ಜ್ಞಾನದ ಹಸಿವಿನ ಅಮಲೇರಿಸುವ ಮಧುಬಟ್ಟಲು



ಬದುಕಿನ ದೀವಿಗೆ ಇಂದೇಕೋ ಕತ್ತಲಿನಲ್ಲಿ ಕುಳಿತು ಬಿಕ್ಕುತ್ತಿದೆ

ಲಾಂದ್ರವೇ ಕುರುಡಾದ ಮೇಲೆ ಬಾಳು ಮುರುಟಿದಂತಲ್ಲವೆ ಸಾಕಿ

ಬದುಕಿಗೆ ಅಭದ್ರತೆ ಅದೆಷ್ಟು ಕಾಡುತ್ತಿದೆ, ಬೆಳಕಾಗಬೇಕಾದವರೇ ಕತ್ತಲಲ್ಲಿ ಮುಳುಗಿದ ಮೇಲೆ ಹಳಿ ತಪ್ಪಿದ ಬದುಕಿಗೆ ದಿಕ್ಕು ತೋರಿಸುವವರಾರು? ಎಂಬ ಪ್ರಶ್ನೆ ಎತ್ತುತ್ತಲೇ ಆತಂಕದ ಸಂದರ್ಭವನ್ನು ಪ್ರತಿಬಿಂಬಿಸುವ ಗಜಲ್ನ ಈ ಶೇರ್ ಕಾಡುತ್ತದೆ. ತುಮಕೂರಿನ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ದಜರ್ೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮೀಕಾಂತ ಎಲ್. ವಿ. 'ಮಧುಬಟ್ಟಲು' ಎಂಬ ಗಜಲ್ ಸಂಕಲನ ಪ್ರಕಟಿಸಿದ್ದಾರೆ. ಈಗಾಗಲೇ ಕೆಲವು ಪುಸ್ತಕಗಳನ್ನು ಹೊರತಂದಿರುವ ಅವರು ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರನಾಗಿಯೂ ಕೆಲಸ ಮಾಡುತ್ತಿದ್ದಾರೆ. "ಸಾಧನೆಯ ಹಸಿವಿದ್ದವನು ಮಾತ್ರ ಏನನ್ನಾದರೂ ಸಾಧಿಸಬಲ್ಲ ಎಂಬ ಮಾತಿನ ಬೆನ್ನು ಹತ್ತಿ ಹೊರಟ ಲಕ್ಷ್ಮೀಕಾಂತ ತಮ್ಮ ಮೊದಲ ಗಜಲ್ ಸಂಕಲನದಲ್ಲಿಯೇ ಸಾಕಷ್ಟು ನಿರೀಕ್ಷೆ ಹುಟ್ಟಿಸುತ್ತಾರೆ. ಗಜಲ್ ಎಂದರೇನೇ 'ಹೆಂಗಸರೊಡನೆ ಸಂಭಾಷಿಸುವುದು' 'ಪ್ರೇಮ-ಮೋಹಗಳ ವಿದ್ಯಮಾನ' ಎನ್ನುವ ಅರ್ಥಕ್ಕೆ ಪುರಾವೆಯಾಗಿಯೇ ಸಂಕಲನದಲ್ಲಿನ ಸಾಕಷ್ಟು ಗಜಲ್ಗಳು ಒಲವು, ಮೋಹ, ವಿರಹ, ಪ್ರೀತಿ ವಿಫಲತೆ, ಹೆಣ್ಣಿನ ಸೌಂದರ್ಯದ ವರ್ಣನೆ ಕುರಿತಾಗಿಯೇ ಗಮನ ಸೆಳೆಯುತ್ತವೆ. ಅದರಾಚೆಗೂ ಒಂದಷ್ಟು ಗಜಲ್ಗಳು ಪ್ರಸ್ತುತ ವಿದ್ಯಮಾನದ ಜ್ವಲಂತ ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತವೆ.

