ಹೃದಯಂಗಮ: ಗದ್ಯ ಸುಗಂಧ

-ಶಿವಯೋಗಿ ಕುಸುಗಲ್ಲ

ರಾಮತೀರ್ಥ ನಗರ


ವ್ಯಷ್ಟಿ ಮತ್ತು ಸಮಷ್ಟಿಯ ಶಾಂತಿ, ನೆಮ್ಮದಿ, ಹರುಷ, ಸಮನ್ವಯತೆ, ಸಂವೇದನಾಶೀಲತೆ ಹೀಗೆ  ಎಲ್ಲವನ್ನು ಒದಗಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಸಹೃದಯಿ, ಸ್ಪಂದನಾಶೀಲನು ಲೋಕದ ವಿದ್ಯಮಾನದತ್ತ ಸದಾ ಅವಲೋಕನೆ ಮಾಡುತ್ತಿರುತ್ತಾನೆ. ಅಷ್ಟೇ ಅಲ್ಲ ತನಗೆ ನಿಲುಕಿದ ಚಿತ್ರ, ಸಾಹಿತ್ಯ, ನಾಟ್ಯ ಮೊದಲಾದ ಯಾವದೆ ಮಾಧ್ಯಮದ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ವೇದನೆ ಸಂವೇದನೆ, ಸಂತೋಷವನ್ನು, ಅರಿವನ್ನು ಮೂಡಿಸುವ ತಾಕತ್ತು ಸಾಹಿತ್ಯಕ್ಕಿದೆ.  ಜನಪದ, ವಚನ, ದಾಸ, ಬಂಡಾಯ ಮೊದಲಾದ ಸಾಹಿತ್ಯ ಪ್ರಕಾರಗಳು ಜನಸಮೂಹದ ಹಿತಕ್ಕಾಗಿ, ಜಾಗೃತಿಗಾಗಿ ಮೂಡಿಬಂದವು. 

ಪ್ರೊ.ಎಂ.ಎಸ್.ಇಂಚಲ ಇವರ ಸಾಹಿತ್ಯ ಕೃತಿಗಳಲ್ಲಿ ಜನಮನದ ತಿಳಿವಿಗಾಗಿ, ಒಳಿತಿಗಾಗಿ, ಆದರ್ಶತೆಯ ಒತ್ತಾಸೆಗಾಗಿ ಮಿಡಿತವನ್ನು ಕಾಣುತ್ತೇವೆ. 'ಸಾಹಿತ್ಯ ಎಲ್ಲರಿಗಿಲ್ಲ ಸರ್ವಜ್ಞ ಎಂದು ಸಾರಿದ ಸರ್ವಜ್ಞ ಇಂಥವರನ್ನು ಕಂಡು ಈ ಮಾತನ್ನು ಹೇಳಿರಬಹುದು. ಪ್ರೊ.ಮಲ್ಲಿಕಾಜರ್ುನ ಇಂಚಲ ಇವರು ನಾಡಿನ ಸುಪ್ರಸಿದ್ಧ ಕವಿ ಎಸ್.ಡಿ.ಇಂಚಲ ಇವರ ಜೇಷ್ಠ ಪುತ್ರರಾಗಿದ್ದಾರೆ. ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸಮರ್ಥ ಬೋಧನೆ, ಆಡಳಿತದಿಂದ ಇವರು ಖ್ಯಾತರಾಗಿ ಅಪಾರ ಶಿಷ್ಯ ಬಳಗದ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇವರೊಬ್ಬ ಒಳ್ಳೆಯ ಚಿತ್ರ ಕಲಾವಿದರೆಂಬುದು ಬಹುತೇಕರಿಗೆ ಗೊತ್ತಿಲ್ಲ.  ಎಲ್ಲ ಲೌಕಿಕ ಆಸ್ತಿಯನ್ನು ಗಳಿಸುವದು ಸುಲಭ ಆದರೆ ಜನರ ಪ್ರೀತ್ಯಾದರವನ್ನು ಸಂಪಾದಿಸುವದು ಜಟಿಲವಾದುದು.  ಜನಮನಗೆದ್ದವರು ಸಾರ್ಥಕ ಬದುಕಿನ ದಾರಿ ಹಿಡಿದವರಾಗಿರುತ್ತಾರೆ.  ಇವರ ಜೀವನ ಸಂತೃಪ್ತಿ, ಸಮಾಧಾನದಿಂದ ಕೂಡಿರುತ್ತದೆ.  ಸುಶಿಕ್ಷಿತವಾದ, ಸಂಸ್ಕಾರವಂತ ಮನೆತನದ ಹಿನ್ನೆಲೆ ಇವರಿಗಿದೆ.  ಇವರ ಅಜ್ಜ ಕೂಡ ಶಾಲಾ ಶಿಕ್ಷಕರಾಗಿದ್ದರು. 

