'ಬಾಲಕಾರ್ಮಿಕ, ಜೀತ ಪದ್ಧತಿಯಂತಹ ಸಾಮಾಜಿಕ ಪಿಡುಗು ನಿಯಂತ್ರಣ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು'

'ಬಾಲಕಾರ್ಮಿಕ, ಜೀತ ಪದ್ಧತಿಯಂತಹ ಸಾಮಾಜಿಕ ಪಿಡುಗು ನಿಯಂತ್ರಣ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು' 'Laws to control social evils like child labor and serfdom should be implemented effectively'

ಬೆಳಗಾವಿ, ಫೆ.09: ಬಾಲಕಾರ್ಮಿಕ, ಜೀತ ಪದ್ಧತಿಯಂತಹ ಸಾಮಾಜಿಕ ಪಿಡುಗನ್ನು ಬೇರು ಸಮೇತ ಕಿತ್ತೊಗೆಯಬೇಕಾಗಿದೆ. ಇದಕ್ಕಾಗಿ ಜಾರಿಯಲ್ಲಿರುವ ಕಾನೂನುಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕಾಗಿದೆ ಎಂದು 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಧೀಶರಾದ ಸಂಧ್ಯಾ ಎನ್‌. ಅವರು ಹೇಳಿದರು.ಬೆಳಗಾವಿ ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲನಲ್ಲಿ ಸೋಮವಾರ(ಫೆ.9) ರಂದು ಜರುಗಿದ ಜೀತ ಕಾರ್ಮಿಕ ಕಾಯ್ದೆ 1976 ಮತ್ತು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986, ತಿದ್ದುಪಡಿ ಕಾಯ್ದೆ 2016ರ ಕುರಿತು ನಿಷೇಧಾಧಿಕಾರಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮಕ್ಕಳ ಕೈಯಲ್ಲಿ ಬಳಪ, ಪುಸ್ತಕ ಇದ್ದರೆ ಚೆಂದ ಆದರೆ ಇಂದಿನ ಎಷ್ಟೋ ಮಕ್ಕಳ ಕೈಯಲ್ಲಿ ಇಟ್ಟಿಗೆಯಂತಹ ವಸ್ತುಗಳನ್ನು ನೀಡುವುದರ ಮೂಲಕ ಅವರನ್ನು ಬಾಲ ಕಾರ್ಮಿಕರನ್ನಾಗಿಸಲಾಗುತ್ತಿರುವುದು ಕಳವಳಕಾರಿಯಾದಂತಹ ಸಂಗತಿಯಾಗಿದೆ.ಮಕ್ಕಳಿಗೂ ಅವರದೇ ಆದಂತಹ ಮೂಲಭೂತ ಹಕ್ಕುಗಳಿದ್ದು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಅನೇಕ ಕಾನೂನುಗಳು ಜಾರಿಯಲ್ಲಿವೆ. ಈ ಕಾನೂನುಗಳ ಕುರಿತು ಜನಜಾಗೃತಿ ಮೂಡಿಸುವುದರ ಜೊತೆಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.  

ಮಕ್ಕಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇರುವುದಿಲ್ಲ, ಇಂದಿನ ಆಧುನಿಕ ಯುಗದಲ್ಲಿಯೂ ಸಹ ಬಾಲಕಾರ್ಮಿಕರ ಜೊತೆಗೆ ಜೀತ ಪದ್ಧತಿಯಂತಹ ಅನಿಷ್ಠಕರ ಪದ್ಧತಿಗಳನ್ನು ಬೇರು ಸಮೇತ ಕಿತ್ತೊಗೆಯಲು ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಅರಿತು ಪ್ರಾಮಾಣಿಕವಾಗಿ ನಿರ್ವಹಿಸುವಂತೆ 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಧೀಶರಾದ ಸಂಧ್ಯಾ ಎನ್‌. ಅವರು ಕರೇ ನೀಡಿದರು. 

ಅಪರ ಜಿಲ್ಲಾಧಿಕಾರಿ ಹಾಗೂ ಜೀತ ವಿಮುಕ್ತ ಪುನರ್ವಸತಿ ಯೋಜನೆಯ ನೋಡೆಲ್ ಅಧಿಕಾರಿಗಳಾದ ವಿಜಯಕುಮಾರ ಹೊನಕೇರಿ ಅವರು ಮಾತನಾಡಿ ಜೀತ ಪದ್ಧತಿ, ಬಾಲಕಾರ್ಮಿಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಮಧ್ಯ ಸಮನ್ವಯ ಸಾಧಿಸುವ ಉದ್ದೇಶದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. 

ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ನಾವೆಲ್ಲರು ನಿಯಂತ್ರಿಸಬೇಕಾಗಿದೆ. ಶಾಲೆಗಳಲ್ಲಿ ನಿರಂತರವಾಗಿ ಗೈರಾಗಿರುವ ವಿಧ್ಯಾರ್ಥಿಗಳ ಮೇಲೆ ನಿಗಾವಹಿಸಬೇಕು. ವಿವಿಧ ಇಲಾಖೆಗಳಿಂದ ಬಾಲ್ಯ ವಿವಾಹ ಕುರಿತು ಜಾಗೃತಿ ಕಾರ್ಯಕ್ರಮಗಳಿಗೆ ಎಲ್ಲ ಇಲಾಖೆಗಳು ಸಹಕಾರ ನೀಡಬೇಕು. ಬಾಲ್ಯ ವಿವಾಹ, ಜೀತ ಪದ್ಧತಿಯಂತಹ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಲ್ಲಿ ಈ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದರು.ರು.ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬಡತನ ಅನಕ್ಷರಸ್ಥದ ಕಾರಣಗಳಿಂದಾಗಿ ಸಮಾಜದಲ್ಲಿ ಜೀತ ಪದ್ಧತಿ, ಬಾಲ ಕಾರ್ಮಿಕದಂತಹ ಅನಿಷ್ಠ ಪದ್ಧತಿಗಳೂ ಜಿವಂತವಿವೆ. ಇಂತಹ ಅನಿಷ್ಠ ಪದ್ಧತಿಗಳನ್ನೂ ಹೋಗಲಾಡಿಸಲು ಅನೇಕ ಕಾನೂನುಗಳು ಜಾರಿಯಲ್ಲಿವೆ. ಈ ಕಾನೂನುಗಳ ಕುರಿತು ಜನಜಾಗೃತಿ ಮೂಡಿಸುವ ಉದ್ಧೇಶದೊಂದಿಗೆ ಈ ಕಾರ್ಯಾಗಾರವನ್ನು ಆಯೊಜಿಸಲಾಗಿದೆ ಎಂದರು.  

ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾದ ಡಾ.ಕೆ.ರಾಘವೇಂದ್ರ ಭಟ್ ಅವರು ಬಾಲಕಾರ್ಮಿಕ ಮತ್ತು ಕಿಶೊರ ಕಾರ್ಮಿಕ ಕಾಯ್ದೆ 1986 ಮತ್ತು ತಿದ್ದುಪಡಿಕಾಯ್ದೆ 2016ರ ಕುರಿತು ಮಾತನಾಡಿ ಜೀತ ಕಾರ್ಮಿಕ ಕಾಯ್ದೆ ಜಾರಿಯಾಗಿ ಐವತ್ತು ವರ್ಷಗಳು ಪೂರ್ಣಗೊಂಡರು ಸಹ ಸಮಾಜದಲ್ಲಿ ಇಂದಿಗೂ ಸಹ ಬಾಲ/ಕಿಶೋರ ಕಾರ್ಮಿಕ, ಜೀತ ಪದ್ಧತಿ ಜಾರಿಯಲ್ಲಿರುವುದು ದುರದೃಷ್ಟಕರವಾಗಿದೆ.  

ದೇಶದ ಒಟ್ಟು ಜನಸಂಖ್ಯೆಯಲ್ಲಿ ಪ್ರತಿಶತ ನಲವತ್ತೋಂದರಷ್ಟು ಮಕ್ಕಳ ಸಂಖ್ಯೆ ಇದ್ದು ಮಕ್ಕಳ ಸ್ನೇಹಿ ಸೌಲಭ್ಯಗಳನ್ನು ಒದಗಿಸುವ ಕಾರ್ಯವಾಗಬೇಕಾಗಿದೆ. ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಯಾವುದೇ ಪ್ರದೇಶ ಅಭಿವೃದ್ಧಿ ಹೊಂದ ಬೇಕಾದಲ್ಲಿ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ದತಿಯಂತಹ ಅನಿಷ್ಠ ಪದ್ಧತಿಗಳ ನಿಯಂತ್ರಣ ಅತೀ ಮುಖ್ಯವಾಗಿದೆ.ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸರಕಾರಿ ಅಧಿಕಾರಿ, ಸಿಬ್ಬಂದಿಗಳು ಪಾತ್ರ ಬಹುಮುಖ್ಯವಾಗಿರುತ್ತದೆ. ಬಾಲ ಕಾರ್ಮಿಕ, ಜೀತ ಪದ್ಧತಿ ಕುರಿತು ದೂರುಗಳಿಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು.  