ತುಂಬ ಸರಳವಾಗಿ, ಸಾಮಾನ್ಯ ಓದುಗನಿಗೂ ತಲುಪುವಂತೆ ಗಜಲ್ ಬರೆಯುವ ಲಕ್ಷ್ಮೀಕಾಂತ 'ಲಕ್ಷ್ಮೀಶ' ಎಂಬ ಕಾವ್ಯನಾಮದಿಂದ ಪರಿಚಿತರಾದವರು. ತತ್ರಾಣಿ ಒಳಗಿನ ಕನಸುಗಳು ಬಿಕ್ಕುತ್ತಿವೆ ಎಂಬ ಸೂಕ್ಷ್ಮತೆಯನ್ನು ದಾಖಲಿಸುವ ಅಂತಃಕರಣದ ಮನಸು ಕವಿಗಿದೆ. 60 ಗಜಲ್ಗಳ ಈ ಗುಚ್ಛಕ್ಕೆ ಮೊದಲ ಮಾತು ಆಡುವ ಗಜಲ್ ಮಾಂತ್ರಿಕ ಅಲ್ಲಾಗಿರಿರಾಜ್ ಗಜಲ್ನ್ನು ಮನಸಿನಾಳದಿಂದ ಹೆಕ್ಕಿ ತೆಗೆಯುವ ಲಕ್ಷ್ಮೀಕಾಂತ ಅವರ ಕಾವ್ಯಕಲೆ ವಿಶೇಷವಾಗಿದೆ. ಅವರಲ್ಲಿನ ಕವಿತೆಯ ರೂಪ ಅನುಭಾವದ ಹಾದಿ ತುಳಿದು ನಂತರ ಗಜಲ್ನ ಬಿಸ್ತಾರ ಹೊದ್ದು, ಬಿಸಿ ಉಸಿರ ಸುಖವಾಗಿ ಗಜಲ್ ಒಳಗಿನ ಮೊಹಬ್ಬತ್ ನೂರಾರು ಶೇರ್ ಹುಟ್ಟಲು ಕಾರಣವಾಗಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಲಕ್ಷ್ಮೀಕಾಂತನ ಗಜಲ್ ನಶೆ ಈಗ ಜೋಲಿ ಹೊಡೆಯುವ ಹಂತಕ್ಕೆ ಬಂದು ತಲುಪಿದೆ. ಕುಂತರೂ ನಿಂತರೂ ಅವರ ಧ್ಯಾನವೊಂದೇ ಗಜಲ್. ಅದರ ಪ್ರತಿಫಲವೇ ಈಗ ನಮ್ಮ ಕೈಯಲ್ಲಿರುವ 'ಮಧುಬಟ್ಟಲು' ಗಜಲ್ ಕೃತಿ ಎಂದು ಬೆನ್ತಟ್ಟಿದ್ದಾರೆ.

ಇಂದಿನ ದುರಿತ ಕಾಲದ ವಿಕ್ಷಿಪ್ತತೆಗಳು ಹಲವು ರೂಪದ ಬೆನ್ನೇರಿ ಮನುಕುಲವನ್ನೇ ಹುರಿದು ಮುಕ್ಕುತ್ತಿವೆ. ಸಾವು ಅಗ್ಗವಾಗಿರುವ ಸಂದರ್ಭವಿದು. ಬದುಕು ಈಗಲೋ, ಆಗಲೋ ನೀರ ಮೇಲಣ ಗುಳ್ಳೆಯಂತೆ ಕ್ಷಣಿಕತೆಯ ಭೀತಿ ಹುಟ್ಟಿಸಿದೆ. ಯಾವುದೇ ಆಡಂಬರ, ಐಶಾರಾಮಿ ಸವಲತ್ತುಗಳು ಏನೂ ಮಾಡಲಾಗದ ಅಸಹಾಯಕತೆಗೆ ಬಂದು ನಿಂತಿವೆ. ಪ್ರಕೃತಿಯ ವಿರೋಧವನ್ನು ಕಟ್ಟಿಕೊಳ್ಳಲಾದೀತೆ ಹೇಳಿ? ಇಂತಹ ಬದುಕೆಂಬ ಬದುಕು ಭರವಸೆಯನ್ನು ಕಳೆದುಕೊಂಡು ಬದುಕುವುದಾದರೂ ಹೇಗೆ? ಕಣ್ಣ ಮುಂದೆಯೇ ಕನಸಿನ ಸೌಧ ಕುಸಿದು ಬಿದ್ದರೆ ಆಗುವ ಆಘಾತವನ್ನು ಲಕ್ಷ್ಮೀಶನ ಗಜಲ್ ಸಾಲುಗಳು ಕಟ್ಟಿಕೊಡುತ್ತವೆ.

