ತಣ್ಣಗಿನ ಆಕ್ರೋಶದ ಜೊತೆಗೆ ಸುಂದರ ನಾಳೆಯ ಕನಸಿನ ಕವಿತೆಗಳು


-ನಾಗೇಶ್ ಜೆ. ನಾಯಕ 

ಶಿಕ್ಷಕರು, ಸವದತ್ತಿ


ಗಂಗಾವತಿ ತಾಲೂಕಿನ ಮಲರ್ಾನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ರಮೇಶ ಬನ್ನಿಕೊಪ್ಪ ಅವರು ತಮ್ಮ ಚೊಚ್ಚಲ ಕವನ ಸಂಕಲನ 'ಹೆಜ್ಜೆ ಮೂಡದ ಹಾದಿ' ಪ್ರಕಟಿಸಿದ್ದಾರೆ. 42 ಕವಿತೆಗಳಿರುವ ಸಂಕಲನದಲ್ಲಿ ಶೋಷಿತರ ಪರವಾದ ನಿಲುವು, ಅವ್ಯವಸ್ಥೆಯ ವಿರುದ್ಧದ ಅಸಮಾಧಾನ, ಮಹಿಳಾ ಶೋಷಣೆಯ ಧ್ವನಿ, ಶಾಂತಿ-ಸಮಾನತೆಯ ಹಂಬಲ, ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ, ಬುದ್ಧನ ಕುರಿತು ಹಾಗೂ ಮಾನವೀಯ ಸಂಬಂಧದ ವಿವಿಧ ಮುಖಗಳ ಅನಾವರಣಗೊಳಿಸುವ ವಿಷಯವಸ್ತುವನ್ನೊಳಗೊಂಡ ಕವಿತೆಗಳಿವೆ. ಗ್ರಾಮೀಣ ಜಗತ್ತಿನ ಕಂಡುಂಡ ಅನುಭವಗಳ ಬುತ್ತಿಯೇ ಕವಿತೆಗಳ ಹುಟ್ಟಿಗೆ ಕಾರಣವಾಗಿದೆ ಎಂದರೂ ತಪ್ಪೇನಿಲ್ಲ. ಬದುಕಿನೆಡೆಗೆ ಆಶಾವಾದವನ್ನು ಬೆಳೆಸಿಕೊಳ್ಳುವ ಕವಿ ಕನಸುಗಳ ಬೆನ್ನೇರಿ ಯಾರೂ ನಡೆಯದ ಹಾದಿಯೆಡೆಗೆ ಹೆಜ್ಜೆಯಿಕ್ಕುವ ಅದಮ್ಯ ಹಂಬಲ ವ್ಯಕ್ತಪಡಿಸುತ್ತಲೇ ತಳವರ್ಗದ ಜನರ ಬದುಕಿಗೆ ಭರವಸೆಯಾಗಲು ಯತ್ನಿಸುತ್ತಾರೆ.

ಡಾ. ಜಾಜಿ ದೇವೇಂದ್ರಪ್ಪ ಅವರು ಮುನ್ನುಡಿಯಲ್ಲಿ ಹೇಳುವಂತೆ, "ಈ ಕಾಲದ ತುಂಬ ಸಂವೇದನಾಶೀಲ ಕವಿ ರಮೇಶ ಬನ್ನಿಕೊಪ್ಪ. ಇವರ ಕಣ್ಣುಗಳಲ್ಲಿ ಸಮಾಜದ ಹಲವು ದಂದುಗಳಿಗೆ ತಕ್ಷಣ ಪ್ರತಿಸ್ಪಂದಿಸುವ ಉತ್ಸಾಹ-ಪ್ರತಿಭಟನೆ ಇದೆ. ಬದುಕನ್ನು ಅಂಚಿನ ದೃಷ್ಟಿಯಿಂದ ಕಂಡುಂಡ ಪ್ರಗಾಢ ಅನುಭವ ದ್ರವ್ಯವಿದೆ. ಸಮಾಜದ ಸಣ್ಣ ಸಣ್ಣ ಚೌಕಟ್ಟುಗಳನ್ನು ಕಾವ್ಯದ ಪರಿಧಿಯೊಳಗೆ ಶಬ್ಧಾಡಂಬರವಿಲ್ಲದೆ ಶಿಲ್ಪ, ರಚನೆ. ವಿನ್ಯಾಸ ಮಾಡುವ ಪ್ರಾಯೋಗಿಕ ಅರಿವಿದೆ." ತುಂಬ ಸರಳವಾಗಿ, ಕಾಣಿಸುವ ರೂಪಕಗಳ ಮೂಲಕವೇ ಕವಿತೆ ಕಟ್ಟುವ ರಮೇಶ್ ಓದುಗರ ಭಾವವಲಯದೊಳಗೆ ಸುಲಭಕ್ಕೆ ಪ್ರವೇಶ ಮಾಡುತ್ತಾರೆ.

