ಟೀಸರ್‌ನಿಂದ ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು 'ಲವ್ ಸೀಸನ್ಸ್‌'

ಟೀಸರ್‌ನಿಂದ ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು 'ಲವ್ ಸೀಸನ್ಸ್‌' 'Love Seasons' begins in Sandalwood with teaser

ಲೋಕದರ್ಶನ ವರದಿ 

ಇದು ಹೊಸಬರ ಅಮರ ಮಧುರ ಪ್ರೇಮ ಕಥೆ  

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಹೊಸ ತಂಡದಿಂದ ಲವ್ ಸೀಸನ್ ಶುರುವಾಗಿದೆ. ಹೌದು ಎನ್‌.ಆರ್‌. ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಸಿನಿಮಾ 'ಲವ್ ಸೀಸನ್ಸ್‌'. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿದೆ. ಇದು ನಿರ್ಮಾಪಕ ಎನ್‌.ಆರ್‌. ಮಂಜುನಾಥ, ನಿರ್ದೇಶಕ ಕೃತ್ವಿಕ್ ಹಾಗೂ ನಾಯಕ ಮುಕುಂದ ರಾಮಸ್ವಾಮಿ ಅವರಿಗೆ ಮೊದಲ ಪ್ರಯತ್ನದ ಸಿನಿಮಾ. ಸಾಮಾನ್ಯವಾಗಿ ನಾವೆಲ್ಲಾ ಪ್ರೀತಿಯಲ್ಲಿ ಬಿದ್ವಿ ಎನ್ನುತ್ತೇವೆ. ಆದರೆ, ಈ ತಂಡ ಪ್ರೀತಿಯಲ್ಲಿ ಎದ್ವಿ ಎಂಬ ಅಂಶವನ್ನು ಜನರಿಗೆ ತಲುಪಿಸಲು ಹೊರಟಿದೆ. ಅಮರ ಮಧುರ ಪ್ರೇಮ ಎಂಬ ಅಡಿ ಬರಹವಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ನಟ ರಾಜೇಶ್ ನಟರಂಗ ಮಾತನಾಡಿ, 'ಲವ್ ಕಾನ್ಸೆಪ್ಟ್‌ ಯಾವತ್ತೂ ಸಾಯಲ್ಲ. ಅಂತಹ ಪ್ರೀತಿಯನ್ನು ಇಟ್ಟುಕೊಂಡು ನಿರ್ದೇಶಕರು ಹೊಸದಾಗಿ ಅರ್ಥವನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಹೊಸಬರ ಸಿನಿಮಾ. ಹಾಗಾಗಿ ನಾನು ಕಥೆ ಕೇಳುತ್ತಿದ್ದಂತೆ ನಟಿಸಲು ಒಪ್ಪಿಕೊಂಡೆ. ನಾನಿಲ್ಲಿ ಮಿಡ್ಲ್‌ ಕ್ಲಾಸ್ ತಂದೆಯ ಪಾತ್ರ ಮಾಡಿದ್ದೇನೆ' ಎಂದರು. ನಟಿ ಸಂಗೀತ ಅನೀಲ, 'ಟೀಸರ್ ನೋಡಿ ತುಂಬಾ ಖುಷಿ ಆಯ್ತು. ಇದು ಹೊಸಬರ ತಂಡ ಆದರೆ, ಶೂಟಿಂಗ್ ಟೈಮ್‌ನಲ್ಲಿ ಹಾಗೆ ಅನಿಸಲಿಲ್ಲ. ನಾನು ಇದೇ ಮೊದಲಬಾರಿ ಕ್ರಿಶ್ಚಿಯನ್ ತಾಯಿಯಾಗಿ ಪಾತ್ರ ಮಾಡಿದ್ದೇನೆ' ಎಂದು ಹೇಳಿದರು. 

ನಂತರ ವೇದಿಕೆಯಲ್ಲಿ ಚಿತ್ರದ ನಿರ್ಮಾಪಕ ಎನ್‌.ಆರ್‌. ಮಂಜುನಾಥ, 'ಸಿನಿಮಾ ಮಾಡೋದು ನನ್ನ ಮಗನಿಗೆ ಚಿಕ್ಕಂದಿನಿಂದ ಕನಸು. ನನಗೂ 18 ವರ್ಷದವ ಇದ್ದಾಗ ಸಿನಿಮಾ ಮಾಡುವ ಆಸೆ ಇತ್ತು. ಅದು ಇಡೇರಲಿಲ್ಲ. ಈಗ ಮಗನಿಗಾಗಿ ಈ ಸಿನಿಮಾ ಮಾಡಿದೆ. ನಮ್ಮ ತಂದೆಯ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಮಾಡಿದ್ದು, ಈ ಸಂಸ್ಥೆಯಿಂದ ಒಳ್ಳೆಯ ಸಿನಿಮಾ ಕೊಡಬೇಕು ಎಂಬ ಉದ್ದೇಶದಿಂದ ಈ ಲವ್ ಸ್ಟೋರಿ ಸಿನಿಮಾ ಮಾಡಿದ್ದೇವೆ. ಅವನ ಕನಸಿನೊಂದಿಗೆ ಮಗ ನನ್ನ ಕನಸು ಇಡೇರಿಸಿದ್ದಾನೆ. ನಾನು ಸಿನಿಮಾ ನೋಡಿದ್ದು ತುಂಬಾ ಚನ್ನಾಗಿ ಬಂದಿದೆ. ಸೆನ್ಸಾರ್ ಕೂಡ ಆಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲಾ ಗೀತೆಗಳು ಅದ್ಬುತವಾಗಿ ಬಂದಿವೆ. ಸದ್ಯದಲ್ಲೇ ಈ ಹಾಡುಗಳನ್ನು ಒಂದೊಂದಾಗಿ ರೀಲೀಸ್ ಮಾಡುತ್ತೇವೆ. ಸಾಮಾನ್ಯವಾಗಿ ಪರಿಸರದಲ್ಲಿ ಮೂರು ಸೀಸನ್ಸ್‌ ಕಾಣುತ್ತೇವೆ. ಅವುಗಳಲ್ಲಿ ಲವ್ ಸೀಸನ್ಸ್‌ ಯಾವುದು ಎಂದು ತಿಳಿಯಲು ಈ ಸಿನಿಮಾ ನೋಡಬೇಕು. ಈ ಚಿತ್ರವನ್ನು ತುಂಬಾ ಇಷ್ಟಪಟ್ಟು ಮಾಡಿದ್ದು, ಜೂನ್‌ನಲ್ಲಿ ರೀಲೀಸ್ ಮಾಡುವ ಪ್ಲ್ಯಾನ್ ಇದೆ' ಎಂದು ಹೇಳಿದರು. 

