ಹೊಸಬರ ಕವಿತೆಗಳಿಗೆ ವೇದಿಕೆಯಾದ ಕಾವ್ಯಮನೆ

- ನಾಗೇಶ್ ಜೆ. ನಾಯಕ 

ಯುವ ಜನತೆಯ ಸಾಹಿತ್ಯಾಶಕ್ತಿಗೆ ವೇದಿಕೆ ಒದಗಿಸಿ ವೈಚಾರಿಕತೆಯನ್ನು ಮೂಡಿಸುತ್ತ, ಕನ್ನಡ ಕಟ್ಟುವ, ಉಳಿಸುವ, ಬೆಳೆಸುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಪುಸ್ತಕ ಮುದ್ರಣದ ಜೊತೆಗೆ, ಕಾವ್ಯ ಕಮ್ಮಟ, ರಾಜ್ಯಮಟ್ಟದ ಕವಿಗೋಷ್ಠಿ ಮುಂತಾದ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಬಳ್ಳಾರಿಯ ಕಾವ್ಯಮನೆ ಪ್ರಕಾಶನವು 'ಕಾವ್ಯ ಕದಳಿ' ಎಂಬ ಆಯ್ದ ಕವಿಗಳ ಸಂಪಾದಿತ ಕವನ ಸಂಕಲನ ಪ್ರಕಟಿಸಿದೆ. ನಾಡಿನ ಬೇರೆ ಬೇರೆ ಭಾಗಗಳಿಂದ ಆಯ್ದ 35  ಪ್ರತಿಭಾವಂತ, ಯುವ ಬರಹಗಾರರ 55 ಕವಿತೆಗಳು ಸಂಕಲನದಲ್ಲಿವೆ. ವಸ್ತುವೈವಿಧ್ಯತೆ, ದಟ್ಟ ಅನುಭವಗಳ ಸಾಂದ್ರೀಕರಣ, ಭಾಷೆಯ ಬಳಕೆ, ಪ್ರತಿಮೆ-ರೂಪಕಗಳನ್ನು ದುಡಿಸಿಕೊಳ್ಳುವಿಕೆ ಎಲ್ಲದರಿಂದಲೂ ಸಂಕಲನ ವಿಭಿನ್ನತೆಯನ್ನು ಕಾಯ್ದುಕೊಂಡಿದೆ. ಸಮಕಾಲೀನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕವಿತೆಗಳು ವಾಸ್ತವತೆಗೆ ಮುಖಾಮುಖಿಯಾಗುತ್ತವೆ. ಆಲೋಚನೆಗೆ ತೊಡಗಿಸಿ, ಹೊಸ ಹೊಳಹನ್ನು ಬಿಟ್ಟುಕೊಡುತ್ತವೆ.

ಸಂಕಲನಕ್ಕೆ ಮುನ್ನುಡಿ ಮಾತುಗಳನ್ನಾಡಿದ ವಿಮರ್ಶಕ ಸುರೇಶ ನಾಗಲಮಡಿಕೆ "ವರ್ತಮಾನದ ಎಲ್ಲ ಸಂಗತಿಗಳೂ ಕೆಲವೊಮ್ಮೆ ಕವಿತೆಯಾಗಲಾರವು. ನಾವು ಕವಿತೆಗೆ ಎತ್ತಿಕೊಳ್ಳುವ ವಸ್ತು ಯಾವುದೇ ಆಗಿರಲಿ ಅದು ನಮ್ಮ ಅನುಭವಕ್ಕೆ ಮೊದಲು ದಕ್ಕಬೇಕು. ಕಾವ್ಯಮನೆಯ ಕಾವ್ಯ ಸಂಕಲನದಲ್ಲಿ ಮೂವತ್ತೈದು ವರ್ಷದ ಒಳಗಿನವರೇ ಜಾಸ್ತಿ ಇದ್ದಾರೆ. ಅಂತವರು ಕೆಲವರಾದರೂ ಮುಂದೆ ನಿಂತುಕೊಳ್ಳಬಲ್ಲರು" ಎಂಬ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ. ಜಗದ ಪ್ರತಿ ಜೀವಿಯ ಹುಟ್ಟಿಗೆ ಕಾರಣವಾದ ಹೆಣ್ಣಿನ ಸಹನೆ, ತಾಳ್ಮೆಯ ಕುರಿತು ಕವಿ ಚಾಂದ್ ಕವಿಚಂದ್ರ 'ಯಾರಿವಳು' ಎನ್ನುವ ಕವಿತೆಯಲ್ಲಿ ಬರೆಯುವ ಸಾಲುಗಳು ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ ನಡೆದರೂ ನಗುತಲೇ ಕನಸು ಹೆರುವ ಆಕೆ ಸೃಷ್ಟಿಗೆ ನಿತ್ಯ ಚಾಲನೆ ಕೊಡುತ್ತಿದ್ದಾಳೆ ಎನ್ನುತ್ತಾರೆ.