ಶೋಷಿತ ಸಮುದಾಯ ಗತಕಾಲದಿಂದಲೂ ಉಳ್ಳವರ ದರ್ಪಕ್ಕೆ ದನಿ ಕಳೆದುಕೊಳ್ಳುತ್ತಲೇ ಬಂದಿದೆ. ತಮ್ಮ ಬೆವರನ್ನೆಲ್ಲ ಬಸಿದು ಹೊಲ-ಗದ್ದೆಗಳಲ್ಲಿ ಹಸಿರು ಹಬ್ಬಿಸಿದರೂ ಹಸಿದ ಹೊಟ್ಟೆಯಲ್ಲಿಯೇ ಇರಬೇಕಾದ ಸ್ಥಿತಿ ಅವರದ್ದಾಗಿದೆ. ತಾವೇ ಕಟ್ಟಿದ ಬಂಗಲೆಗಳು ಕುಸಿದು ಬಿದ್ದು ತಮ್ಮದೇ ಕರುಳಬಳ್ಳಿಗಳನ್ನು ಬಲಿ ತೆಗೆದುಕೊಂಡಾಗ ಅಳುವನ್ನೇ ಮರೆತವರಂತೆ ಅಸಹಾಯಕರಾದದ್ದು ಪರಿಸ್ಥಿತಿಯ ವ್ಯಂಗ್ಯದಂತೆ ಕಾಣಿಸಿದೆ. ಅದರ ಚಿತ್ರಣವನ್ನು ಕವಿ 'ಹಾದಿಯಲಿ ಹೆಣವಾದವರು' ಕವಿತೆಯಲ್ಲಿ ಕಾಣಿಸುತ್ತಾರೆ. ಮರದ ನೆರಳಲ್ಲೇ ಮಕ್ಕಳನ್ನು ಮಲಗಿಸಿ, ಸತ್ತ ದನಿಯಲ್ಲೇ ಜೋಗುಳ ಹಾಡಿ ಸಂತೈಸಿದ್ದು, ಗಂಡನೆದುರೇ ಹೆಂಡತಿಯ ಶೀಲ ದೋಚಲ್ಪಟ್ಟಿದ್ದು ಎಲ್ಲವನ್ನೂ ಕವಿತೆ ಆದ್ರವಾಗಿ ಧ್ವನಿಸುತ್ತದೆ.

