ಯೋಗರಾಜ್ ಭಟ್, ಇ. ಕೃಷ್ಣಪ್ಪ ಕಾಂಬಿನೇಷನ್‌ನಲ್ಲಿ ‘ಮನದ ಕಡಲು’

'Manada Kadalu' in Combination of E.Krishnappa Yogaraj Bhatt

‘ಮುಂಗಾರು ಮಳೆ’ ನಿರ್ಮಾಪಕ, ನಿರ್ದೇಶಕರಿಂದ ಮತ್ತೊಂದು ವಿಭಿನ್ನ ಪ್ರೇಮ ಕಥಾನಕ 

18 ವರ್ಷಗಳ ಹಿಂದೆ ಇ.ಕೆ. ಎಂಟರ್‌ಟೈನರ್ಸ್‌ ಲಾಂಛನದಲ್ಲಿ ಇ. ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಸೂಪರ್ ಹಿಟ್ ಚಲನಚಿತ್ರ ‘ಮುಂಗಾರು ಮಳೆ’. ಇಷ್ಟು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಇ. ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ಹೆಸರು ‘ಮನದ ಕಡಲು’. ಸುಮುಖ ಈ ಚಿತ್ರದ ನಾಯಕನಾಗಿ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ನಾಯಕಿಯರಾಗಿ ಹಾಗೂ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಿ.ಗಂಗಾಧರ್ ಈ ಚಿತ್ರದ ಸಹ ನಿರ್ಮಾಪಕರು. ಸದ್ಯ ಬೆಂಗಳೂರಿನ ಅರಮನೆ ಆವರಣದಲ್ಲಿ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡ ಮಾಧ್ಯಮದ ಮಿತ್ರರನ್ನು ಚಿತ್ರೀಕರಣ ವೀಕ್ಷಣೆ ಹಾಗೂ ಪತ್ರಿಕಾಗೋಷ್ಠಿಗೆ ಆಹ್ವಾನಿಸಿತ್ತು. ಚಿತ್ರದ ಶೀರ್ಷಿಕೆ ಕೂಡ ಇದೇ ಸಂದರ್ಭದಲ್ಲಿ ಅನಾವರಣವಾಯಿತು.  

‘ಮುಂಗಾರು ಮಳೆ’ ನಂತರ ಇ. ಕೃಷ್ಣಪ್ಪ ರವರ ನಿರ್ಮಾಣದಲ್ಲಿ ಇನ್ನೊಂದು ಚಿತ್ರ ನಿರ್ದೇಶನ ಮಾಡುವ ಯೋಚನೆ ಇತ್ತು ಎಂದು ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, ‘ಆದರೆ ಅವರು ರಾಜಕೀಯದಲ್ಲಿ ಮತ್ತು ನಾನು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದೆ. ಕೊರೋನ ನಂತರ ಮತ್ತೆ ಒಟ್ಟಿಗೆ ಚಿತ್ರ ಮಾಡುವುದು ನಿರ್ಧಾರವಾಯಿತು. ಹೊಸಬರ ಜೊತೆಗೆ ಸಿನಿಮಾ ಮಾಡೋಣ ಎಂದು ಕೃಷ್ಣಪ್ಪ ಹೇಳಿದರು. ಹೊಸಬರ ಜೊತೆಗೆ ಸಿನಿಮಾ ಮಾಡೋದು ಸುಲಭವಲ್ಲ. ಈ ಚಿತ್ರಕ್ಕೆ ಹೀರೋ ಸಿಕ್ಕಿರಲಿಲ್ಲ. ಆಗಲೇ ಯಾವುದೋ ಕೆಲಸದ ವಿಷಯವಾಗಿ ಸುಮುಖ ಫೋನ್ ಮಾಡಿದ್ದ. ಫೋಟೋ ಕಳುಹಿಸು ಎಂದೆ. ಅವನು ಎಲ್ಲರಿಗೂ ಇಷ್ಟವಾದ. ಜೊತೆಗೆ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದರಲ್ಲೂ ಕರ್ನಾಟಕದ 12 ಜಿಲ್ಲೆಗಳಲ್ಲಿ ಜಿತ್ರೀಕರಣ ಮಾಡಿದ್ದೇವೆ. ಮಹಾರಾಷ್ಟ್ರದ ಮುರುಡ್ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದಕ್ಕೆ 15 ರೀತಿಯ ಪರ್ಮಿಷನ್ ಬೇಕು. ಅದೊಂದು ಯುದ್ಧ ಮಾಡಿದ ಅನುಭವ. ಬಿಸಿಲು, ರಣಮಳೆಯ ನಡುವೆ ಚಿತ್ರೀಕರಣ ಸುಲಭವಲ್ಲ. ಆದರೆ, ಬಹಳ ಚೆನ್ನಾಗಿ ಬಂದಿದೆ. ಇಲ್ಲಿ ರಂಗಾಯಣ ರಘು ಆದಿವಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಾಗಿ ಹೊಸ ಭಾಷೆ ಸೃಷ್ಟಿ ಮಾಡಿದ್ದೇವೆ. ರಂಗಾಯಣ ರಘು ಸಹ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ ಶೇ. 95ರಷ್ಟು ಚಿತ್ರೀಕರಣ ಮುಗಿದಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.  