ಭರವಸೆಯ ಕಡಲು ಬತ್ತಿದ ಮೇಲೆ 

ಬದುಕುವುದು ಹೇಗೆ

ಶರಾಬಿನ ನಶೆಯೊಳಗೆ ಹರಿದ ಕನಸು 

ಬಿದ್ದಿದೆ ಗಾಲಿಬ್

ಕವಿಯಾದವನು ಎಲ್ಲ ಸೂಕ್ಷ್ಮ ಸಂಗತಿಗಳನ್ನು ತೆರೆದ ಕಣ್ಣಿನಿಂದ ನೋಡಬೇಕಾಗುತ್ತದೆ. ಕಿವಿಯಾಗದವನು ಕವಿಯಾಗಲಾರ ಎಂಬ ಜನಜನಿತ ಮಾತೇ ಇದೆ. ಎರಡು ಹೃದಯಗಳ ನಡುವೆ ಆಕಸ್ಮಿಕವಾಗಿ ಹೊತ್ತಿಕೊಳ್ಳುವ ಪ್ರೀತಿಯ ದೀಪ, ಒಂದಕ್ಕೊಂದು ಬಿಟ್ಟಿರದ ನಂಟು ಬೆಸೆಯುತ್ತದೆ. ಇಂತಹ ಸಂದರ್ಭದಲ್ಲಿಯೇ ಇಷ್ಟದ ಜೀವದ ಎಲ್ಲ ಬೇಕು-ಬೇಡಗಳಿಗೆ ಚಡಪಡಿಸುವ ಹೃದಯ ಇಂಬು ನೀಡುತ್ತದೆ. ಗಜಲ್ನ ಈ ಕೆಳಗಿನ ಸಾಲುಗಳು ಕಟ್ಟಿಕೊಡುವ ರೂಪಕದಿಂದ ಇಷ್ಟವಾಗುತ್ತವೆ.

ರೆಪ್ಪೆ ಜೊತೆ ಹನಿಯೊಂದು ಮಾತಾಡಿದೆ ಸಖಿ

ಹೃದಯದ ಜೊತೆ ಒಲವೊಂದು ಎಲ್ಲೋ ಮಿಡಿದಿದೆ ಸಖಿ

ಹಾಗೆಯೇ ಮುಂದುವರೆದು ಸಂಕಲನದ ಇನ್ನೊಂದು ಗಜಲ್, ಸಂಗಾತಿ ಜೊತೆಗಿದ್ದಾಗ ಪ್ರೀತಿಸುವುದಷ್ಟೇ ಅಲ್ಲ, ಆಕೆ ಇಲ್ಲವಾದಾಗಲೂ ಅಷ್ಟೇ ಜತನದಿಂದ ಪ್ರೀತಿಸುವ, ಕಾಳಜಿ ಮಾಡುವ ತೀವ್ರತೆಯ ಒಲವನ್ನು ಪ್ರತಿಧ್ವನಿಸುತ್ತದೆ. ಇಷ್ಟು ತೀವ್ರವಾಗಿ ಪ್ರೀತಿಯನ್ನು ವ್ಯಕ್ತಪಡಿಸುವ ಸಾಲುಗಳು ಕಣ್ಣಲ್ಲಿ ಸಣ್ಣಗೆ ಸುಳಿದಿರುಗುವ ಚಕ್ರತೀರ್ಥವನ್ನು ಹುಟ್ಟಿಸಿದರೂ ಅಚ್ಚರಿಯಿಲ್ಲ. ಲಕ್ಷ್ಮೀಕಾಂತ ಕಟ್ಟಿಕೊಡುವ ಇಂತಹ ಸಾಲುಗಳಲ್ಲೇ ಓದುಗರನ್ನು ಗೆಲ್ಲುತ್ತಾರೆ.

ಸುಮ್ಮನೆ ಮಲಗಿರುವಳು ಗದ್ದಲವಿರದ ಗೋರಿಯೊಳಗೆ ಸದ್ದು ಮಾಡಬೇಡಿ

ನೋವಿನ ಹಾಳೆಯಲ್ಲಿ ನಗೆಯ ಶಾಯರಿ ಬರೆದವಳವಳು ನಿದ್ದೆ ಕೆಡಿಸಬೇಡಿ

ಸಾಲು ಸಾಲು ಸೋಲುಗಳನ್ನು ಎದುರಿಸಿ ಹತಾಶರಾದವರಿಗೆ, ಬರೀ ನೋವುಗಳನ್ನೇ ಅನುಭವಿಸಿ ನಗುವನ್ನೇ ಮರೆತವರಿಗೆ ಪ್ರೇರಣಾದಾಯಕವಾದ ಸಾಲುಗಳನ್ನು ಸಂಕಲನದಲ್ಲಿ ಕಾಣಬಹುದು. ನಮಗೀಗ ಬಿದ್ದವರ ಮೇಲೆಬ್ಬಿಸುವ, ಭರವಸೆ ಕಳೆದುಕೊಂಡು ಕುಸಿದು ಕೂತವರ ತೋಳ ತಬ್ಬುವ, ಕತ್ತಲೊಳಗೆ ಕುಳಿತವರ ಬೆಳಕಿಗೆ ಕರೆದೊಯ್ಯುವ, ಅವರಲ್ಲಿ ಆತ್ಮವಿಶ್ವಾಸ ಬಿತ್ತುವವರ ಅಗತ್ಯವಿದೆ. ಅಂತಹ ಕರುಣೆ, ಅನುಕಂಪದ ಸಾಲುಗಳು ಇಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲದೆ ಮುಖವಾಡ ಧರಿಸಿರುವ ಗೋಸುಂಬೆ ವ್ಯಕ್ತಿತ್ವದವರಿಂದ ದೂರವಿರಬೇಕು ಎನ್ನುವ ಎಚ್ಚರಿಕೆಯನ್ನು ದಾಟಿಸುತ್ತವೆ.

