ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
-ನಾಗೇಶ್ ಜೆ. ನಾಯಕ
ಶಿಕ್ಷಕರು, ಸವದತ್ತಿ
ಮುಸ್ಲಿಂ ಸಮುದಾಯದಿಂದ ಬರವಣಿಗೆ ಕ್ಷೇತ್ರಕ್ಕೆ ಕಾಲಿಟ್ಟು ಅತ್ಯಂತ ಸಂವೇದನಾಶೀಲವಾಗಿ ಬರೆಯುತ್ತಿರುವವರ ಸಾಲಿನಲ್ಲಿ ಸಂತೆಬೆನ್ನೂರು ಫೈಜ್ನಟ್ರಾಜ್ ಕೂಡ ಪ್ರಮುಖರು. ಕಥೆ, ಕವಿತೆ, ಪ್ರಬಂಧ, ಮಕ್ಕಳ ಕಥೆ, ಹೊಸ ವಚನಗಳು ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ತಮ್ಮ ಚೊಚ್ಚಲ ಕಥಾ ಸಂಕಲನ 'ಹಬ್ಬಿದ ಮಲೆ ಮಧ್ಯದೊಳಗೆ' ಪ್ರಕಟಿಸಿದ್ದಾರೆ. ಮುಸ್ಲಿಂ ಸಮುದಾಯದ ತವಕ-ತಲ್ಲಣಗಳ ಜೊತೆಗೆ ಸಣ್ಣತನ, ಸಂಪ್ರದಾಯದ ಸೋಗುಗಳು, ಕಾಯಕನಿಷ್ಠೆ, ಮಾನವೀಯತೆಯನ್ನು ಅನಾವರಣ ಮಾಡುವ, ಮನಕಲಕುವ ಸಂಗತಿಗಳನ್ನು ಹೆಕ್ಕಿ ಕತೆಯಾಗಿಸಿದ್ದಾರೆ. ಎಲ್ಲ ಕತೆಗಳಲ್ಲೂ ಸಾಮರಸ್ಯದ ಭಾವ ತುಂಬಿ ತುಳುಕುತ್ತದೆ. ಮನುಷ್ಯತ್ವದ ಮುಖ್ಯಭೂಮಿಕೆ ಎದ್ದು ಕಾಣುತ್ತದೆ. ತಮ್ಮದೇ ಧರ್ಮದ ನೂನ್ಯತೆಯನ್ನು ಎತ್ತಿ ತೋರಿಸುವ ಎದೆಗಾರಿಕೆ ಕೂಡ ಲೇಖಕರಲ್ಲಿ ನಾವು ಕಂಡುಕೊಳ್ಳುವ ಮೆಚ್ಚುಗೆಯ ಗುಣವಾಗಿದೆ. ವಾಸ್ತವ ಲೋಕದ ಚಿತ್ರಣ ಫೈಜ್ ಅವರ ಚಿಕ್ಕ ಚಿಕ್ಕ ಕಥೆಗಳಲ್ಲಿ ಒಡಮೂಡಿರುವುದು ಗಮನಿಸಬೇಕಾದ ಸಂಗತಿ.
ಒಟ್ಟು ಹದಿನೇಳು ಸಣ್ಣ ಕಥೆೆಗಳನ್ನೊಳಗೊಂಡ ಸಂಕಲನವು ಸರಳ, ಆಪ್ತವಾದ ಭಾಷೆಯ ಮೂಲಕ ಓದುಗನ ಎದೆಯೊಳಗೆ ಸುಲಭಕ್ಕೆ ಪ್ರವೇಶಿಸುತ್ತದೆ. ಸಂಕಲನಕ್ಕೆ ಮುನ್ನುಡಿ ರೂಪದ ಮಾತುಗಳನ್ನಾಡಿರುವ ಖ್ಯಾತ ಕವಯಿತ್ರಿ ಡಾ. ಕೆ. ಷರೀಫಾ ಅವರು "ಈ ದೇಶದ ಮುಸ್ಲೀಮರ ಬಗ್ಗೆ ಬಹುಸಂಖ್ಯಾತ ಕೋಮಿನವರಿಗೆ ಇರುವ ಸಂಶಯ, ದ್ವೇಷಗಳಿಗೆ ಕೊನೆಯಿಲ್ಲ. ಆದರೆ ಫೈಜ್ರ ಕಥೆಗಳು ಇಂತಹ ಅರ್ಥವಿಲ್ಲದ ಗುಮಾನಿಗಳಿಗೆ ವಿರುದ್ಧವಾಗಿ ಸೌಹಾರ್ದದ ಸಂದೇಶ ಕೊಡುತ್ತವೆ. ಫೈಜ್ರವರು ಮುಂಬರುವ ದಿನಗಳಲ್ಲಿ ಭರವಸೆಯ ಕಥೆಗಾರರಾಗಿ ಮೂಡಿ ಬರುವ ಭರವಸೆಯಿದೆ" ಎಂದಿದ್ದಾರೆ.
