ಹೃದಯ ತಟ್ಟುವ ಒಲವಿನ ದಾಂಪತ್ಯ ಗೀತೆಗಳು

- ನಾಗೇಶ್ ಜೆ. ನಾಯಕ 

ಶಿಕ್ಷಕರು, ಸವದತ್ತಿ


ಸುಖೀಗೀತ-ಕವನ ಸಂಕಲನ

ಲೇಖಕರು-ಗೀತಾ ಯಾಳಗಿ ಶ್ರೀಧರ

ಪ್ರಕಾಶಕರು-ಚೇತನ ಪ್ರಕಶನ ಹುಬ್ಬಳ್ಳಿ

ವರ್ಷ-2018 ಪುಟಗಳು-72 

ಬೆಲೆ-80/-

ಬದುಕಿನ ಅಚ್ಚರಿ, ರೋಮಾಂಚನಗಳನ್ನು ಅನುಭವಿಸುತ್ತಲೇ ಅನಿರೀಕ್ಷಿತವಾಗಿ ಬರವಣಿಗೆ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದ ಗೀತಾ ಶ್ರೀಧರ ಯಾಳಗಿ ಅವರು ತಮ್ಮ ಚೊಚ್ಚಲ ಕವನ ಸಂಕಲನ 'ಸುಖೀಗೀತ' ಹೊರತಂದಿದ್ದಾರೆ. 60 ಕ್ಕೂ ಹೆಚ್ಚಿನ ಕವಿತೆಗಳಿರುವ ಸಂಕಲನದಲ್ಲಿ ಬಹುಪಾಲು ಕವಿತೆಗಳು ಪ್ರೀತಿ-ಪ್ರೇಮ, ವಿರಹ ವೇದನೆ, ದಾಂಪತ್ಯದ ಒಲವು-ಚೆಲುವುಗಳಂಥ ವಿಷಯ ವಸ್ತುವಿನ ಸುತ್ತ ಕೇಂದ್ರೀಕೃತವಾದರೆ ಒಂದಷ್ಟು ಕವಿತೆಗಳು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಸುತ್ತ ಹೆಣೆದ ಕವಿತೆಗಳಾಗಿವೆ. ಒಂದೇ ವಿಷಯದ ಸುತ್ತ ವಿಭಿನ್ನ ಆಲೋಚನೆಗಳ ಭಾವ ಹಂದರವನ್ನು ಸೃಜಿಸಿ ಕವಿತೆ ಕಟ್ಟುವುದು ತುಂಬ ಕಷ್ಟದ ಕೆಲಸ. ಇದು ಗೀತಾ ಯಾಳಗಿ ಅವರಿಗೆ ದಕ್ಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಏಕತಾನತೆ, ನೀರಸ ಭಾವಗಳು ಆವರಿಸಿಬಿಡುವ ಲಕ್ಷಣವಿರುತ್ತದೆ. ಆದರೆ ಇಲ್ಲಿ ಅಂತಹ ಯಾವ ಪ್ರಮಾದಗಳು ಸಂಭವಿಸಿಲ್ಲ. ಭಾವಗೀತಾತ್ಮಕ ಶೈಲಿಯಲ್ಲಿಯೇ ದಾಂಪತ್ಯದ ಚೆಲುವಿಕೆ ವ್ಯಕ್ತಪಡಿಸುವ ಶೈಲಿ ತುಂಬ ಆಪ್ತವೆನಿಸುತ್ತದೆ. ಕೆ. ಎಸ್. ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯ ಕವಿತೆಗಳನ್ನು ನೆನಪಿಸುವಂತೆ ಇಲ್ಲಿನ ಕೆಲವು ಕವಿತೆಗಳು ಓದುಗರನ್ನು ಗಾಢವಾಗಿ ಸೆಳೆದುಕೊಳ್ಳುತ್ತವೆ. ಹಾಗಂತ ಅವರು ಬರೀ ಕಲ್ಪನಾ ಲೋಕದಲ್ಲಿಯೇ ವಿಹರಿಸದೆ ಸುತ್ತಣ ಹಸಿವು, ಬರಗಾಲ, ತಾಯಿಯೊಬ್ಬಳ ಅಸಹಾಯಕತೆ, ದೇವರ ಹೆಸರಿನಲ್ಲಿ ನಡೆಯುವ ಶೋಷಣೆ ಮುಂತಾದ ವಿಷಯಗಳ ಕುರಿತು ಕವಿತೆ ಬರೆದಿದ್ದಾರೆ.