ಅನೇಕ ಗ್ರಂಥಗಳನ್ನು ಬರೆದ ಪ್ರೊ.ಮಲ್ಲಿಕಾಜರ್ುನ ಇಂಚಲ ಇವರ ಇನ್ನೊಂದು ಕೃತಿ 'ಗದ್ಯ ಸುಗಂಧ' ಓದುಗರ ಹೃದಯಕ್ಕೆ ಸುಲಭವಾಗಿ ಮುಟ್ಟುತ್ತದೆ. ಇಲ್ಲಿಯ ಲೇಖನಗಳು ಶರಣರ ಕಾಯಕ ತತ್ವ, ಜಾನಪದ ಸಾಹಿತ್ಯದ ಸತ್ವ, ನಾಡು ನುಡಿಯ ಅನನ್ಯ ಅಭಿಮಾನ, ವ್ಯಕ್ತಿ ಚಿತ್ರಣ, ಮುನ್ನುಡಿಗಳ ಮುಡಿ ಇಂತೆಲ್ಲ ವಿವಿಧ ಸಾಹಿತ್ಯ ಸುಗಂಧ ಇಲ್ಲಿ ಸೂಸಿದೆ. ಇಂಚಲ ಸರ್ ಇವರ ಪಾಂಡಿತ್ಯ, ಪ್ರತಿಭೆ ಇಲ್ಲಿ ಕೆನೆಗಟ್ಟಿದೆ. "ಪ್ರೊ.ಇಂಚಲರ ಅಧ್ಯಯನ ವಿಸ್ತಾರವಾದದ್ದು.  ಹಳಗನ್ನಡದಲ್ಲಿ ಅವರಿಗೆ ಅಪಾರವಾದ ಪರಿಶ್ರಮವಿದೆ.  ನಡುಗನ್ನಡ-ಹಳಗನ್ನಡಗಳನ್ನು ಆಳವಾಗಿ ಓದಿದ ಅವರ ವ್ಯಾಸಂಗ ಪರಿಣಿತಿ ವರ್ಗ ಉಪನ್ಯಾಸಗಳಲ್ಲಷ್ಟೇ ಅಲ್ಲ, ಸಾರ್ವಜನಿಕ ಭಾಷಣಗಳಲ್ಲಿ ಸಹಜ ಸಮಾಲೋಚನೆಯಲ್ಲಿ ನಿಖರವಾಗಿ ಅಭಿವ್ಯಕ್ತವಾಗಿದೆ.  ಪ್ರೊ. ಇಂಚಲರ ಮಾತು ಎಲ್ಲರಿಗೂ ಅಪ್ಯಾಮಾನ " ಡಾ.ಬಸವರಾಜ ಜಗಜಂಪಿ ಇವರ ಮುನ್ನುಡಿಯಲ್ಲಿಯ ಸಾಲುಗಳು ಇವರ ಪಾಂಡಿತ್ಯಕ್ಕೆ ಸಮರ್ಥನೆ ಒದಗಿಸುತ್ತವೆ. 