'ಇಪ್ಪತ್ತು ರೂಪಾಯಿ' ಎಂಬ ಕಥೆಯ ವಿಷಯವಸ್ತು ಪ್ರಸ್ತುತ ಸಮಾಜದಲ್ಲಿ ದಿನನಿತ್ಯ ನಡೆದಿರುವಂತದ್ದೇ ಆಗಿದೆ. ಕಷ್ಟಪಟ್ಟು ಬೆಳೆಸಿದ ಮಕ್ಕಳೇ ಕೊನೆಗಾಲದಲ್ಲಿ ಕಣ್ಣೀರು ತರಿಸುವಂತಾಗುವುದು ವಿಪಯರ್ಾಸ. ಪ್ಲಾಸ್ಟಿಕ್ ಕೊಡ ಹಾಗೂ ಗುಜರಿ ಸಾಮಾನು ವ್ಯಾಪಾರ ಮಾಡುತ್ತಲೇ ಖಾಸೀಮಜ್ಜ ತನ್ನ ಮೂರು ಮಕ್ಕಳಿಗೂ ಚೆಂದನೆಯ ಬದುಕು ಕಟ್ಟಿಕೊಡುತ್ತಾನೆ. ಆದರೆ ಕೈಕಾಲು ನಡೆಯದಾದ ಸ್ಥಿತಿಯಲ್ಲೇ ಖಾಯಿಲೆ ಬಿದ್ದಾಗ ಚಿಕಿತ್ಸೆಗೆಂದು ಇಪ್ಪತ್ತು ರೂಪಾಯಿ ಮಗನ ಹತ್ತಿರ ಕೇಳಿದ್ದಕ್ಕೆ ಮಗನ ಬೈಗುಳ ತಿನ್ನಬೇಕಾದ ಗತಿ ಬರುತ್ತದೆ. "ಕೈಕಾಲ್ ಗಟ್ಟಿ ಇದ್ದಾಗ್ಲೆ ಕಣ್ ಮುಚ್ಚಬೇಕು. ಮಕ್ಕಳಾದ್ರೂ ಸರಿ ಯಾರ್ ಮುಂದೂ ಕೈಚಾಚಬಾರದು" ಎಂದುಕೊಂಡು ಮಾರನೆಯ ದಿನ ಸೈಕಲ್ ಸರಿಪಡಿಸಿಕೊಂಡು, ಗೋಣಿ ಚೀಲ ಹಾಕಿಕೊಂಡು ಅಂತಹ ಮುಪ್ಪಿನ ವಯಸ್ಸಿನಲ್ಲೂ ಕೆಲಸಕ್ಕೆ ಹೋಗುವುದಕ್ಕೆ ಸಿದ್ಧವಾದಾಗ, ಅಜ್ಜಿ ಕಣ್ಣಲ್ಲಿ ನೀರ ತೆರೆ ಸಣ್ಣಗೆ ಹನಿಯುತ್ತದೆ. ಫೈಜ್ ಅವರು ಶಿಕ್ಷಕರಾಗಿರುವುದರಿಂದ ಶೈಕ್ಷಣಿಕ ವಲಯದ ಪ್ರಸಂಗಗಳೂ ಕತೆಯ ವಿಷಯವಸ್ತುಗಳಾಗಿರುವುದು ಸಹಜವೆನಿಸುತ್ತದೆ. 'ಸೇಡು' ಕತೆ ಕೂಡ ಅಂತಹ ಸಿದ್ಧ ಮಾದರಿಯದಾಗಿದೆ. ಇಬ್ಬರು ಶಿಕ್ಷಕರ ಮಧ್ಯೆ ಬೋಧಿಸುವ ವಿಷಯಕ್ಕೆ ನಡೆದ ಪೈಪೋಟಿ ಒಮ್ಮೆ ಬಸವಲಿಂಗಪ್ಪನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದು, ಭುಜಂಗಯ್ಯನ ಟೀಕೆಗೆ ಪ್ರತ್ಯುತ್ತರವಾಗಿ ಛಲಬಿಡದೆ ಸಾಧಿಸಿ ಉನ್ನತ ಅಧಿಕಾರಿಯಾಗಿ ತನ್ನನ್ನು ಟೀಕಿಸಿದ ಭುಜಂಗಯ್ಯನ ಶಾಲೆಗೆ ವೀಕ್ಷಣೆಗೆ ಬರುತ್ತಾನೆ. ಎಲ್ಲಿ ತನ್ನನ್ನು ಹಿಯಾಳಿಸುತ್ತಾನೋ ಅಂದುಕೊಂಡಿದ್ದ ಭುಜಂಗಯ್ಯನೂ ಬೆರಗಾಗುವಂತೆ "ನನ್ನ ಸಾಧನೆಗೆ ನೀವೇ ಕಾರಣ ಭುಜಂಗಯ್ಯನವರೇ" ಎಂದು ಬಿಗಿದಪ್ಪಿಕೊಳ್ಳುವ ಬಸವಲಿಂಗಪ್ಪನ ಪಾತ್ರ ಸೇಡಿನ ವಿಭಿನ್ನ ಆಯಾಮವನ್ನು ತೆರೆದಿಡುವ ಬಗೆ ಇಷ್ಟವಾಗುತ್ತದೆ.