ವಿದ್ಯಾಧರ ಮುತಾಲಿಕ ದೇಸಾಯಿ ಅವರು ಮುನ್ನುಡಿಯಲ್ಲಿ ಹೇಳುವಂತೆ "ಗೀತಾ ಯಾಳಗಿ ಅವರ 'ಸುಖೀಗೀತ' ಮೊದಲ ಹೆರಿಗೆ ಅನಿಸಿದರೂ ಮಾಗಿದ ಮನಸ್ಸು, ಪರಿಪಕ್ವಶೀಲತೆಯ ಅಭಿವ್ಯಕ್ತಿಯಿಂದ ಕನ್ನಡ ಕಾವ್ಯಲೋಕ ಭರವಸೆಯ ಕವಯಿತ್ರಿಯೋರ್ವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇಲ್ಲಿನ ಬಹಳಷ್ಟು ಕವಿತೆ ನವಿರು ಭಾವಗಳ ಒಲವು, ನಲಿವುಗಳ ದಾಂಪತ್ಯ, ಸುಖೀಗೀತ ಕವನಗಳ ಸುಖವೇ ಇದ್ದರೂ ಕಾಡುವ ಕವಿತೆಗಳಿಗೂ ಕೊರತೆ ಇಲ್ಲ." ಇಲ್ಲಿನ ಎಲ್ಲ ಕವಿತೆಗಳನ್ನು ಓದುತ್ತ ಹೋದಂತೆ ನಮಗೂ ಹಾಗೆನಿಸದೇ ಇರದು. 

ಬಾಳ ಪಯಣದಲ್ಲಿ ಒಬ್ಬಂಟಿಯಾಗಿಸಿ ಬಿಟ್ಟೆದ್ದು ನಡೆದ ನಲ್ಲನ ಅನುಪಸ್ಥಿತಿಯಲ್ಲಿ ಆತನ ನೆನಪುಗಳೊಂದಿಗೆ ಮಾತಿಗಿಳಿವ ನಲ್ಲೆ, ಕಿತ್ತು ತಿನ್ನುವ ಏಕಾಂತವನ್ನು ತಾಳಲಾರದೆ ನಿನ್ನ ಹಿಂದೆಯೇ ಬರುವೆನು ನನಗಾಗಿ ಕಾಯುವೆಯಾ? ಎಂದು ಪ್ರಶ್ನಿಸುವ ಪರಿ ಆಕೆ ಅನುಭವಿಸುವ ವೇದನೆಯನ್ನು ಎಳೆ ಎಳೆಯಾಗಿ ತೆರೆದಿಡುತ್ತದೆ. ಹಾಗೆಯೇ ಅಂದುಕೊಂಡಂತೆ ನಡೆಯದೆ ಮಾತಿಗೆ ತಪ್ಪಿದ ಪ್ರಿಯಕರನ ಮೇಲೆ ಹುಸಿಕೋಪವೂ ವ್ಯಕ್ತವಾಗುತ್ತದೆ.

ನಿನ್ನ ಮುಂದೆಯೇ ನಾ

ಹೋಗಬೇಕೆನುತಿದ್ದೆ ನಲ್ಲ

ನನಗಿಂತ ಮೊದಲೇ

ನೀ ಹೋದೆಯಲ್ಲ  (ಸಾವಿನ ಮನೆಯಿಂದ)

ವೈಶ್ಯಾವಾಟಿಕೆಯ ಕಪಿಮುಷ್ಠಿಯಲ್ಲಿ ಸಿಲುಕಿದ ಹೆಣ್ಣೊಬ್ಬಳ ಆರ್ತನಾದವನ್ನು ಪ್ರತಿಧ್ವನಿಸುವ ಕವಿತೆ 'ಕೆಂಪು ದೀಪದ ನೆರಳು'. ಆಕೆಯ ಆಕಾಂಕ್ಷೆಗಳೆಲ್ಲ ನೀರಗುಳ್ಳೆಯಂತೆ ಕಣ್ಮರೆಯಾಗಿ ಗಂಟೆಗಳ ಲೆಕ್ಕಾಚಾರದಲ್ಲಿ  ಹಗಲಿರುಳು ನಲುಗುವಂತಾದ ಸ್ಥಿತಿಯನ್ನು ವೇದನೆಯೊಂದಿಗೆ ವ್ಯಕ್ತಪಡಿಸುತ್ತ ಸಾಗುತ್ತದೆ ಕವಿತೆ. ಎಷ್ಟೋ ಹೆಣ್ಣುಮಕ್ಕಳು ತಮ್ಮ ಕನಸುಗಳಿಗೆ ನೇಣು ಹಾಕಿ ಅಸಹಾಯಕತೆಗೋ, ಪರಿಸ್ಥಿತಿ ಕೈಗೊಂಬೆಯಾಗಿಯೋ, ಗಂಡಸೆಂಬ ವಂಚಕನ ಬಲೆಗೆ ಸಿಲುಕಿಯೋ ಕೆಂಪು ದೀಪದ ಮಾಂಸದ ದಂಧೆಗೆ ಒಡ್ಡಿಕೊಂಡು ನಿತ್ಯನರಕದಲ್ಲಿ ನೋಯುತ್ತಿರುವ ಚಿತ್ರಣ ಕವಿತೆಯಲ್ಲಿ ಧ್ವನಿಸುತ್ತದೆ.