ನೋವಿನ ಹಿಂದೆ ನಗುವೆಂದು ಅಡಗಿ 

ಕುಳಿತಿದೆ ಚಿಂತಿಸಬೇಡ

ಗೋವಿನ ಮುಖವಾಡ ಧರಿಸಿದವರ ಹತ್ತಿರಕ್ಕೆ ನೀನೆಂದೂ ಸುಳಿಯದಿರು

ಜಾತಿ, ಧರ್ಮಗಳ ದ್ವೇಷ-ಅಸೂಯೆ ಅದೆಷ್ಟೋ ಅಮಾಯಕರ ಪ್ರಾಣ ತೆಗೆದಿರುವುದು ನಮಗೆಲ್ಲ ಗೊತ್ತಿದ್ದ ಸಂಗತಿ. ಯಾವಾಗ ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟುತ್ತದೋ ಆಗಲೇ ರಕ್ತಪಾತದ ಕೊನೆ. ಯುದ್ಧದಾಹದಿಂದ ಹಪಹಪಿಸುತ್ತಿರುವ ದೇಶ-ದೇಶಗಳ ಮಧ್ಯೆ ಶಾಂತಿ ಸಂಧಾನದ ಪಾರಿವಾಳಗಳು ಹಾರಲು ಸಾಧ್ಯವೇ? ಅದಕ್ಕೆ ಕವಿ ಇಲ್ಲಿ ಹತ್ಯಾರಗಳಿಗೆ ಬಲಿಯಾದ ಬದುಕುಗಳ ಕುರಿತು ಮಾತಾಡುತ್ತಾನೆ.

ತಲ್ವಾರುಗಳ ಜಗಳದಲ್ಲಿ ಬಲಿಯಾದ 

ಬದುಕುಗಳ ಲೆಕ್ಕವಿಲ್ಲ

ಮುರುಟಿದ ಹೂವುಗಳು ನಲುಗುತ್ತಾ 

ಕನಸುಗಳ ಹುಡುಕುತ್ತಿವೆ

ಓದುಗರಿಗೆ ಅಮಲು ಏರಿಸುವ 'ಮಧುಬಟ್ಟಲು' ಇದು. ಕೇವಲ ಮದ್ಯ ಸೇವನೆಯೇ ಅಮಲಲ್ಲ. ಕಾವ್ಯ ಕುಡಿಯುವ, ಕೇಳುವ, ಆರಾಧಿಸುವ ಅಮಲು ಇದು. ಜ್ಞಾನದ ಹಸಿವಿನ ಅಮಲು ಹೆಚ್ಚಿಸುವ ಇಂತಹ ನವನವೀನ ಪ್ರತಿಮೆ-ರೂಪಕಗಳ ಮೂಲಕ ಗಜಲ್ಗಳನ್ನು ಕಟ್ಟಿಕೊಟ್ಟಿರುವ ಲಕ್ಷ್ಮೀಕಾಂತ ಇನ್ನಷ್ಟು ವಿಭಿನ್ನ ವಿಷಯಗಳ ಹೊತ್ತು ಓದುಗರಿಗೆ ಮುಖಾಮುಖಿಯಾಗಲಿ. ಅವರ ಮೊದಲ ಗಜಲ್ ಸಂಕಲನಕ್ಕೆ ಶುಭ ಕೋರುವೆ.  


ಮಧುಬಟ್ಟಲು-ಗಜಲ್ ಸಂಕಲನ

ಲೇಖಕರು- ಲಕ್ಷ್ಮೀಕಾಂತ ಎಲ್. ವಿ. 

ಪ್ರಕಾಶನ: ಸಾತ್ವಿಕ ಪ್ರಕಾಶನ ಮಧುಗಿರಿ

ವರ್ಷ-2019 ಪುಟಗಳು-80 ಬೆಲೆ-100/-

  

 

User profile picture

ನಾಗೇಶ್ ಜೆ. ನಾಯಕ