ಉತ್ತರ ಕರ್ನಾಟಕದ ರಕ್ತ ಚರಿತ್ರೆ ಹೇಳುವ 'ಗ್ಯಾಂಗ್ಸ್ ಆಫ್ ಯುಕೆ'
ಲೋಕದರ್ಶನ ವರದಿ
ಏಪ್ರಿಲ್ 10ರಂದು ರವಿ ಶ್ರೀವತ್ಸ ನಿರ್ಮಾಣ, ನಿರ್ದೇಶನದ ಸಿನಿಮಾ ತೆರೆಗೆ
ರವಿ ಶ್ರೀವತ್ಸ ನಿರ್ದೇಶನದ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಏಪ್ರಿಲ್ 10ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರ ಕೆಲಸಗಳು ಶುರುವಾಗಿವೆ. ಚಿತ್ರವನ್ನು ಚಂದನ್ ಸುರೇಶ್ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ನ್ನು ಹಿರಿಯ ವಿತರಕ ಸಂಜೀವ ಮೂರ್ತಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಚಂದನ್ ಸುರೇಶ್, ನಿರ್ಮಾಪಕರಾದ ಸೂರ್ಪ ಬಾಬು, ಕೆ. ಮಂಜು ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಶ್ರೀವತ್ಸ, ‘ಕಥೆಯಲ್ಲಿ ಇರುವ ಪಾತ್ರಧಾರಿಗಳು ಇವತ್ತಿಗೂ ಜೀವಂತವಾಗಿದ್ದಾರೆ ಮತ್ತು ವ್ಯವಸ್ಥೆಯ ವಿರುದ್ಧ ರೊಚ್ಚಿಗೆದಿದ್ದಾರೆ. ಸಮಾಜ, ವ್ಯವಸ್ಥೆ ಮತ್ತು ಆರಕ್ಷಕರು ಇವರ್ಯಾರ ಸಹಾಯವಿಲ್ಲದೆ ರಕ್ತಕಣ್ಣೀರು ಹಾಕಿಕೊಂಡು ಸುಮ್ಮನಿದ್ದಾರೆ. ನಮ್ಮನ್ನು ಹೊರಕ್ಕೆ ತರಬೇಡಿ, ನೀವೇನಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಹೇಗೆ ಇದರಲ್ಲಿ ಸಿಕ್ಕಿಕೊಂಡೆ ಎಂದು ಪ್ರಶ್ನಿಸಿದರೆ, ಆ ತಾಯಿ ತನ್ನ ಮಕ್ಕಳನ್ನು ತೋರಿಸಿ ಸುಮ್ಮನಾಗುತ್ತಾಳೆ. ಆ ಮಕ್ಕಳಿಗಾಗಿ ಬದುಕುತ್ತಿದ್ದೇನೆ ಎನ್ನುತ್ತಾಳೆ. ಅವಳಿಗಿಂತ ಇನ್ನೊಬ್ಬ ಹಿರಿಯ ಹೆಣ್ಣು ಇದ್ದಾಳೆ ಮತ್ತು ಅವಳು ತನ್ನ ಕಥೆಯನ್ನು ಈ ಕಥೆಯ ಮೂಲಕ ಹೇಳುತ್ತಾಳೆ’ ಎಂದರು.
ನಂತರ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಎಂ.ಎಸ್. ರಮೇಶ್ ಮಾತನಾಡಿ, ‘ಬಹಳಷ್ಟು ಜನ ಈ ಮೊದಲು ಬಿಟ್ಟ ಟ್ರೇಲರ್ ನೋಡಿ, ಬಹಳ ಕ್ರೌರ್ಯವಿದೆ ಎಂದರು. ಟ್ರೇಲರ್ ನೋಡಿದವರೆಲ್ಲರೂ ನನಗೆ ಮತ್ತು ರವಿಗೆ ಬೈದಿದ್ದಾರೆ. ಎರಡು ನಿಮಿಷದ ಟ್ರೇಲರ್ ನೋಡಿ, ಎರಡು ಗಂಟೆಯ ಚಿತ್ರದ ಬಗ್ಗೆ ಮಾತನಾಡುವುದು ಕಷ್ಟ. ಜನ ಪ್ರತಿಕ್ರಿಯಿಸಲಿ ಎಂದೇ ನಾವು ಆ ಟ್ರೇಲರ್ ಬಿಟ್ಟಿದ್ದು. ಶಾಂತಿ ಬೇಕು ಎಂದರೆ ಕ್ರಾಂತಿ ಆಗಲೇಬೇಕು ಎನ್ನುವ ಮಾತಿದೆ. ಆ ತಿರುಳು ಈ ಕಥೆಯಲ್ಲಿದೆ. ಎಲ್ಲರೂ ಶಾಂತರಾಗಿರುತ್ತೀವಿ. ಒಂದು ಕ್ಷಣದ ಕೋಪ ಒಂದು ಘಟನೆಗೆ ಕಾರಣವಾದರೆ, ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಚಿತ್ರ ಹೇಳುತ್ತದೆ. ಚಿತ್ರವನ್ನು ನೋಡಿದವರು, ಈಗೇನು ಬಯ್ಯುತ್ತಿದ್ದಾರೆ ಅವರು ಇದರಲ್ಲಿ ಅರ್ಥವಿದೆ ಎಂದು ಹೇಳುತ್ತಾರೆ. ನಾವು ಯಾವುದೋ ನೆಗೆಟಿವ್ ಕಾಮೆಂಟ್‌ಗಳಿಗೆ ಹೆದರುವುದಿಲ್ಲ. ಏಕೆಂದರೆ, ನಮ್ಮ ಸಿನಿಮಾದ ಮೇಲೆ ನಮಗೆ ನಂಬಿಕೆ ಇದೆ. ಆ ನಂಬಿಕೆಗೆ ಬೆಂಬಲ ಕೊಟ್ಟವರು ಸಂಜೀವ ಮೂರ್ತಿ, ಚಂದನ್ ಸುರೇಶ್, ಸೂರ್ಪ ಬಾಬು ಮುಂತಾದವರು. ಅವರೆಲ್ಲರೂ ಕ್ರೌರ್ಯ ಜಾಸ್ತಿ ಇದೆ ಎನ್ನುತ್ತಲೇ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಆತ್ಮವಿಶ್ವಾಸ ತುಂಬಿದರು. ಸಂಜೀವ ಮೂರ್ತಿ ಅವರಂತೂ ಚಿತ್ರ ನೋಡಿ, 20 ವರ್ಷಗಳ ನಂತರ ಕೆ.ವಿ. ರಾಜು ನೆನಪಾದರು ಎಂದರು. ನಾನು ಮತ್ತು ರವಿ ಇಬ್ಬರೂ ಕೆ.ವಿ. ರಾಜು ಅವರ ಶಿಷ್ಯರಾಗಿದ್ದಕ್ಕೂ ಸಾರ್ಥಕ ಎಂದನಿಸಿತು. ಚಿತ್ರದ ಪ್ರಚಾರ ಕೆಲಸ ಶುರುವಾಗಿದ್ದು, ಒಂದೊಂದು ಫೋಟೋ ಮತ್ತು ಕ್ಲಿಪ್ ಹೊರಬರುತ್ತಿದ್ದಂತೆ ನೆಗೆಟಿವ್ ಆದ ಪ್ರತಿಕ್ರಿಯೆಗಳು ಈಗ ಪಾಸಿಟಿವ್ ಆಗುತ್ತಿದೆ. ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ, ಇದರ ಮುಂದುವರೆದ ಭಾಗ ಮಾಡಬೇಕೆಂಬ ನಮ್ಮ ಆಸೆ ಮತ್ತೊಮ್ಮೆ ಚಿಗುರಿದೆ. ಈಗಾಗಲೇ ಶೇ. 30ರಷ್ಟು ಮುಂದಿನ ಭಾಗದ ಚಿತ್ರೀಕರಣವಾಗಿದೆ. ಎರಡನೆಯ ಭಾಗ ಮಾಡುವುದಕ್ಕೆ ಯೋಜನೆ ರೂಪುಗೊಳ್ಳುತ್ತಿದೆ. ಪ್ರತಿಕ್ರಿಯೆಗಳಿಂದ ಧೈರ್ಯ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಮುಂದಿನ ಭಾಗ ಸಹ ಬರಲಿದೆ. ಈ ಸಿನಿಮಾಗೆ ಎಲ್ಲರಿಂದ ಒಳ್ಳೆಯ ಬೆಂಬಲ ಸಿಗಲಿದೆ ಎಂಬ ನಂಬಿಕೆ ಇದೆ’ ಎಂದರು.
‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರವನ್ನು ರವಿ ಶ್ರೀವತ್ಸ, ಡೆಡ್ಲಿ ಆರ್ಟ್ಸ್ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ‘ಒರಟ’ ಪ್ರಶಾಂತ್, ಮುನಿ, ಪದ್ಮಾವಾಸಂತಿ, ಸೋನು ಉಪಾಧ್ಯ, ಪ್ರವೀಣ್, ‘ಉಗ್ರಂ’ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್, ಅಮೋಘ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆರ್ ಗಿರಿ ಛಾಯಾಗ್ರಹಣವಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 