ಅತ್ತ ಕಂದಮ್ಮಗಳಿಗೆ

ಸತ್ತ ಧ್ವನಿಯಲಿ

ಜೋಗುಳವಾಡಿ

ಮರದ ನೆರಳಿಗೆ ಮಕ್ಕಳ

ಮೈ ಹಾಸಿದವರು

ಬೆವರು ಕಣ್ಣೀರು ರಕ್ತವನ್ನೇ

ಬಸಿದು ಕುಡಿಸಿದವರು

ನಿಜ ಜೀವನದಲ್ಲಿ ಅಪ್ಪನ ಪಾತ್ರ ನಿರ್ವಹಿಸದ, ಬರೀ ನಾಟಕದ ಪಾತ್ರಗಳಿಗೆ ಬಣ್ಣ ಹಚ್ಚಿದ ತಂದೆಯ ಕುರಿತು ಮಗನಿಗೆ ಇರುವ ದೂರು 'ಅಪ್ಪನೊಂದಿಗೆ' ಕವಿತೆಯಲ್ಲಿ ವ್ಯಕ್ತವಾಗಿದೆ. ಕುಡಿತದ ಚಟಕ್ಕಂಟಿಕೊಂಡ ತಂದೆ ಮಗನಿಗೆ ಕೊಂಚವೂ ಸಮಯಾವಕಾಶವನ್ನೂ ನೀಡದೆ ಕಣ್ಮರೆಯಾಗಿ ಹೋಗಿದ್ದು ವಿಷಾದದಂತೆ ಭಾಸವಾಗುತ್ತದೆ. ನಿನ್ನ ಬೆರಳಿಡಿದು ಜಾತ್ರೆ ಸುತ್ತಬೇಕು, ಹೆಗಲ ಮೇಲೆ ಹತ್ತಿ ಕುರಿಮರಿಯಾಗಬೇಕು, ಬೆನ್ನ ಮೇಲೆ ಹತ್ತಿ ನಿನ್ನ ಆನೆ ಮಾಡಿಕೊಳ್ಳಬೇಕು, ಎಷ್ಟೆಲ್ಲ ಆಟಗಳನ್ನು ಆಡಬೇಕು ಎಂದುಕೊಂಡ ಮಗ ತನ್ನಾಸೆಯನ್ನು ತಂದೆಗೆ ಹೇಳಿಕೊಳ್ಳಲಾರದೆ ಒಳಗೊಳಗೆ ಕೊರಗುವ ವ್ಯಥೆ ಕವಿತೆಯ ತುಂಬ ಹರಡಿಕೊಂಡಿದೆ. 

ಬಣ್ಣ ಹಚ್ಚಿದಿರಿ; ಪಾತ್ರ ಮಾಡಿದಿರಿ

ನಾಟಕದಲಿ, ನೆನಪಾಗಲಿಲ್ಲ ಅಪ್ಪನ ಪಾತ್ರ

ನಿಜ ಜೀವನದಲ್ಲಿ!

'ಎಲ್ಲರೂ ನಡೆದಾಡುವ ಹೆದ್ದಾರಿಗಿಂತ ನಾವಾಗಿಯೇ ಮಾಡಿಕೊಂಡ ಕಾಲುದಾರಿ ಅದ್ಭುತವಾದದ್ದು' ಎನ್ನುತ್ತಾರೆ ಪತ್ರಕರ್ತ ರವಿ ಬೆಳಗೆರೆ ಅವರು. ಕವಿ ಕೂಡ ಎಲ್ಲರೂ ಮಾಡಿಕೊಂಡ ಹಾದಿಯನ್ನು ಬಿಟ್ಟು ವಿಭಿನ್ನವಾಗಿ ಸಾಗಿ ಹೊಸ ಸಮಾಜ ನಿಮರ್ಿಸುವ ಕನಸು ಕಾಣುತ್ತಾರೆ. ಒಬ್ಬಂಟಿಯಾದರೂ ಚಿಂತೆಯಿಲ್ಲ, ಜಾತಿ-ಧರ್ಮಗಳ ಗೊಡವೆಯಿರದ, ಗೊಡ್ಡು ಸಂಪ್ರದಾಯಗಳ ಹಂಗಿರದ, ದೇವರುಗಳ ಕಾಟವೇ ಇಲ್ಲದ, ತಂತ್ರ-ಕುತಂತ್ರಗಳ ಜನರನ್ನು ಬಿಟ್ಟು, ಶ್ರೀಮಂತರ ಅಟ್ಟಹಾಸದ ಸುಳಿವಿರದ ಮಾನವೀಯತೆಯ ನಾಡಿಗೆ, ಸುಂದರ ಪ್ರಕೃತಿಯ ಬೀಡಿಗೆ ಹೆಜ್ಜೆ ಹಾಕುವ ಸಂಕಲ್ಪ ತೊಡುತ್ತಾರೆ. ಅದು ಸಂಕಲನದ ಶೀಷರ್ಿಕೆಯ ಕವಿತೆಯಾದ 'ಹೆಜ್ಜೆ ಮೂಡದ ಹಾದಿ'ಯಲ್ಲಿ  ಸ್ಪಷ್ಟಗೊಂಡಿದೆ.