ಇನ್ನು ಚಿತ್ರದ ನಾಯಕ ಮುಕುಂದ ರಾಮಸ್ವಾಮಿ, 'ನಾನು ಚಿತ್ರದಲ್ಲಿ ಮೂರು ಸೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. 2018ರಿಂದ ನಟನೆ ಶುರು ಮಾಡಿದ್ದು, ಇಂದು ಸಿನಿಮಾದಲ್ಲಿ ನಾಯಕ ಆಗಿದ್ದೇನೆ. ನಾನಿಲ್ಲಿ ರಾಮ್ ಪಾತ್ರ ಮಾಡಿದ್ದು, ಅದು ಎಲ್ಲರಿಗೂ ಕನೆಕ್ಟ್‌ ಆಗುವ ಪಾತ್ರ. ನಮ್ಮ ಲೈಫ್‌ನಲ್ಲಿ ಬರುವ ಢಿಪರೇಂಟ್ ಪ್ರೀತಿಗಳ ಬಗ್ಗೆ ಈ ಚಿತ್ರದಲ್ಲಿ ಹೇಳಿದ್ದೇವೆ' ಎಂದರು. ಸಂಗೀತ ನಿರ್ದೇಶಕ ವೀರ್ ಸಮರ್ಥ, 'ಇದು ಲವ್ ಸ್ಟೋರಿ ಸೊಸಿಯಲ್ ಡ್ರಾಮಾ ಸಿನಿಮಾ. ಮೂರು ಜನ ನಾಯಕಿಯರು ಇದರಲ್ಲಿ ಇದ್ದಾರೆ. ಒಟ್ಟು ಐದು ಹಾಡುಗಳಿದ್ದು, ನಾಲ್ಕು ಕನ್ನಡ ಒಂದು ಇಂಗ್ಲೀಷ್ ಗೀತೆ ಬಳಸಿದ್ದೇವೆ. ಕೆ. ಕಲ್ಯಾಣ, ಪ್ರಮೋದ್ ಮರವಂತೆ, ಕೃಷ್ ಜೋಶಿ, ಧನಂಜಯ ರಂಜನ್ ಹಾಗೂ ಸಾಯಿ ಸರ್ವೆಶ್ ಹಾಡುಗಳನ್ನು ಬರೆದಿದ್ದಾರೆ' ಎಂದು ಮಾಹಿತಿ ನೀಡಿದರು. ಮೂಲತಃ ರಂಗಭೂಮಿಯಿಂದ ಬಂದ ಕೃತ್ವಿಕ್ 'ಕ್ಷತ್ರಿಯ', 'ಬುದ್ದಿವಂತ 2', 'ಗುರುದೇವ ಹೊಯ್ಸಳ' ಸಿನಿಮಾಗಳಿಗೆ ಕೆಲಸ ಮಾಡಿ, 10 ವರ್ಷ ಸಿನಿಮಾ ರಂಗದಲ್ಲಿ ಅನುಭವ ಪಡೆದುಕೊಂಡು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವೇದಿಕೆಯಲ್ಲಿ ನಿರ್ದೇಶಕರು ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನಾಯಕಿಯರಾದ ದೀಯಾ ಕೀರ್ತಿ, ಚಂದನ ಗೌಡ, ಶ್ವೇತಾ ಹಾಗೂ ಕಲಾವಿದರಾದ ಸದಾನಂದ, ಚೇತನ ದುರ್ಗಾ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ಸಾಹಿತಿಗಳಾದ ಪ್ರಮೋದ್ ಮರವಂತೆ, ಸಾಯಿ ಸರ್ವೆಶ್ ತಮ್ಮ ಅನುಭವ ಹಂಚಿಕೊಂಡುರು. ಅಂದಂಗೆ ಈ ಚಿತ್ರವನ್ನು ಜೂನ್‌ನಲ್ಲಿ ಎಂ.ಪಿ. ಫಿಲಂಸ್ ಮುಖೇನ ಕೆ. ಮುನೀಂದ್ರ ರಾಜ್ಯಾದ್ಯಂತ ತೆರೆಗೆ ತರುತ್ತಿದ್ದಾರೆ.