ನೂರು ಹೆತ್ತರೂ ಚೂರು ನೆನಪಿಲ್ಲದೆ

ಊರಿಲ್ಲದ ಊರಿಗೆ ಹೆಸರಾಗುತಾಳೆ

ಅಂಬರದ ಆಡಂಬರದ ಮೈಗೆ ತೊಟ್ಟು

ಹಸಿಬಾಣಂತಿಯ ಬೇನಾಮಿ ಕನಸಾಗುತ್ತಾಳೆ

ಜಗವ ಹೆತ್ತು, ತಿಪ್ಪೆಗೆ ಎಸೆದ ತಪ್ಪಿಗೆ

ಗುಟ್ಟಾಗುತಾಳೆ... ಮತ್ತೆ ಮುಟ್ಟಾಗುತಾಳೆ

ಎಲ್ಲ ಪ್ರೇಮಿಗಳು ಬರಸೆಳೆದುಕೋ ಇನ್ನೆಂದಿಗೂ ಅಗಲಿಕೆಯ ಉರಿ ಒಡಲು ಇರಿಯದಂತೆ ಎಂದು ಪರಿತಪಿಸಿದರೆ ಇಲ್ಲೊಬ್ಬ ಪ್ರೇಮಿ ತನ್ನ ನಲ್ಲೆಗೆ ಹತ್ತಿರಕ್ಕೆ ಬಿಟ್ಟುಕೊಳ್ಳಬೇಡ, ಮೆಲ್ಲಗೆ ನೀ ಹಿಂದಿಂದೆ ಜಾರಿಕೊ ಎನ್ನುತ್ತಾನೆ. ಹೀಗ್ಯಾಕೆ ಎನ್ನುವಾಗಲೇ ಅವನು ಬರೆದ ಕವಿತೆಯ ಸಾಲುಗಳ ಗೂಢಾರ್ಥ ಹೊಳೆದು

ಕಿರುನಗೆ ಮೂಡಿಸುತ್ತದೆ.

ತೀರ ಹತ್ತಿರಕ್ಕೆ ಬಿಟ್ಟುಕೊಳ್ಳಲೇಬೇಡ

ನಾ ಬಂದ ಹಾಗೆ ನೀ ನಸುನಗುತ್ತಲೇ

ಮೆಲ್ಲಗೆ ನೀ ಹಿಂದಿಂದೆ ಜಾರಿಕೋ

ಆಗಲೆ ಇನ್ನಷ್ಟು ಬೇಡಿಕೆಗಳು ಹೆಚ್ಚುತ್ತವೆ ನನ್ನೊಳಗೆ

ಜೊತೆಗೆ ನೀ ಬೇಕೆನ್ನುವ ಹುಚ್ಚು ಸಹ

(ಕಣ್ಣಳತೆಯ ದೂರದಿ ನಿಂತು-ಕಡಲ ಬೇಟೆಗಾರ)

