕೊಯ್ಲಿಗೆ ಹೆಚ್ಚಿನ ಒತ್ತು ಅಗತ್ಯ’

‘ನವೀಕರಿಸಬಹುದಾದ ಇಂಧನ ಹಾಗೂ ಮಳೆನೀರು ಕೊಯ್ಲಿಗೆ ಹೆಚ್ಚಿನ ಒತ್ತು ಅಗತ್ಯ’ 'More emphasis needed on renewable energy and rainwater harvesting'

ಲೋಕದರ್ಶನ ವರದಿ 

ಹುಕ್ಕೇರಿ 06: ಪ್ರಸ್ತುತ ಪರಿಸರ ಸವಾಲುಗಳನ್ನು ಎದುರಿಸಲು ನವೀಕರಿಸಬಹುದಾದ ಇಂಧನ ಬಳಕೆ ಹಾಗೂ ಮಳೆನೀರು ಕೊಯ್ಲು ಅತಿ ಅವಶ್ಯಕವಾಗಿವೆ ಎಂದು ಹೊಸಪೇಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀಲಕಂಠ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ. ಸೌರಶಕ್ತಿ, ಗಾಳಿಶಕ್ತಿ, ಜೈವ ಇಂಧನದಂತಹ ನವೀಕರಿಸಬಹುದಾದ ಇಂಧನ ಮೂಲಗಳು ಪರಿಸರ ಸ್ನೇಹಿಯಾಗಿದ್ದು, ಇಂಧನ ಕೊರತೆ ನಿವಾರಣೆಗೆ ದೀರ್ಘಕಾಲೀನ ಪರಿಹಾರವಾಗಿವೆ ಎಂದು ತಿಳಿಸಿದರು.  

ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಜಂಟಿ ಯಾಗಿ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಶಕ್ತಿ ಸದನ ಮಹಿಳಾ ಕೇಂದ್ರದ  ಸಭಾಂಗಣದಲ್ಲಿ ಆಯೋಜಿಸಲಾದ ನವೀಕರಿಸಬಹುದಾದ ಇಂಧನ ಕುರಿತು ತರಬೇತಿ ಉದ್ಘಾಟಿಸಿ ಮಾತನಾಡಿದರು.   

ತರಬೇತಿದಾರರಾದ ಸುರೇಖಾ ಪಾಟೀಲ ಘನ ಕಸ ನಿರ್ವಹಣೆ ಎಂದರೆ ಮನೆಗಳು, ಕಚೇರಿಗಳು, ಮಾರುಕಟ್ಟೆಗಳು ಹಾಗೂ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ವಿಂಗಡಿಸಿ ಮತ್ತು ವಿಲೇವಾರಿ ಮಾಡುವ ಪ್ರಕ್ರಿಯೆಯಾಗಿದೆ   ಇದು ಪರಿಸರ ಸಂರಕ್ಷಣೆಯಲ್ಲೂ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.  

ಸರಿಯಾದ ಕಸ ನಿರ್ವಹಣೆಯ ಕೊರತೆಯಿಂದ  ವಾತಾವರಣ ಮಾಲಿನ್ಯ, ದುರ್ವಾಸನೆ ಮತ್ತು ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ. ಆದ್ದರಿಂದ ಕಸವನ್ನು ಎಲ್ಲಿ ಬೇಕಾದರೂ ಎಸೆಯದೆ ನಿಗದಿತ ಸ್ಥಳಗಳಲ್ಲಿ ಹಾಕುವುದು ಅಗತ್ಯವಾಗಿದೆ ಎಂದು ಮಾಹಿತಿ ನೀಡಿದರು.  

ಸುಗಂಧಾ ಅಲ್ಲಟ್ಟಿ, ದ್ರಾಕ್ಷಾಯಣಿ ಮಠಪತಿ,  ಬಸವರಾಜ ಮನ್ನಿಕೇರಿ ತರಬೇತಿ ನೀಡಿದರು.