ಮಾನಸಿಕ ಆರೋಗ್ಯಕ್ಕೆ ’ಡಿಜಿಟಲ್ ವಿರಾಮ’ ಅಗತ್ಯ - ಶಿವಾನಂದ ನಾಯ್ಕ
'Digital break' is necessary for mental health - Shivananda Nayak
ಕನಕಗಿರಿ 18: ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿವೆ. ಇತರರ ಜೀವನದ ವೈಭವದ ಕ್ಷಣಗಳನ್ನು ನೋಡಿ ನಮ್ಮ ಜೀವನವನ್ನು ಅವರೊಂದಿಗೆ ಹೋಲಿಸಿಕೊಳ್ಳುವುದು ಅನಗತ್ಯ ಆತಂಕ ಮತ್ತು ಕೀಳರಿಮೆಗೆ ಕಾರಣವಾಗುತ್ತಿದೆ. ಇದನ್ನು ಮನೋವಿಜ್ಞಾನದಲ್ಲಿ ’ಫೋಮೋ’ ಎಂದು ಕರೆಯಲಾಗುತ್ತದೆ. ಇಂದಿನ ಯುವ ಜನಾಂಗದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಲು ಕೂಡ ಕಾರಣವಾಗಿದೆ. ಆದ್ದರಿಂದ, ಡಿಜಿಟಲ್ ಜಗತ್ತಿನಿಂದ ಆಗಾಗ ವಿರಾಮ ಪಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ
ಎಂದು ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಆಪ್ತ ಸಮಾಲೋಚಕರಾದ (ಐಸಿಟಿಸಿ ವಿಭಾಗ) ಶಿವಾನಂದ ನಾಯ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣಾ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ತಾಂತ್ರಿಕ ಪ್ರಗತಿ ಮತ್ತು ಬದಲಾದ ಜೀವನಶೈಲಿಯಿಂದಾಗಿ ಮನುಷ್ಯ ದೈಹಿಕವಾಗಿ ಸುಧಾರಿಸಿದ್ದರೂ, ಮಾನಸಿಕವಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾನೆ. ಮಾನಸಿಕ ಆರೋಗ್ಯವು ನಮ್ಮ ಭಾವನೆಗಳು, ಆಲೋಚನೆಗಳು ಮತ್ತು ವರ್ತನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
ವಿದ್ಯಾರ್ಥಿ ದೆಸೆಯಲ್ಲಿ ಶಾರೀರಿಕ ಮತ್ತು ಭಾವನಾತ್ಮಕ ಬದಲಾವಣೆಗಳು ವೇಗವಾಗಿ ನಡೆಯುತ್ತವೆ. ಈ ಸಮಯದಲ್ಲಿ ಉಂಟಾಗುವ ಗೊಂದಲಗಳು, ಆಕರ್ಷಣೆಗಳು ಮತ್ತು ಹಠಾತ್ ಕೋಪವನ್ನು ನಿಯಂತ್ರಿಸಲು ಮಾನಸಿಕ ಸ್ಥಿರತೆ ಬೇಕು. ಮಾನಸಿಕವಾಗಿ ಕುಗ್ಗಿದ ವಿದ್ಯಾರ್ಥಿಗಳು ತಾತ್ಕಾಲಿಕ ನೆಮ್ಮದಿಗಾಗಿ ಕೆಟ್ಟ ಹವ್ಯಾಸಗಳಿಗೆ (ಧೂಮಪಾನ, ಮಾದಕವಸ್ತು ಅಥವಾ ಅತಿಯಾದ ಮೊಬೈಲ್ ಬಳಕೆ) ಬಲಿಯಾಗುವ ಸಾಧ್ಯತೆ ಇರುತ್ತದೆ. ಮಾನಸಿಕ ಆರೋಗ್ಯ ಜಾಗೃತಿಯು ಇಂತಹ ಅಪಾಯಗಳಿಂದ ಅವರನ್ನು ರಕ್ಷಿಸುತ್ತದೆ. ಆರೋಗ್ಯ ಎಂದರೆ ಕೇವಲ ದೈಹಿಕ ಸುಸ್ಥಿತಿಯಲ್ಲ, ಬದಲಿಗೆ ಮಾನಸಿಕ ನೆಮ್ಮದಿಯೂ ಹೌದು ಎಂದು ತಿಳಿಸಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆಪ್ತ ಸಮಾಲೋಚಕರಾದ ಅಕ್ಬರ್ ಸಾಬ್ ಅವರು ಮಾತನಾಡಿ, ಮಾನಸಿಕವಾಗಿ ಆರೋಗ್ಯವಾಗಿರುವ ವ್ಯಕ್ತಿಯು ತನ್ನ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಬಲ್ಲನು, ಜೀವನದ ಸಾಮಾನ್ಯ ಒತ್ತಡಗಳನ್ನು ಸಮರ್ಥವಾಗಿ ಎದುರಿಸಬಲ್ಲನು ಮತ್ತು ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಬಲ್ಲ. ಮಾನಸಿಕ ಆರೋಗ್ಯ ಹದಗೆಟ್ಟರೆ ಅದು ಖಿನ್ನತೆ, ಆತಂಕ ಮತ್ತು ದೈಹಿಕ ಕಾಯಿಲೆಗಳಿಗೂ ದಾರಿಯಾಗುತ್ತದೆ. ನಮ್ಮ ಸಮಾಜದಲ್ಲಿ ಮಾನಸಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದು ಇಂದಿಗೂ ಒಂದು ಅನಿಷ್ಟ ಎಂದು ಪರಿಗಣಿಸಲ್ಪಟ್ಟಿದೆ. ಆದರೆ, ದೈಹಿಕ ಕಾಯಿಲೆಗೆ ವೈದ್ಯರ ಬಳಿ ಹೋಗುವಂತೆ, ಮನಸ್ಸಿನ ತಳಮಳಗಳಿಗೆ ಮನೋವೈದ್ಯರ ಅಥವಾ ಆಪ್ತ ಸಮಾಲೋಚಕರ ಸಹಾಯ ಪಡೆಯುವುದು ತಪ್ಪಲ್ಲ. ಖಿನ್ನತೆ ಅಥವಾ ವಿಪರೀತ ಆತಂಕ ಉಂಟಾದಾಗ ಮುಜುಗರಪಡದೆ ತಜ್ಞರ ಸಲಹೆ ಪಡೆಯುವುದು ಶೀಘ್ರ ಗುಣಮುಖರಾಗಲು ಸಹಕಾರಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಭಜರಂಗ ಬಲಿ ಅವರು ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಕ್ಕಳು ಮತ್ತು ಯುವಕರಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ಕ್ಷಣಿಕ ಸುಖಕ್ಕಾಗಿ ಅಥವಾ ನೋವಿಗಾಗಿ ತಮ್ಮ ಜೀವನವನ್ನೇ ಬಲಿ ನೀಡುತ್ತಿದ್ದಾರೆ. ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿರುವ ವಿದ್ಯಾರ್ಥಿ ದೆಸೆಯಲ್ಲಿಯೇ ಈ ಬಗ್ಗೆ ಜಾಗೃತಿ ಅಗತ್ಯ. ಈ ಹಂತದಲ್ಲಿ ಕೇವಲ ಶೈಕ್ಷಣಿಕ ಸಾಧನೆ ಮಾತ್ರವಲ್ಲದೆ, ಮಾನಸಿಕ ಹಾಗೂ ದೈಹಿಲ ಸದೃಢತೆಯ ಸಾಧನೆಯೂ ಅಷ್ಟೇ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ನಿರ್ವಹಣೆಯ ಅಗತ್ಯತೆ ಕುರಿತು ಅರಿವು ಮೂಡಿಸುವ ಸದುದ್ದೇಶದಿಂದ ಪ್ರಸ್ತುತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,
ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸಿಕೊಳ್ಳದೇ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಭಾಗವಹಿಸುವ ಮೂಲಕ ತಮ್ಮ ಸಮಗ್ರ ಬೆಳವಣಿಗೆಗೆ ಕಾರಣವಾಗಬೇಕು ಎಂದು ಕಿವಿಮಾತು ಹೇಳಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ರಕ್ಷಿತ್.ಎ, ಕನ್ನಡ ವಿಭಾಗದ ಮುಖ್ಯಸ್ಥರಾದ ಲಲಿತಾ.ಎನ್.ಕೆ, ಅತಿಥಿ ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷರಾದ ಡಾ. ಗೋಪಾಲರೆಡ್ಡಿ ಮಾದಿನಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಘಟಕದ ಸಂಯೋಜಕರು ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸರ್ವಮಂಗಳಮ್ಮ.ಟಿ.ಆರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಬಸವರಾಜ್ ಹಾಗೂ ಕೃಷ್ಣಾ ಸ್ವಾಗತಿಸಿದರು, ನಾಗರಾಜ್ ಗಡ್ಡಿ ವಂದಿಸಿದರು ಮತ್ತು ಸಾನಿಯಾ ನಿರೂಪಿಸಿದರು. ಇತಿಹಾಸ ಉಪನ್ಯಾಸಕರಾದ ಬೋರಯ್ಯ ಹಾಗೂ ಶರಣಪ್ಪ ಸಾಸಲಮರಿ, ಪತ್ರಿಕೋದ್ಯಮ ಉಪನ್ಯಾಸಕರಾದ ವಿಜಯ್ ಸರೋದೆ, ಇಂಗ್ಲೀಷ್ ಉಪನ್ಯಾಸಕರಾದ ಬಾಲಪ್ಪ ಕುರಿ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 