ಎರಡು ವಿಭಿನ್ನ, ವಿಷಾದ ಮತ್ತು ಖುಷಿಯ ಕಾಲಘಟ್ಟಗಳನ್ನು ಕವಿತೆಯಲ್ಲಿ ಕಾಣಿಸುವ ಕಾವ್ಯ ಎಸ್. ಕೋಳಿವಾಡ ಕ್ರೂರಿ ಸಮಾಜದ ರಣ ಹಸಿವಿಗೆ ಬಲಿಯಾದ, ಬಡತನವೆಂಬ ಬೆಂಕಿಯೊಳಗೆ ಕರಗಿ ಹೋಗುತ್ತಿರುವ ಬಾಲೆಯ ದಾರುಣ ಸ್ಥಿತಿಯನ್ನು ಚಿತ್ರಿಸಿದ್ದಾರೆ. ತುತ್ತಿನ ಚೀಲಕ್ಕೆ ದೇಹವನ್ನೇ ಮಾರಿ, ಬಾಲ್ಯದ ಕನಸುಗಳ ಕತ್ತು ಹಿಚುಕಿ ವಿಲವಿಲಗೊಳ್ಳುವ ಪರಿ ಅಂತಃಕರಣ ಕಲಕುತ್ತದೆ. ಬುದ್ಧನ ನಗುವಿನಿಂದಲೇ ಪ್ರಾರಂಭವಾದ ಕವಿತೆಯ ಸಾಲುಗಳು ಕೊನೆಗೆ ಬುದ್ಧನ ನಗುವಿಂದಲೇ ಸಮಾಪ್ತಿಯಾಗುವ ವಿಪಯರ್ಾಸ ಕಾಡುತ್ತದೆ.

ಅಮ್ಮನ ಬಳಿ ಕೇಳುತ್ತಾಳೆ ನನಗೇಕೆ ಹೀಗೆ?

ಅಮ್ಮ ನಿರುತ್ತರಿ

ಬಹುಷಃ ಅಮ್ಮನಷ್ಟೇ ಅಲ್ಲ

ಆತ್ಮಸಾಕ್ಷಿ ಉಳ್ಳ ಯಾರೂ...

ಏನಾದರೂ ಬುದ್ಧ ಮಾತ್ರ ನಗುತ್ತಲೇ ಇದ್ದಾನೆ

(ನಿರುತ್ತರಿ)

ಕೃಷಿಯನ್ನೇ ಅವಲಂಬಿಸಿದ ಅನ್ನದಾತನ ವಿಲವಿಲಗೊಳ್ಳುವ ಹೃದಯವಿದ್ರಾವಕ ಸ್ಥಿತಿ ಹಸನ್ಮುಖಿ ಬಡಗನ್ನೂರು ಅವರ 'ಬೆಂಕಿಯ ಹೆಣವನ್ನು ಹೇಗೆ ಸುಡಲಿ?' ಕವಿತೆಯಲ್ಲಿ ಮಾಮರ್ಿಕವಾಗಿ ಚಿತ್ರಿತವಾಗಿದೆ. ಆಧುನಿಕ ಆವಿಷ್ಕಾರಗಳೆಲ್ಲ ರೈತನ ಬೆನ್ನೆಲುಬನ್ನೇ ಬಗೆದು ಕೇಕೆ ಹಾಕುತ್ತಿರುವಂಥ ಸನ್ನಿವೇಶ. ಕೃಷಿ ಭೂಮಿಗಳನ್ನೆಲ್ಲ ಕೈಗಾರಿಕೆ, ನಿವೇಶನಗಳಿಗೆ ಮಾರಿಕೊಳ್ಳುತ್ತಿರುವ ಧೂರ್ತ ರಾಜಕಾರಣಿಗಳು. ಸೃಷ್ಟಿಯ ನೈಜತೆಯನ್ನೇ ತಿಂದು ತೇಗಿ ಕೃತಕತೆಯ ಸೋಗಿಗೆ ಮಾರುಹೋದ ಮಂದಿಗಾಗಿ ಮರಗುವ ಕವಿತೆ, ವಿಷವುಂಡ, ನೇಣು ಹಾಕಿಕೊಂಡ ರೈತರ ಸಾವಿನ ಒಡಲಾಳವನ್ನೆಲ್ಲ ವ್ಯಕ್ತಪಡಿಸುತ್ತದೆ.

ಮೂಗಿನಲ್ಲಿ ಹತ್ತಿಯುಂಡೆಯಾಗಲು

ಬಿಳಿ ಮೋಡಗಳೆಲ್ಲ ಕಾಯುವಾಗ

ನನ್ನ ನೋವುಗಳಿಗೆ ಚಿತೆಕಟ್ಟಲು

ಸೌದೆ ಹುಡುಕಿ ಸೋತ ಕವಿ

ಕವನಗಳನ್ನೇ ಜೋಡಿಸಿದ್ದಾನೆ!