ಇಂದಿನ ಮಕ್ಕಳೇ ಇಂದಿನ ಪ್ರಜೆಗಳಾಗಿದ್ದು ಸರಕಾರ ಈ ದೇಶದ ಪ್ರತಿಯೊಂದು ಮಗುವಿನ ಹಾಗೂ ಮಕ್ಕಳ ಕಾನೂನಾತ್ಮಕ ಪೋಷಕವಾಗಿದೆ. ಸರಕಾರದ ಯೋಜನೆಗಳ ಅನುಷ್ಠಾನದ ಫಲಾನುಭವಿಗಳಿಂದ ಕುಟುಂಬದಲ್ಲಿ ವಿವಾಹ ಬಾಲ,ಕಿಶೊರ,ಬಾಲ ಕಾರ್ಮಿಕ ಪದ್ಧತಿಗೆ ಅವಕಾಶ ನೀಡುವುದಿಲ್ಲ, ತಪ್ಪಿದ್ದಲ್ಲಿ ಸೌಲಭ್ಯ ರದ್ದು ಪಡಿಸಿ ಪ್ರಕರಣ ದಾಖಲಿಸಬಹುದಾಗಿದೆ ಎಂದು ಕರಾರು ಪತ್ರ ಪಡೆದುಕೊಳ್ಳಬೇಕು. ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಇಲಾಖೆ ಹಾಗೂ ವ್ಯವಸ್ಥೆಗಳ ದೂರವಾಣಿ ಸಂಖ್ಯೆಗಳನ್ನು ಕಚೇರಿಗಳಲ್ಲಿ ಭಿತ್ತರಿಸಬೇಕು.  

ಬಾಲಕಾರ್ಮಿಕ, ಬಾಲ್ಯವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ಗ್ರಾಮ ಮಕ್ಕಳ ರಕ್ಷಣಾ ಸಮಿತಿ, ಗ್ರಾಮ ಪಂಚಾಯತಿ ಮಟ್ಟದ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ, ತಾಲೂಕು ಮಕ್ಕಳ ರಕ್ಷಣಾ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿ ಸಭೆಗಳನ್ನು ನಿಯಮಿತವಾಗಿ ಜರುಗಿಸಬೇಕು ಎಂದು ತಿಳಿಸಿದ ಅವರು ಬಾಲಕಾರ್ಮಿಕ ಮತ್ತು ಕಿಶೊರ ಕಾರ್ಮಿಕ ಕಾಯ್ದೆ 1986 ಮತ್ತು ತಿದುಪಡಿಕಾಯ್ದೆ 2016ರ ಕುರಿತು ವಿಸ್ತ್ರತವಾದ ಮಾಹಿತಿ ನೀಡಿದರು. 

ನ್ಯಾಯವಾದಿಗಳಾದ ಸ್ಟ್ಯಾನಿ ಕ್ರಿಸ್ಟೋಫರ್ ಅವರು ಜೀತ ಕಾರ್ಮಿಕ ನಿಷೇಧ ಕಾಯ್ದೆ 1976 ಕುರಿತು ಹಾಗೂ ಸ್ಪಂಧನ ಸ್ವಯಂ ಸೇವಾ ಸಂಸ್ಥೆಯ ನಿರ್ದೆಶಕರಾದ ವ್ಹಿ.ಸುಶೀಲ ಅವರು ಮಾನವ ಕಳ್ಳ ಸಾಗಾಣಿಕೆ ಮತ್ತು ಬಾಲ್ಯ ವಿವಾಹ ಪದ್ಧತಿ ನಿಷೇಧ ಕುರಿತು ಉಪನ್ಯಾಸ ನೀಡಿದರು.ಕಾರ್ಯಾಗಾರದಲ್ಲಿ ಪೊಲಿಸ್ ಆಯುಕ್ತ ಬೊರಸೆ ಗುಲಾಬರಾವ್ ಭೂಷಣ, ಪರಶಿಕ್ಷಣಾರ್ಥಿ ಆಯ್‌.ಎ.ಎಸ್‌. ಅಧಿಕಾರಿ ಅಭಿನವ ಜೈನ್, ಬೆಳಗಾವಿ ವಿಭಾಗದ ಐ.ಜೆ.ಎಮ್‌. ವೇಣುಗೋಪಾಲ,ಯೋಜನಾ ನಿರ್ದೆಶಕರಾದ ಜ್ಯೋತಿ ಕಾಂತೆ, ಕಾರ್ಮಿಕ ಅಧಿಕಾರಿಗಳಾದ ಎಮ್‌.ಎಸ್‌.ಜೋಗುರ, 

ರಾಜೇಶ ಜಾಧವ, ಕಾರ್ಮಿಕ ನೀರಿಕ್ಷಕರುಗಳಾದ ಸಂಜೀವ ಭೊಸಲೆ, ರಮೇಶ ಕೆಸರೂರ, ರಾಜೇಶ ಅಸ್ನೊಟಿಕರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ ಅವರು ಜೀತ ವಿಮುಕ್ತ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.