ಒಬ್ಬಂಟಿಯಾದರೂ ಚಿಂತೆಯಿಲ್ಲ

ಹೆಜ್ಜೆ ಮೂಡದ ಹಾದಿಯಲ್ಲಿ ಹೆಜ್ಜೆ ಹಾಕುವೆ

ಸುಂದರ ನಾಳೆಗಳಿಗಾಗಿ...

'ಸಮಾನತೆ' ಎನ್ನುವ ಕವಿತೆ ಇಂದಿನ ವೈರುಧ್ಯಗಳ ಕುರಿತು ಪ್ರತಿಬಿಂಬಿಸುತ್ತದೆ. ತಳವರ್ಗದ ಜನರಿಗೆ ಸಮಾನತೆಯ ಅವಕಾಶಗಳನ್ನು ಸೃಷ್ಟಿಸುವ ಜೊತೆಗೇ ಅವರನ್ನು ಪ್ರತ್ಯೇಕವಾಗಿ ಇಡುವ ಹುನ್ನಾರ ನಡೆದಿದೆಯೇನೋ ಎಂದು ಆಲೋಚಿಸುವಂತೆ ಮಾಡುತ್ತದೆ ಕವಿತೆ. ಹೌದು ಸ್ವಾಮಿ, ನಮಗೆ ಸಮಾನತೆ ಬಂದಿದೆ ಎನ್ನುವಲ್ಲಿ ಒಡೆದು ಆಳುವ ನೀತಿ ನೆನಪಾಗುವಂತೆ ಕಾಣಿಸುತ್ತದೆ. ದಲಿತರ ಕೇರಿಯಲ್ಲಿ ಪಾದಯಾತ್ರೆ, ದಲಿತರ ಮನೆಯಲ್ಲಿ ಊಟ ಎಂಬ ನಾಟಕವನ್ನು ಮಾಡುತ್ತಲೇ ಸಿಂಪಥಿ ಗಿಟ್ಟಿಸಲೆತ್ನಿಸುವ ರಾಜಕಾರಣಿಗಳ, ಡೋಂಗಿ ಸ್ವಾಮಿಗಳ ಬಣ್ಣ ಬಯಲು ಮಾಡುತ್ತದೆ ಕವಿತೆ. ಸತ್ತ ಮೇಲೆಯೇ ಸಮಾನತೆ ಎನ್ನುವ ನೈಜ ವಾಸ್ತವದ ಅರಿವು ಕವಿತೆಯಲ್ಲಿ ಆಗುತ್ತದೆ.

ಊರ ಹೊರಗೆ

ಮನೆ ಕಟ್ಟಿಸಿ ಕೊಟ್ಟಿದ್ದಾರೆ

ನಮ್ಮ ಕೇರಿಗೆ 'ಜನತಾ ಕಾಲೋನಿ'

ಎಂದು ಕರೆದಿದ್ದಾರೆ!

ನಮ್ಮ ಕೇರಿ ಹುಡ್ಗರಿಗೆ

ಕೇರ್ಯಾಗ ಸಾಲಿ ಕಟ್ಸಿ ಓದಸ್ತಾರ

ಹೌದು! ಸ್ವಾಮಿ...

ನಮಗೂ ಸಮಾನತೆ ಬಂದಿದೆ.