ಹೆತ್ತವರ ಬೆವರಿನ ದುಡಿಮೆಯಲ್ಲಿಯೇ ಶೋಕಿ ಮಾಡಿದ ಮಕ್ಕಳು ರೆಕ್ಕೆ ಬಲಿತು ದೂರದೇಶಕ್ಕೆ ಹಾರಿ ಹೋದ ನಂತರ ಅವರ ಅಂತ್ಯಸಂಸ್ಕಾರಕ್ಕೂ ಆಗದಷ್ಟು ಬಿಜಿಯಾಗಿ ಹೋಗುತ್ತಾರೆ. ಆಗ ಹೆತ್ತವರು ಅನುಭವಿಸುವ ಆಂತರಿಕ ಯಾತನೆಯನ್ನು 'ಪಾಡು' ಎನ್ನುವ ಪದ್ಯದಲ್ಲಿ ಕವಿ ಅವಿಜ್ಞಾನಿ ಹಿಡಿದಿಡುತ್ತಾರೆ. ಬೆವರಿನ ಫಲ ಅರಿಯದ ಬೇಜವಾಬ್ದಾರಿ ಮಕ್ಕಳು ಬೇಕೆ? ಎನ್ನುವ ಪ್ರಶ್ನೆ ಕಣ್ಣ ಮುಂದೆ ಹಾದು ಹೋಗುತ್ತದೆ.

ಜೋಡಿ ಚಪ್ಪಲಿ ಖರೀದಿಸಲು ಅಪ್ಪನ

ಬೆವರುಗಳೆಷ್ಟು ಜತೆಯಾಗಿದೆಯೆಂದು ಗೊತ್ತಾಗಲಿಲ್ಲ

ಕೊನೆ ಘಳಿಗೆಯಲ್ಲಿ ಕೊಳ್ಳಿ ಇಡಲೂ

ಜನರ ನೇಮಕ ಮಾಡುವ ಸಂಪ್ರದಾಯ ಚಾಲ್ತಿಯಲ್ಲಿದೆ

ಮಾನವೀಯತೆಯ ಬೆಳಕು ಕ್ಷೀಣಿಸುತ್ತಿರುವುದರ ಕುರಿತು ಸೋಮು ಕುದುರಿಹಾಳ ತಮ್ಮ 'ಕತ್ತಲು ಮತ್ತು ಬೆಳಕು' ಕವಿತೆಯಲ್ಲಿ ಪ್ರಸ್ತಾಪಿಸುತ್ತಾರೆ. ದ್ವೇಷದ ಬೆಂಕಿ ಮನಸುಗಳ ನಡುವೆ ಹೊತ್ತಿ ಉರಿಯುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕವಿ ಬೆಳಕು ಹುಡುಕಿ ಹೊರಟಿದ್ದಾನೆ. ಅನ್ಯಾಯದ ಮುಂದೆ ನ್ಯಾಯವೂ ತಲೆತಗ್ಗಿಸುವಂತೆ ಕತ್ತಲೆಗೆ ಹೆದರಿ ಬೆಳಕು ಹೆಜ್ಜೆಯಿಡುತ್ತಿದೆ ಎನ್ನುತ್ತಾರೆ ಕವಿ. 

