ಶಂಕರ ಸ್ತವ ಕೃಪಾ ಮಹಿಳಾ ಮಂಡಳಿಯಿಂದ ಗುರುವಂದನಾ ಕಾರ್ಯಕ್ರಮ

ಶಂಕರ ಸ್ತವ ಕೃಪಾ ಮಹಿಳಾ ಮಂಡಳಿಯಿಂದ ಗುರುವಂದನಾ ಕಾರ್ಯಕ್ರಮ  'Guruvandana' program by Shankara Stava Krupa Mahila Mandala

ಲೋಕದರ್ಶನ ವರದಿ

ಧಾರವಾಡ 06 : ಮಾಳಮಡ್ಡಿಯ ಕರಗುಂದರಿ ಕಾಂಪೌಂಡ್ನ ‘ವಸಂತ’ ಸಭಾಂಗಣದಲ್ಲಿ ಆಗಸ್ಟ್‌ 5ರಂದು ಸಂಜೆ  ಶಂಕರ ಸ್ತವ ಕೃಪಾ ಮಹಿಳಾ ಮಂಡಳಿಯಿಂದ ಗುರುವಂದನಾ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ಮಂಡಳಿಯ ಸದಸ್ಯೆಯರು ಗುರುಸ್ವರೂಪಿಣಿಯರಾದ ಸುರೇಖಾ ಮುಳುಗುಂದ, ಸ್ಮೃತಿ ಕುರಂದವಾಡ ಹಾಗೂ ಸುಮಾ ದೇಸಾಯಿ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರೇಖಾ ಮುಳುಗುಂದ,  ಶಂಕರ ಭಗವತ್ಪಾದರ ಕೃತಿಗಳು ಮಾನವ ಜೀವನಕ್ಕೆ ಮಾರ್ಗದರ್ಶಕವಾಗಿದ್ದು, ಅವುಗಳ ಅಧ್ಯಯನ ಮತ್ತು ಪ್ರಸಾರ ಮುಂದಿನ ಪೀಳಿಗೆಗೆ ತಲುಪುವುದು ಅಗತ್ಯ ಎಂದು ತಿಳಿಸಿದರು.

ಉಪಾಧ್ಯಕ್ಷೆಶ್ರೀಮತಿ ಸ್ಮೃತಿ ಕುರಂದವಾಡ ಮಾತನಾಡಿ, ಕೇವಲ ಐದು ಸದಸ್ಯೆಯರಿಂದ ಆರಂಭವಾದ ಮಂಡಳಿ ಇಂದು 72 ಸದಸ್ಯೆಯರೊಂದಿಗೆ ವಿವಿಧ ಊರುಗಳ ಮಹಿಳೆಯರನ್ನು ಒಗ್ಗೂಡಿಸಿ 30ಕ್ಕೂ ಹೆಚ್ಚು ಕೃತಿಗಳ ಅಧ್ಯಯನ ನಡೆಸಿದ್ದು, ಶೀಘ್ರದಲ್ಲೇ 100 ಕೃತಿಗಳ ಗುರಿ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಸುಮಾ ದೇಸಾಯಿ ಭಾರತೀಯ ಸಂಸ್ಕಾರ, ಶಿಷ್ಟಾಚಾರ ಹಾಗೂ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವಲ್ಲಿ ಇಂತಹ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳಿಂದ ಆನ್ಲೈನ್ ಮೂಲಕ ಧಾರವಾಡ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಸದಸ್ಯೆಯರು  ಶಂಕರ ಭಗವತ್ಪಾದರ ಸಂಸ್ಕೃತ ಕೃತಿಗಳನ್ನು ರಾಗ-ತಾಳಬದ್ಧವಾಗಿ ಅಭ್ಯಾಸ ಮಾಡಿ ವಿವಿಧ ವೇದಿಕೆಗಳಲ್ಲಿ, ಆಕಾಶವಾಣಿಯಲ್ಲಿಯೂ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಮಂಡಳಿಯ ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ  ಜಯಶ್ರೀ ಕರಗುಂದರಿ ಸ್ವಾಗತಿಸಿದರು. ಮೀನಾಕ್ಷಿ ಪ್ರಾರ್ಥನೆ ಸಲ್ಲಿಸಿದರು. ಪ್ರತಿಭಾ ವಂದಿಸಿದರು. ಸುವರ್ಣ ಕಾರ್ಯಕ್ರಮ ನಿರೂಪಿಸಿದರು.