ಕವಿ ರಮೇಶ್ ಉಳ್ಳವರು ಶೋಷಿತರ ಮೇಲೆ ಮಾಡುವ ದಬ್ಬಾಳಿಕೆಯ ಪ್ರತಿ ದ್ವೇಷದ ಭಾವನೆ ವ್ಯಕ್ತಪಡಿಸುವುದಿಲ್ಲ. ಕೆಲಸ ಕಸಿದರೂ, ಒಪ್ಪೊತ್ತಿನ ಊಟ ಉಂಡು ಬಯಲಲ್ಲಿ ಮಲಗಿದರೂ, ದಿನವಿಡೀ ಅವರ ಏಳಿಗೆಗಾಗಿಯೇ ಶ್ರಮಿಸಿ ಉಳ್ಳವರ ಬಾಳು ಹಸನು ಮಾಡಿದರೂ ವಿಷಕಾರುವ ಮೇಲ್ವರ್ಗದ ಮೇಲೆ ಸಹನೆ, ಅನುಕಂಪವನ್ನೇ ಬಯಸುತ್ತಾರೆ. ನಿಮ್ಮ ಕ್ರೂರತನಕ್ಕೂ ನಮ್ಮಲ್ಲಿ ಕರುಣೆಯುಕ್ಕುತ್ತದೆ. ಪ್ರತಿ ಮೋಸದಾಟಕ್ಕೂ ಮನಸು ಮರುಗುತ್ತದೆ. ಹಾಗಾಗಿ ನಾವೆಂದೂ ನಿಮ್ಮ ಹಾಗೆ ವಿಷ ಕಾರುವುದಿಲ್ಲ. ನಿಮ್ಮ ಒಳಿತನ್ನೇ ಬಯಸುತ್ತೇವೆ ಎನ್ನುತ್ತಾರೆ. ಸದಾ ಉರಿದುಕೊಂಡು ಬೆಳಕು ನೀಡುವ ಹಣತೆ, ಸುತ್ತ ಸುಗಂಧ ಸೂಸುವ ಹೂಗಳ ಸುವಾಸನೆ, ಎಷ್ಟೇ ಹಿಂಡಿದರೂ ಸಿಹಿಯನ್ನೇ ಕೊಡುವ ಕಬ್ಬಿನ ಜಲ್ಲೆ, ತೇಯುತಲಿದ್ದರೂ ಹೊರಚೆಲ್ಲುವ ಪರಿಮಳದ ಗಂಧವೇ ನಾವಾಗಿ ಸಾರ್ಥಕತೆಯನ್ನು ಮೆರೆಯುತ್ತೇವೆ ಎಂಬ ನಿಲುವು 'ನಾವು' ಕವಿತೆಯಲ್ಲಿ ವ್ಯಕ್ತಪಡಿಸುತ್ತಾರೆ.

ಹೌದು!

ಹಣತೆಯ ಬೆಳಕು

ಊದಬತ್ತಿಯ ವಾಸನೆ

ಆಲ್ಲಿ ಕಬ್ಬಿನ ಸಿಹಿ

ತೇಯ್ದ ಗಂಧದ ಕೊರಡು ನಾವು!!

ಯಾವುದೋ ಕಾರಣಗಳಿಂದ ಮನೆಯ ಹಾದಿ ಮರೆತು, ಹೆತ್ತವರಿಂದ ದೂರವಾಗಿ ಮೈ ಮಾರಿಕೊಂಡು ಬದುಕು ನಡೆಸುವ ವೃತ್ತಿಗೆ ಇಳಿದಿರುವ ಹೆಂಗಳೆಯರ ಒಡಲಾಳವನ್ನು ತೋರಿಸುವ ಕವಿತೆ 'ಹಾದಿ ತಪ್ಪಿದ ಹಕ್ಕಿಗಳು'. ಇದು ಅಪೇಕ್ಷೆಯಲ್ಲ, ಅನಿವಾರ್ಯತೆ. ಅಪ್ಪನ ಕುಡಿತಕ್ಕೋ, ಅವ್ವನ ಖಾಯಿಲೆಯ ದುಬಾರಿ ಔಷಧಿಗೋ, ತಮ್ಮನನ್ನು ಓದಿಸುವ ಶಾಲೆಯ ಫೀಜಿಗೋ ಭಾವನೆಯಲ್ಲಿ ಒತ್ತೆಯಿಟ್ಟು ಈ ವೃತ್ತಿಯನ್ನು ಆಯ್ದುಕಂಡವರು. ಅವರು ಬಯಸುವ ಕ್ಷಣಗಳನ್ನು ಕವಿ ಕವಿತೆಯಲ್ಲಿ ಕಾಣಿಸುತ್ತಾನೆ. ಹಗಲು ಬೇಗ ಬೇಗ ಕಳೆದು ಹೋಗಲಿ. ಬೆಳದಿಂಗಳ ರಾತ್ರಿಗಳೇ ಇಲ್ಲವಾಗಲಿ. ಸದಾ ಕತ್ತಲೆಯೇ ಎಲ್ಲೆಡೆ ಕವಿಯಲಿ. ನಮಗೆ ಕತ್ತಲೆಯೇ ಬದುಕಲ್ಲವೇ? ಎಂದು ಮಾಮರ್ಿಕವಾಗಿ ನುಡಿಯುವ ಕವಿತೆಯ ಸಾಲುಗಳು ಕಾಡುತ್ತವೆ.