ಕತ್ತಲೆಯಲ್ಲಿ ಬೆಳಕು

ದಾರಿ ತೋರಬೇಕಾದ ಬೆಳಕು

ಕತ್ತಲೆಗೆ ಹೆದರಿ ಹೆಜ್ಜೆಯಿಡುತಿದೆ

ಒಬ್ಬರಿಗೊಬ್ಬರು ಕಾಣುತ್ತಿಲ್ಲ

ಕಣ್ಣೊಳಗಿನ ದೀಪ ಆರಿ ಹೋಗಿದೆ

ಅಸ್ಪಶೃತೆ ಎನ್ನುವುದು ಮನುಕುಲಕ್ಕೆ ಅಂಟಿದ ಶಾಪ. ದೂಷಿತ ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾಗಿ ಯಾವುದೇ ಆಕ್ರೋಶವಿಲ್ಲದೆ ತಣ್ಣಗಿನ ಧ್ವನಿಯಲ್ಲೇ ಇಡೀ ಸಮಾಜದ ಭಾವನೆಯನ್ನೇ ಬದಲಿಸುತ್ತೇನೆಂಬ ಅದಮ್ಯ ಹಂಬಲದ ಕವಿ ಬಿದಲೋಟಿ ರಂಗನಾಥ 'ನನ್ನ ಧಿಕ್ಕರಿಸಿದ ನಿಮಗೆ' ಕವಿತೆಯಲ್ಲಿ ಹೀಗೆ ಬರೆಯುತ್ತಾರೆ.

ಅಂದು ನೀವು

ನನ್ನ ಮುಟ್ಟಿಸಿಕೊಳ್ಳಲಿಲ್ಲ ಎಂಬ

ಬೇಸರವಿರಲಿಲ್ಲ

ಮುಂದೆ ನೀವೇ ತಬ್ಬಿಕೊಳ್ಳುತ್ತೀರ 

ಎಂಬುದರ ಅರಿವಿತ್ತು ನನಗೆ

ಸಂಕಲನದ ಒಂದಷ್ಟು ಕವಿತೆಗಳು ಸದಾ ನೆನಪಿನಲ್ಲಿ ಉಳಿಯುತ್ತವೆ. ಅಕ್ಕನ ಪ್ರೇಮದ ಪರಿಯನ್ನು ಅರಹುವ ಸ್ನೇಹಲತಾ ಗೌನಳ್ಳಿ, ಊರದಾರಿಯ ತಿರುವಿನಲ್ಲೇ ಹೆಜ್ಜೆ ತಿರುಗುವಾಗ ದಲಿತ ಗೆಳೆಯನ ನೆನಪಾಯಿತು ಎನ್ನುವ ಯಶ ಬೇಂಗಿಲ (ಚಪ್ಪಲಿಗಳು), ಕ್ಷಮಿಸಿಬಿಡಿ ನನ್ನನು ಜಾತಿಯ ಮಜಲಿನಲಿ ನಾನು ಒಂದು ಇಟ್ಟಿಯಾಗಿದ್ದಕ್ಕೆ ಎನ್ನುವ ಶಾಂತೇಶ ಕೋಡ್ಲೆ(ಜಾತಿಯ ಹೆಸರಿನಲ್ಲಿ), ದೇವರು ನನ್ನೊಳಗಿರುವನು ನನ್ನೊಳಗೆ ಮಾತ್ರವಲ್ಲ, ನಿಮ್ಮೊಳಗೂ ಎಂದು ಬರೆಯುವ ಹಕೀಮ ಪದಡ್ಕ(ನನ್ನ ಹೃದಯ), ನಾನು ಪ್ರೀತಿಸಿದ್ದಕ್ಕೆ ಸಾಕ್ಷಿ ಕೇಳಿದ್ದರಲ್ಲಿ ನಿನ್ನ ತಪ್ಪೇನೂ ಇಲ್ಲ ಬಿಡು ಎಂಬ ಸಾಲುಗಳನ್ನು ತೇಲಿಬಿಡುವ ಶ್ರೀದೇವಿ ಕೆರೆಮನೆ(ದೇವದಾಸಿಯ ಸ್ವಗತ) ಹೀಗೆ ಒಂದಷ್ಟು ಕವಿತೆಗಳು ಕಾಡುತ್ತವೆ. ಎಲ್ಲ ಕವಿಗಳ ಕವಿತೆಗಳನ್ನು ಒಂದು ಕಡೆ ಸೇರಿಸಿ ಓದಿನ ಹಸಿವನ್ನು ತಣಿಸಿದ ಕಾವ್ಯಮನೆ ಕೆಲಸ ಶ್ಲಾಘನೀಯವಾದುದು. ಅದಕ್ಕಾಗಿ ಕಾವ್ಯಮನೆಯ ಪ್ರಕಾಶನವನ್ನು ಅಭಿನಂದಿಸುತ್ತೇನೆ.