ಒಂದು ವಿಶಿಷ್ಟವಾದ ಸಮಸ್ಯೆಯ ಸುತ್ತ ಹೆಣೆದ ಕತೆ 'ಚೌರದ ಪಾರವ್ವ. ಗಂಡನ ಜೀವದ ಭಯ ಕುಟುಂಬವನ್ನೇ ಸಂಕಷ್ಟಕ್ಕೆ ದೂಡಿದಾಗ ಅನಿವಾರ್ಯವಾಗಿ ಚೌರ ಮಾಡುವ ಕೆಲಸವನ್ನು ಅಪ್ಪಿಕೊಳ್ಳುವ ಪಾರವ್ವ, ಊರಿನ ಮಾಸ್ತರನಾದ ಹುಸೇನ್ ಸಾಬ್ನ ಚೌರ ಮಾಡುತ್ತಲೇ ಆತನತ್ತ ಆಕಷರ್ಿತಳಾಗಿ ಅದನ್ನು ಹೇಳಿಕೊಳ್ಳದೆ ಕೊನೆಗಾಲದಲ್ಲಿ 'ನೀವೇ ನನ್ನ ಮಣ್ಣು ಮಾಡಬೇಕು' ಅಂತ ಪತ್ರ ಬರೆದಿಟ್ಟು ಸಾಯುತ್ತಾಳೆ. ಪತ್ರವನ್ನೋದಿದ ಹುಸೇನ್ ಸಾಬ್ರು ಆಕೆ ಕದ್ದುಕೊಂಡು ಬಂದಿದ್ದ ತನ್ನ ಚಪ್ಪಲಿ ಮತ್ತು ಅದಕ್ಕೆ ಮೆತ್ತಿದ್ದ ಅರಿಶಿಣ, ಕುಂಕುಮದ ಬೊಟ್ಟು ಕಂಡು ಆಕೆಯ ನಿಷ್ಕಲ್ಮಶ ಪ್ರೀತಿ, ಭಕ್ತಿಯನ್ನು ನೆನೆದು ಗದ್ಗದಿತರಾಗುವ ದೃಶ್ಯ ಕರುಳು ಚುರುಕ್ಕೆನಿಸುತ್ತದೆ. ಎಂದಿಗೂ ಸುಳ್ಳನ್ನೇ ಹೇಳದ ಶಿಷ್ಯನೊಬ್ಬ ಗುರುವಿನ ಮೇಲೆ ಬಂದಿದ್ದ ಅಪವಾದವನ್ನು ದೂರ ಮಾಡಲು ಸುಳ್ಳನ್ನು ಹೇಳಿ ಗುರುವನ್ನೇ ಪಾರು ಮಾಡಿದ ಹೃದಯವಂತನ ಶಿಷ್ಯನ ಕತೆ 'ಸತ್ಯವೇ ನಮ್ಮ ತಾಯಿ ತಂದೆ'. ನೀನು ಸುಳ್ಳು ಹೇಳಿದ್ದು ಯಾಕೆ ಎಂದು ಕೇಳಲು ಶಿಷ್ಯ ನುಡಿದ ಮಾತು ಗಮನಿಸಿ "ನಮ್ಮಮ್ಮ ಆಗಾಗ ಗುರು ಅಂದ್ರೆ ದೇವರನ್ನು ತೋರಿಸುವ ಮಾನವ, ಅವನು ದೇವರಿಗಿಂತ ಮೀರಿದವ" ಈ ಸಾಲುಗಳು ಪ್ರಸ್ತುತ ಗುರು ಶಿಷ್ಯರ ಬಾಂಧವ್ಯ ಹೇಗಿರಬೇಕು ಎಂಬುದಕ್ಕೆ ಹೊಳಪು ನೀಡುವಂತಿವೆ.