ಪ್ರೇಮದ ಬಂಧನದಲ್ಲಿ 

ಬಂಧಿಯಾಗಬೇಕೆಂದವಳು

ಕಾಮದ ಕೂಪದಲ್ಲಿ ಬಿದ್ದು

ಹೊರಳಾಡುತಿರುವಳು

ಜೊತೆಗಾರನ ಒಲುಮೆಯ ಸಡಗರದಲ್ಲಿ ಪುಳಕಗೊಂಡು ಹುಟ್ಟಿದ ಸಂಕಲನದ ಶೀಷರ್ಿಕೆಯ ಕವಿತೆ 'ಸುಖೀಗೀತ'. ನಲ್ಲನ ಸಾಮೀಪ್ಯ ಜೊತೆಗಿರಲು, ಆತನ ಸಂತೈಕೆಯ ಮೃದು ನೇವರಿಕೆ ದೊರಕಿರಲು ನೂರು ನೋವುಗಳೆಲ್ಲ ಹಾಯಾಗಿ ಹೆಜ್ಜೆ ಕೀಳುತ್ತವೆ. ಅಂತಹ ಒಲುಮೆಯ ಸಂಭ್ರಮದಲ್ಲಿ ಸಾರ್ಥಕ್ಯದ ಕ್ಷಣಗಳ ಬದುಕಿನ ಸಂತಸವನ್ನು ಇನ್ನಿಲ್ಲದಂತೆ ಕಾಪಿಟ್ಟುಕೊಳ್ಳುವ ಸಾಲುಗಳು ಕವಿತೆಯಲ್ಲಿ ಕಾಣಿಸಿಕೊಳ್ಳುತ್ತವೆ.

ಜೊತೆಯಿರಲು ನೀನು

ಬಳಿಬಾರದ ನೋವು

ಹೆಗಲಿರಲು ಹಗಲಿಗೆ

ಇರುಳಿಗೆ ನಿನ್ನೆದೆಯ ತಾವು

ಸದಾ ತನ್ನ ದಿನನಿತ್ಯದ ಮನೆಗೆಲಸಗಳಲ್ಲಿ ಮುಳುಗಿ ಹೋದ ಗೃಹಿಣಿಯೊಬ್ಬಳು ಪುಟ್ಟ ಪುಟ್ಟ ಆಸೆಗಳಿಗೆ ಕಾವು ಕೊಡುತ್ತಾ, ಬೊಗಸೆ ಕಂಗಳಲ್ಲಿ ಕನಸು ಕಾಣುತ್ತಾಳೆ. ಆ ಕನಸುಗಳೇ ಅವಳಲ್ಲಿ ಉತ್ಸಾಹದ ಚಿಲುಮೆ ಬತ್ತದಂತೆ ಕಾಪಿಡುತ್ತವೆ. ಒಂದು ದಿನ ಅಡುಗೆ ಕೆಲಸಗಳಲ್ಲಿ ವಿರಾಮ ದೊರೆತು, ಬೆಳಗಿನಿಂದ ಸಂಜೆಯವರೆಗೂ ಇನಿಯನ ಆರೈಕೆಯಲ್ಲಿಯೇ ಖುಷಿಯಾಗಿರುತ್ತಾ ದಿನದ ಆನಂದವನ್ನು ಅನುಭವಿಸುವ ಇಚ್ಛೆ ವ್ಯಕ್ತಪಡಿಸುತ್ತಾಳೆ. ಅವಳ ಪುಟ್ಟ ಕನಸುಗಳು ವಾಸ್ತವದಲ್ಲಿ ನನಸಾಗುತ್ತವೆಯಾ ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಮೂಢಣದ ಸೂರ್ಯನಿಗಿಂತ