ಹಗಲು ಬೇಗ ಬೇಗ ಹೋಗಲಿ

ಆಕಾಶದಲ್ಲಿ ಬೆಳದಿಂಗಳು

ಇಲ್ಲವಾಗಲಿ

ಕತ್ತಲು ಆವರಿಸಿ ಬಿಡಲಿ

ಕತ್ತಲೆಂದರೆ ನಮಗೆ ಬದುಕು!

ವಿಪಯರ್ಾಸದ ತದ್ವಿರುದ್ಧದ ಸಂಗತಿಗಳನ್ನು ಕಟ್ಟಿಕೊಡುವ ಕವಿತೆ 'ಒಂದಿಷ್ಟು ಸಂಗತಿಗಳು', ಹೆಣ್ಣಿನ ಒಡಲಾಳದ ನೂರೆಂಟು ನೋವುಗಳನ್ನು ಹಸಿ ಹಸಿಯಾಗಿ ಅಭಿವ್ಯಕ್ತಿಸುವ ಕವಿತೆ 'ಹೆಣ್ಣು ಹೆಣವಾಗುವ ಮುನ್ನ', ಸಂಪ್ರದಾಯ, ಜಾತಿ-ಧರ್ಮದ, ಶ್ರೀಮಂತಿಕೆಯ ಕರಿನೆರಳಿಗೆ ಪ್ರೀತಿಯ ಗೋಣು ಮುರಿದು ದೂರ ದೂರ ನಡೆದು ಬಂದ ನಲ್ಲೆಯೋರ್ವಳ ನೋವನ್ನು ತೋರುವ 'ಕ್ಷಮೆ ಕೋರಿ' ಕವಿತೆಗಳು ಇಷ್ಟವಾಗುತ್ತವೆ. ಬೆನ್ನುಡಿಯಲ್ಲಿ ಅಲ್ಲಮ ಪ್ರಭು ಬೆಟ್ಟದೂರು ಹೇಳುವಂತೆ 'ಕವಿಗೆ ವಾಸ್ತವ ಜಗತ್ತಿನ ಸ್ಪಷ್ಟ ಕಲ್ಪನೆಯಿದೆ. ಅಭಿವ್ಯಕ್ತಿಯಲ್ಲಿ ಧ್ವನಿಪೂರ್ಣತೆಯಿದೆ. ಹಾಗೆಂದೇ ಈ ಕವಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ'. ಹೊಸ ಓದು, ಚಿಂತನೆ, ಸಶಕ್ತ ರೂಪಕ, ಪ್ರತಿಮೆಗಳ ಮೂಲಕ ಮತ್ತಷ್ಟು ಕವಿತೆಗಳು ರಮೇಶ ಬನ್ನಿಕೊಪ್ಪ ಅವರ ಲೇಖನಿಯಿಂದ ಅರಳಿ ನಮ್ಮನ್ನೆಲ್ಲ ರಂಜಿಸಲಿ ಎಂದು ಹಾರೈಸುತ್ತ, ಅವರ ಚೊಚ್ಚಲ ಕವನ ಸಂಕಲನಕ್ಕೆ ಶುಭ ಕೋರುತ್ತೇನೆ.