ಒಂದು ಧರ್ಮದ ನಡುವೆಯೇ ಇರುವ ಅಗಾಧ ಕಂದರಗಳನ್ನು ಪ್ರತಿಬಿಂಬಿಸುವ ಸಂಕಲನದ ಶೀಷರ್ಿಕೆಯ ಕಥೆ 'ಹಬ್ಬಿದಾ ಮಲೆ ಮಧ್ಯದೊಳಗೆ'. ಒಂದು ಧರ್ಮದ ಒಳಗಿರುವ ಇನ್ನೊಂದು ಪಂಗಡಕ್ಕೆ ಅನುಕಂಪ, ಪ್ರೀತಿ ತೋರಿಸಿದ ಎನ್ನುವ ಕಾರಣಕ್ಕೆ ವೇಟ್ ಲಿಫ್ಟರ್ ಹಬೀಬ್ನ ವಾಸಿಯಾಗದ ಖಾಯಿಲೆಯನ್ನು ಗುಣಪಡಿಸಲು ನಿರಾಕರಿಸುವ ಇನ್ನೊಂದು ಪಂಗಡದ ಮೌಲ್ವಿ ಮಾನವೀಯತೆಯನ್ನು ಮರೆತ ಕ್ರೂರ ಪಶುವಿನಂತೆ ಕಾಣುತ್ತಾನೆ. 'ಮಾನವೀಯತೆಗಿಂತ ಸಂಪ್ರದಾಯ ಸುನ್ನಿ, ತಬ್ಲಿಕ್ ದೊಡ್ಡದೆ?' ಎಂದು ಮೌಲ್ವಿಯನ್ನು ಪ್ರಶ್ನಿಸುವ ಹಬೀಬ್ನ ಹೆಂಡತಿ ಹಜರತ್ ತನ್ನ ಅಸಹಾಯಕತೆಗೆ ಕಣ್ಣೀರಾಗುವಂತೆ ಮಾಡುತ್ತಾಳೆ. ಗಾಂಧೀಜಿಯ ಸ್ವಾತಂತ್ರ್ಯದ ನೆಪದಲ್ಲಿ ಗಂಡ ಹಾದಿ ತಪ್ಪಿರುವುದನ್ನು ಕಂಡು ಪ್ರತಿಭಟಿಸಿದ್ದಕ್ಕೆ ಮನೆಯಿಂದ ಹೊರಹಾಕುವ ಶಿಕ್ಷೆಗೆ ಗುರಿಯಾಗುವ ಸಂಕವ್ವ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಕಲ್ಪ ತೊಡುತ್ತಲೇ ತಾನೂ ಗಂಡನಿಂದ ಸ್ವಾತಂತ್ರ್ಯ ಗಳಿಸಿಕೊಂಡು ನಿಟ್ಟುಸಿರಾಗುವ ಬಗೆ 'ಸಂಕವ್ವನ ಸ್ವಾತಂತ್ರ್ಯ ಕಥೆಯಲ್ಲಿ ವ್ಯಕ್ತವಾಗಿದೆ. ಯಾವುದೇ ಭೇದ ಭಾವವಿಲ್ಲದೆ ಸತ್ತವರಿಗೆ ಗುಂಡಿ ತೋಡುವ (ಸತ್ತಾರ್) ವ್ಯಕ್ತಿಯೊಬ್ಬ ತೀರಿಕೊಂಡಾಗ ಗುಂಡಿ ತೋಡುವವರೇ ಸಿಗದೆ ಕೊನೆಗೆ ಜೆ.ಸಿ.ಬಿ ಮೂಲಕ ಗುಂಡಿ ತೋಡಿ ಮಣ್ಣು ಮಾಡುವ ಸ್ಥಿತಿ ಬರುತ್ತದೆ. ಧರ್ಮ-ಜಾತಿಯ ಬೇರುಗಳು ಸಂಪ್ರದಾಯದ ಮಣ್ಣಿನಲ್ಲಿ ಬೆರೆತು ಹೋಗಿ ಮನುಷ್ಯತ್ವವನ್ನೇ ಗೌಣವಾಗಿಸುವ ಸಂಗತಿ 'ನೆರಳ ಹಗ್ಗದ ನೇಣು' ಕಥೆೆ ಕಾಣಿಸುತ್ತದೆ.