'ಶರಣ ಕಾಯಕವೈಭವ' ದಲ್ಲಿ  ಭಕ್ತ ಕಾಯಕದಲ್ಲಿ ತೊಡಗಿದಾಗ ಎಲ್ಲವನ್ನೂ ಮರೆಯಬೇಕೆಂಬ ಕಾಯಕದ ಮಹತ್ವದ ಕುರಿತು ಶರಣರ ಆಶಯವನ್ನು ಮನಸ್ಸಿಗೆ ಮುಟ್ಟುವಂತೆ ವಿವರಿಸಲಾಗಿದೆ. ಆಯ್ದಕ್ಕಿ ಮಾರಯ್ಯ ಇಲ್ಲಿ ಕಾಯಕದೊಂದಿಗೆ ಅನ್ನ ದಾಸೋಹದ ಮಹತಿಯನ್ನು ಬಿಂಬಿಸಲಾಗಿದೆ. ಒಂದು ದೇಶದ, ನಾಡಿನ ಸಮೃದ್ಧಿಯನ್ನು ಅಳೆಯಲು ಮೊದಲು ಅಲ್ಲಿಯ ಸಂಸ್ಕೃತಿಯ ಮೌಲ್ಯವನ್ನು ಅಳೆಯುವದು ಅಗತ್ಯವಾದುದು. 'ಕನ್ನಡ ಸಂಸ್ಕೃತಿ' ಲೇಖನದಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯ ಹಿರಿಮೆಯನ್ನು ಎತ್ತಿ ಹಿಡಿಯಲಾಗಿದೆ.  ಬಾದಾಮಿಯ ಶಾಸನ 'ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯ..'  ಮತ್ತು "ಕೆರೆಯಂ ಕಟ್ಟಿಸು, ಬಾವಿಯಂ ಸವಸು ದೇವಾಗಾರಮಂ ಮಾಡಿಸು. "ಎಂಬಲ್ಲಿ ನಮ್ಮ ಜನರ ಮನದ ಆಳ, ಹರವು ಮತ್ತು ಎತ್ತರವನ್ನು ಇಲ್ಲಿ ಎತ್ತಿ ಹೇಳಲಾಗಿದೆ. 

ಇವರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಸಮಯದಲ್ಲಿಯ ಆಡಿದ ನುಡಿಗಳು ತಾಲೂಕಿನ ಸಾಹಿತ್ಯ, ಸಂಸ್ಕೃತಿ, ಸಾಧಕರ ಮತ್ತು ಅಭಿವೃದ್ಧಿಯ ವಿಹಂಗಮ ನೋಟ ಮೂಡಿಬಂದಿರುವದು ಮನನೀಯವಾಗಿದೆ.   'ಜಾನಪದ ಸಾಹಿತ್ಯದಲ್ಲಿ ಕಿತ್ತೂರು ಚನ್ನಮ್ಮ ಇವಳ ಕುರಿತಾದ ಜನಪದ ಹಾಡು, ಸಾಹಿತ್ಯ, ಕೋಲಾಟ, ಬೀಸುಕಲ್ಲಿನ ಹಾಡು, ಗೀಗೀ ಪದ ಹೀಗೆಲ್ಲವುಗಳನ್ನು ಈ ಲೇಖನದಲ್ಲಿ ಸಮರ್ಥವಾಗಿ ಉಲ್ಲೇಖಿಸಲಾಗಿದೆ. 'ಜಾನಪದ ಒಡಪುಗಳು ,ಜಾನಪದ ಸಾಹಿತ್ಯದಲ್ಲಿ ಸಹೋದರ ಸಹೋದರಿಯರು,  ಜನಪದ ಸಾಹಿತ್ಯದಲ್ಲಿ ಕುಟುಂಬ ಜೀವನ ಹಾಗೂ ಸಮಾಜ' ಹೀಗೆಲ್ಲ ಜನಪದ ಸಾಹಿತ್ಯದ ಒಳಗಿನ ಹೂರಣವನ್ನು,  ಅಂದರೆ ಸತ್ವವನ್ನು ನಮ್ಮ ಮುಂದೆ ತೆರೆದಿಟ್ಟಿದ ಬಗೆ ಶ್ಲಾಘನೀಯವಾದುದು. 'ನಾಗನೂರು ಶ್ರೀ ಶಿವಬಸವ ಸ್ವಾಮಿಗಳು' ಮಠದ ಹಾಗೂ ಶ್ರೀಗಳ  ಶಿಕ್ಷಣ, ಧಾಮರ್ಿಕ, ಸಾಂಸ್ಕೃತಿಕ, ನಾಡು ನುಡಿ, ಅನ್ನ ದಾಸೋಹ, ಪ್ರಸಾದ ನಿಲಯ, ಈ ರೀತಿಯಾದ ಸಮಾಜಮುಖಿಯಾದ ನಿಲುವು ಮತ್ತು ಸಾಧನೆಯ ಕುರಿತಾದ ಲೇಖನ ಮನಮುಟ್ಟುವಂತಿದೆ. 'ಕವಿ ಕಕರ್ಿ,  'ಕೆ.ಎಲ್.ಇ.ಕನ್ನಡ ಕವಿಗಳು' ಮೊದಲಾದ ಬರಹಗಳು ಅರ್ಥಪೂರ್ಣವಾಗಿವೆ. 