ಎಷ್ಟೋ ತಡವಾಗಿ ಎದ್ದರೂ

ಪತಿದೇವ ನಗುತ ಇದಿರಾಗಿ

ಹಣೆಗೆ ಹೂಮುತ್ತನಿತ್ತರೆ ಎಷ್ಟು ಚಂದ 

(ಪುಟ್ಟದೊಂದು ಆಸೆ)

ಕಿತ್ತು ತಿನ್ನುವ ಬಡತನವನ್ನು ಹಸನು ಮಾಡಲು ನಿತ್ಯ ಹೆಗಲಾಗುವ ಅವ್ವನ ಗಾಣದೆತ್ತಿನ ದುಡಿತಕ್ಕೆ ಅರಳಿ ನಿಂತ ಕವಿತೆಯೊಂದು, ಅವ್ವನ ಕಷ್ಟದ ಕುಲುಮೆಯಲ್ಲಿ ನೊಂದು ಬೆಂದು ಮೈದಳೆದು ನೇವರಿಸುತ್ತದೆ. ಅವ್ವ ದುಡಿದದ್ದನ್ನೆಲ್ಲ ಅಪ್ಪ ಗಡಂಗಡಿಗೆ ಸುರುವಿ ಗೊರಕೆ ಹೊಡೆಯುವ ಸದ್ದಿನಲ್ಲಿ ಅವ್ವನ ರಾತ್ರಿಯ ಬಿಕ್ಕಳಿಕೆ ಕೇಳಿಸುವುದಿಲ್ಲ. ಎಷ್ಟೋ ಗುಡಿಸಲ ಮಂದಿಯ ಪ್ರತಿನಿಧಿಯಂತೆ ಭಾಸವಾಗುವ ಕವಿತೆ 'ಬಡತನ'ದ ಕರಾಳ ಮುಖಗಳನ್ನು ಕಾಣಿಸುತ್ತದೆ.

ರಾತ್ರಿಯ ನೀರವತೆಯನ್ನು

ಕದಡುವುದು ಅವ್ವನ ಬಿಕ್ಕಳಿಕೆ

ಅವ್ವ ದುಡಿದ ದುಡ್ಡು ಕಸಿದುಕೊಂಡು

ನಿಶೆಯಲ್ಲಿ ಮಲಗಿದ ಅಪ್ಪನ ಗೊರಕೆ

ಅನೈತಿಕ ಸಂಬಂಧವು ಚಂದದ ಸಂಸಾರಕ್ಕೆ ಕೊಳ್ಳಿ ಇಡುವ ಪರಿ 'ನಿಟ್ಟುಸಿರು' ಕವಿತೆಯಲ್ಲಿ ವ್ಯಕ್ತವಾಗಿದೆ. ಒಂದು ಕಡೆ ಗಂಡನ ಬರುವಿಕೆಯ ನಿರೀಕ್ಷೆಯಲ್ಲಿ ಕಾದು ಕುಳಿತ ಹೆಣ್ಣುಮಗಳು. ಅವನೋ ಮತ್ತೊಬ್ಬಳ ತೋಳ ತೆಕ್ಕೆಯಲ್ಲಿ ಮಗ್ಗಲು ಬದಲಿಸುತ್ತಿರುವುದು. ಕೊನೆಗೂ ಕಾಯುವವಳ ಪಾಲಿಗೆ ನಿಟ್ಟುಸಿರೊಂದೇ ಖಾಯಮ್ಮಾಗುಳಿಯುವ ಶಿಕ್ಷೆ. ಎಲ್ಲವನ್ನೂ ಮನೋಜ್ಞವಾಗಿ ಗೀತಾ ಅವರು ಕವಿತೆಯಲ್ಲಿದಾಖಲಿಸುತ್ತಾರೆ.

ಚುಮು ಚುಮು ಬೆಳಗಿನಲೆದ್ದು

ಅಂಗೈ ಉಜ್ಜಿ ನೋಡುವಾಗ ಪಕ್ಕದಲಿ

ನೀನುರುವೆಯೇನೋ ಎಂಬ ಭಾವ

ನೀನೋ... ನಿನ್ನವಳಲ್ಲದವಳ ತೆಕ್ಕೆಯಲಿ

ಮಗ್ಗಲು ಬದಲಾಯಿಸುತ್ತಿರುತ್ತೀ

ನಿಟ್ಟುಸಿರಿನಿಂದ ಎದೆಯಂಗಳಕೆ

ನೀರು ಚಿಮುಕಿಸುತ್ತೇನೆ...