ನಂತರ ನಿರ್ಮಾಪಕ ಇ.ಕೃಷ್ಣಪ್ಪ ಮಾತನಾಡಿ, ‘ಕಥೆ ಚೆನ್ನಾಗಿರಬೇಕು. ಕನ್ನಡಿಗರು ಮೆಚ್ಚುವ ಹಾಗೆ ಮಾಡಬೇಕು. ಇದೊಂದು ಪ್ರಾಮಾಣಿಕ ಪ್ರಯತ್ನ. ಕನ್ನಡದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿವೆ. ಅವರನ್ನು ಸರಿಯಾಗಿ ಗುರುತಿಸುವ ಕೆಲಸವಾಗುತ್ತಿಲ್ಲ. ಹೊಸಬರಿಗೆ ಒಳ್ಳೇದಾಗಬೇಕು. ಇದು ಸಹ ‘ಮುಂಗಾರು ಮಳೆ’ ಮಟ್ಟಕ್ಕೆ ಹೋಗಬೇಕು. ಮಧ್ಯೆ ರಾಜಕಾರಣಕ್ಕೆ ಹೋಗಿದ್ದರಿಂದ ಚಿತ್ರ ಮಾಡಲು ಸಾಧ್ಯವಾಗಿರಲಿಲ್ಲ. ಯೋಗರಾಜ್ ಭಟ್ ಸಹ ಬ್ಯುಸಿಯಾಗಿದ್ದರು. ಈಗ ಅದು ಸಾಧ್ಯವಾಗಿದೆ’ ಎಂದರು. “ಮುಂಗಾರು ಮಳೆ’ ಚಿತ್ರದಿಂದ ಇ.ಕೃಷ್ಣಪ್ಪ ಅವರ ನಿರ್ಮಾಣದ ಎಲ್ಲಾ ಚಿತ್ರಗಳಲ್ಲೂ ಸಹ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಯೋಗರಾಜ್ ಭಟ್ ಅವರ ಜೊತೆಗೆ ಹದಿನೆಂಟು ವರ್ಷಗಳ ನಂತರ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ’ ಎನ್ನುತ್ತಾರೆ ಸಹ ನಿರ್ಮಾಪಕ ಗಂಗಾಧರ್‌. ವೇದಿಕೆಯಲ್ಲಿ ನಟರಾದ ರಂಗಾಯಣ ರಘು, ದತ್ತಣ್ಣ, ನಾಯಕ ಸುಮುಖ, ನಾಯಕಿಯರಾದ ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಗೀತರಚನೆಕಾರ ಜಯಂತ್ ಕಾಯ್ಕಿಣಿ, ಪ್ರತಾಪ್ ರಾವ್ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.