'ಪ್ರೊ.ಎಂ.ಎಸ್.ಇಂಚಲ ಅವರು ಕನ್ನಡ ಕವಿ ಪರಂಪರೆಗೆ ಸೇರಿದವರು. ತಮ್ಮ ಸರಳ ಸೌಜನ್ಯದ ನಡೆ ನುಡಿಯಿಂದ ಎಲ್ಲರಿಗೆ ಪ್ರಿಯವಾದವರು' ಎಂದು ಹಿರಿಯ ಸಾಹಿತಿ, ಪತ್ರಕರ್ತರಾದ ಎಲ್.ಎಸ್.ಶಾಸ್ತ್ರಿ ಇವರು ತಮ್ಮ ಬೆನ್ನುಡಿಯಲ್ಲಿ ತಿಳಿಸಿದ್ದು ದಿಟವಾದ ಮಾತಾಗಿದೆ. 

ಒಟ್ಟು ಮೂವತ್ತು ಲೇಖನಗಳಿಂದ ಕೂಡಿದ ಈ 'ಗದ್ಯ ಸುಗಂಧ' ನಿಜಕ್ಕೂ ಇದು ಸಾಹಿತ್ಯ ಸಂಪದವಾಗಿ ಹೊರಹೊಮ್ಮಿದೆ. ಓದುಗರನ್ನು ಚಿಂತನೆಗೆ ಹಚ್ಚುವ, ಅಭಿಮಾನ ಮೂಡಿಸುವ ಈ ಕೃತಿ ಬರೆದ ಪ್ರೊ.ಮಲ್ಲಿಕಾಜರ್ುನ ಎಸ್.ಇಂಚಲ ಸರ್ ನಿಜಕ್ಕೂ ಅಭಿನಂದನಾರ್ಹರು. ಇಳಿ ವಯಸ್ಸಿನಲ್ಲೂ ಇವರಲ್ಲಿಯ ಸಾಹಿತ್ಯ, ಸಮಾಜ, ನಾಡು ನುಡಿ ಹೀಗೆ ವಿವಿಧ ಮುಖಗಳಲ್ಲಿರ ಬತ್ತದ ಉತ್ಸಾಹ ಅನುಕರಣೀಯವಾದು.  ಇವರಿಂದ ಇನ್ನೂ ಹೆಚ್ಚಿನ ಸಾಹಿತ್ಯ, ನಾಡು ನುಡಿಯ ಸೇವೆ ಈ ನಾಡಿಗೆ ಲಭಿಸಲೆಂದು ಆಶಿಸುವೆನು.