ಸಂಕಲನದ ಎಲ್ಲ ಕವಿತೆಗಳಲ್ಲೂ ಚಂದದ ಪ್ರಾಸ ಗಮನ ಸೆಳೆಯುತ್ತದೆ. ಸರಳತೆ ಇಲ್ಲಿನ ಎಲ್ಲ ಕವಿತೆಗಳ ಗುಣ. ಕೆಲವೊಂದಷ್ಟು ಕವಿತೆಗಳು ಭಾವಗೀತಾತ್ಮಕ ಶೈಲಿಯಲ್ಲಿ ಇರುವುದರಿಂದ ಸುಲಭವಾಗಿ ಹಾಡಿಕೊಳ್ಳಲು ಬರುವಂತಿವೆ. 'ಮಾತಿನ ರಿಂಗಣಕ್ಕಿಂತ ಮೌನದ ಮಂದಹಾಸವೇ ಹೃದಯದ ಬಾಗಿಲು ತಟ್ಟುತ್ತದೆನಿಸುವುದು' (ಹುಚ್ಚುಕೋಡಿ ಮನಸ್ಸು), 'ಬೇಲಿಯಿರದ ಹೂವಿಗೆ ಮಾಲೀಕರು ನೂರಾರು, ದೇವದಾಸಿಯ ಕುಡಿಗೂ ಹೃದಯವುಂಟೆಂದು ನೀನರಿಯಲೇ ಇಲ್ಲ (ಬೇಲಿಯಿರದ ಹೂ), ನಿನ್ನ ಪ್ರೇಮವದು ನನಗೆ ಬಂಧನವಾಗುವುದು ಬೇಡ, ಸ್ವತಂತ್ರವಾಗಿ ಹಾರಾಡುವೆ ಜೊತೆಯಾಗುವೆಯಾ? (ಅರಗಿಣಿ) ಎಂಬ ಸಾಲುಗಳು ತುಂಬ ಆಪ್ತವೆನಿಸುತ್ತವೆ, ಕಾಡುತ್ತವೆ. ಬೆನ್ನುಡಿಯಲ್ಲಿ ಸೋಮು ರೆಡ್ಡಿ ಅವರು ಹೇಳಿರುವಂತೆ "ಇತ್ತೀಚೆಗಷ್ಟೇ ಕಾವ್ಯ ಕಸೂತಿಯನ್ನು ಆರಂಭಿಸಿರುವ ಗೀತಾ ಯಾಳಗಿ ಅವರನ್ನು ಹೊಸಬರೆಂದು ಪರಿಗಣಿಸಲು ಅವರ ಕವಿತೆಗಳಲ್ಲಿನ ಪ್ರೌಢತೆ ಆಸ್ಪದ ನೀಡುವುದಿಲ್ಲ. ಗೃಹಿಣಿಯಾಗಿ ದಕ್ಕಿಸಿಕೊಂಡ ಎಲ್ಲ ಅಂಶಗಳನ್ನು ಯಥಾವತ್ತಾಗಿ ಕವಿತೆಯಾಗಿಸುವ ಮಾಂತ್ರಿಕತೆಯನ್ನು ಸಿದ್ಧಿಸಿಕೊಂಡಿದ್ದಾರೆ" ಹಾಗೆಂದೇ ಗೀತಾ ಯಾಳಗಿ ಮುಂಬರುವ ದಿನಮಾನದಲ್ಲಿ ಒಬ್ಬ ಭರವಸೆಯ ಕವಯಿತ್ರಿಯಾಗಿ ನಿಲ್ಲುವ ಎಲ್ಲ ಲಕ್ಷಣಗಳು ಅವರ ಮೊದಲ ಸಂಕಲನದಲ್ಲಿ ಗೋಚರಿಸುತ್ತವೆ. ಅವರ ಚೊಚ್ಚಲ ಕವನ ಸಂಕಲನಕ್ಕೆ ಶುಭಕೋರುತ್ತಾ ಇನ್ನಷ್ಟು ಹೊಸದನ್ನು ಅವರಿಂದ ನಿರೀಕ್ಷಿಸೋಣ.