ಬಾಲ್ಯ ಕಾಲದಲ್ಲಿ ಅರಳಿದ ಪ್ರೀತಿ ಹೆಮ್ಮರವಾಗುವ ಮೊದಲೇ ಮುರಿದು ಬಿದ್ದು ಬದುಕಿನ ಪಥಗಳು ಬೇರೆ ಬೇರೆಯಾಗಿ ಆಶ್ರಯವನ್ನು ಕಂಡುಕೊಂಡಿರುವ ದಿನಗಳಲ್ಲೇ ಮತ್ತೆ ಕಳೆದು ಹೋದ ಪ್ರೀತಿ ಇದಿರಿಗೆ ಸಿಕ್ಕರೆ ಏನಾಗುತ್ತದೆ? ಎರಡು ಸಂಸಾರಗಳು ಒಡೆದು ಛಿದ್ರವಾಗುತ್ತವಾ? ಮತ್ತೆ ಒಲವು ತೋಳು ತಬ್ಬಿಕೊಳ್ಳುತ್ತಾ? ಅನ್ನುವ ಪ್ರಶ್ನೆಗಳಿಗೆ 'ಮುರಿದ ಪ್ರೀತಿಯ ಪೋಸ್ಟ್ ಮಾರ್ಟಂ' ಕತೆ ಉತ್ತರವಾಗುತ್ತದೆ. ಆಡುತ್ತಾ, ಹಾಡುತ್ತಾ ಬೆಳೆಯಬೇಕಾದ ಮಗುವಿನ ಮುಗ್ಧ ಮನಸಿನೊಳಗೆ ನಾವುಗಳು ಜಾತಿಯ ವಿಷಬೀಜವನ್ನು ಬಿತ್ತಿ ಅದರ ಭಯಕ್ಕೆ ಕಾರಣವಾಗುವ, ಅದರ ಚೆಂದದ ಬಾಲ್ಯವನ್ನು ಕಸಿದುಕೊಳ್ಳುವ ಮಟ್ಟಿಗೆ ಕ್ರೂರತೆಯನ್ನು ಪ್ರದಶರ್ಿಸುತ್ತಿದ್ದೇವೆ ಎಂಬುದನ್ನು ತೋರ್ಪಡಿಸುವ ಕಥೆ 'ಗಣಪತಿರಾಯ ಮುಗಿವೆನು ಕೈಯ'.
ಹೀಗೆ ಸಂಕಲನದ ಎಲ್ಲ ಕಥೆಗಳು ವಿಭಿನ್ನ ಪಾತ್ರಗಳ ಮೂಲಕ, ವಿಭಿನ್ನ ಪರಿಸರದ, ವಿಭಿನ್ನ ಸಮಸ್ಯೆಗಳನ್ನು ಅನಾವರಣಗೊಳಿಸುತ್ತ ಅಂತಃಕರಣ ತಟ್ಟುವ, ಆಲೋಚನೆಗಿಳಿಸುವ, ನಮ್ಮತನವನ್ನೇ ಪ್ರಶ್ನಿಸಿಕೊಳ್ಳುವ ಮಟ್ಟಿಗೆ ಓದುಗರನ್ನು ಭಾವುಕರನ್ನಾಗಿಸುತ್ತವೆ. ಬೆನ್ನುಡಿ ಬರೆದ ಜಿ ಮುದ್ದುವೀರಸ್ವಾಮಿ ಹೇಳುವಂತೆ "ಫೈಜ್ ಕವಿತೆಯನ್ನು ಪಕ್ಕಕ್ಕಿಟ್ಟು ಕವಿತೆಯಂಥಾ ಕಥೆೆಗಳನ್ನು ಕಟ್ಟಿಕೊಟ್ಟಿದ್ದಾರೆ. ಇದರಲ್ಲಿ ನೀತಿಕಥೆಗಳಿವೆ. ನೈರಾಶ್ಯದ ಕಥೆಗಳಿವೆ. ಪ್ರೀತಿಯ ಕಥೆಗಳಿವೆ. ಆದಿಯಿಂದಲೂ ಆಧುನಿಕತೆಯವರೆಗೂ ಮಾನವನನ್ನು ಇನ್ನಿಲ್ಲದಂತೆ ಕಾಡಿದ ಕಥೆಗಳಿವೆ. ಹಾಗೆಯೇ ಮನುಷ್ಯತ್ವದ ಕಥೆಗಳೂ ಒಳಗೊಂಡಿವೆ" ಇಂತಹ ಅಪರೂಪದ ಕಥೆೆಗಳನ್ನು ಹೆಕ್ಕಿಕೊಟ್ಟ ಕವಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರಿಗೆ ಶುಭ ಕೋರುತ್ತೇನೆ.