ಡೋಂಗಿ ಸ್ವಾಮಿಗಳ ಬಣ್ಣ ಬಯಲು ಮಾಡುವ ನಾಟಕ ತಲಾಷ್

-ನಾಗೇಶ್ ಜೆ. ನಾಯಕ 

ಶಿಕ್ಷಕರು, ಸವದತ್ತಿ

ಸದಾ ಹೊಸತನದ ಹುಡುಕಾಟದಲ್ಲಿರುವ ಸೋಮು ರೆಡ್ಡಿ 'ತಲಾಷ್ ಎಂಬ ನಾಟಕ ಸಂಕಲನವನ್ನು ಪ್ರಕಟಿಸಿದ್ದಾರೆ. ಈಗಾಗಲೇ 'ಅಭಿನೇತಿ'್ರ, 'ಕಂದೀಲು' ಎಂಬ ಕಾದಂಬರಿಗಳನ್ನು ಹಾಗೂ 'ನೋಟದಾಗ ನಗೆಯಾ ಮೀಟಿ' ಕಥಾ ಸಂಕಲನವನ್ನು ಪ್ರಕಟಿಸಿರುವ ಅವರು ಇದೀಗ ನಾಟಕ ರಚನೆಯತ್ತ ಹೊರಳಿರುವುದು ಸಂತಸದ ಸಂಗತಿ. ನಾಟಕ ರಚನೆ ಅಷ್ಟು ಸುಲಭವಲ್ಲ ಎಂಬ ವಿಷಯ ಎಲ್ಲರೂ ಬಲ್ಲ ಸಂಗತಿಯೇ. ಸೂಕ್ತ ವಿಷಯದ ಆಯ್ಕೆ, ಪಾತ್ರಗಳ ತಯಾರಿ, ಸುಲಲಿತವಾದ ನಿರೂಪಣಾ ಶೈಲಿ, ಬಳಸಿಕೊಳ್ಳುವ ಸಂಭಾಷಣೆ, ಕಥೆಗೆ ಒಗ್ಗಿಕೊಳ್ಳುವ ಪರಿಸರದ ಚಿತ್ರಣ, ಅದನ್ನು ರಂಗಕ್ಕೆ ತರುವಲ್ಲಿ ಎಚ್ಚರವಹಿಸುವ ಸೂಕ್ಷ್ಮತೆ ಅಷ್ಟು ಸುಲಭವಲ್ಲ. ಸೋಮು ರೆಡ್ಡಿ ಅವರು ಎಲ್ಲವನ್ನೂ ಒಂದು ಕಡೆ ಕಲೆ ಹಾಕಿ ಶೃದ್ಧೆಯಿಂದ ನಾಟಕ ರಚಿಸಿದ್ದಾರೆ. ವೃತ್ತಿಯಿಂದ ಪೊಲೀಸ್ ಇಲಾಖೆಯಲ್ಲಿದ್ದರೂ ಅವರ ಪ್ರವೃತ್ತಿ ಸಾಹಿತ್ಯ ಕ್ಷೇತ್ರದಲ್ಲಿದೆ. ಹಳ್ಳಿಗಾಡಿನಲ್ಲಿನ ಸಹಜ ಮೌಢ್ಯತೆ, ಜಾತೀಯತೆ, ಡೋಂಗಿ ಸನ್ಯಾಸಿಗಳ ವಂಚನೆಯ ಸುತ್ತ ಹೆಣೆದಿರುವ ನಾಟಕವೇ ತಲಾಷ್. ಈಗಾಗಲೇ ಇಂತಹ ಪವಾಡ ನಡೆಸುತ್ತೇನೆಂದು ಪುಂಗಿ ಬಿಡುವ ಅದೆಷ್ಟೋ ಬೂದಿ ಬಾಬಾಗಳ ಬಂಡವಾಳವನ್ನು ಪತ್ರಿಕೆಗಳು ಸಾಕಷ್ಟು ಸಲ ಬಯಲು ಮಾಡಿವೆ. ಅಂತದೇ ಸುಳ್ಳನ್ನು ಹೊತ್ತು ತರುವ ಸ್ವಾಮೀಜಿಯೊಬ್ಬ ಸತ್ತೂರಿನ ಜನರನ್ನು ವಂಚಿಸುವ ಚಿತ್ರಣ ನಾಟಕದಲ್ಲಿ ಬಿಂಬಿತವಾಗಿದೆ.

ಸಂಕಲನಕ್ಕೆ ಮುನ್ನುಡಿಯ ಮಾತುಗಳನ್ನಾಡಿರುವ ಡಾ. ಸಿದ್ರಾಮ್ ಕಾರಣಿಕ ಅವರು "ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಕವಿಯಾಗಿ, ಕತೆಗಾರರಾಗಿ, ಕಾದಂಬರಿಕಾರರಾಗಿ ಗುರುತಿಸಿಕೊಂಡಿರುವ ಸೋಮು ರೆಡ್ಡಿಯವರು ಇದೀಗ ನಾಟಕವೊಂದನ್ನು ಬರೆದು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಬರೆಯುವ ಛಲ ಇರುವುದನ್ನು ತೋರಿಸಿಕೊಟ್ಟಿದ್ದಾರೆ. ಈ ನಾಟಕಕ್ಕೆ ಆಯ್ದುಕೊಂಡ ವಿಷಯ, ನಿರೂಪಿಸುವ ಶೈಲಿ, ಸಂಭಾಷಣೆಗಳ ಚಾಕಚಕ್ಯತೆ, ಪಾತ್ರಗಳನ್ನು ದುಡಿಸಿಕೊಳ್ಳುವಲ್ಲಿ ಅವರು ಹಾಕುವ ಶ್ರಮ ಎಲ್ಲವೂ ಮೆಚ್ಚುಗೆಗೆ ಪಾತ್ರವಾಗುತ್ತದೆ" ಎಂದಿದ್ದಾರೆ. ನಾಟಕದಲ್ಲಿ ಹದಿನೈದು ದೃಶ್ಯಗಳಿವೆ. ಹಾಗೆಯೇ ಹದಿನೈದು ಪಾತ್ರಗಳು ಬಂದು ಹೋಗುತ್ತವೆ. ಬಸವಂತಗೌಡ, ಸದ್ಗುಣಾನಂದ, ಕಾಳಪ್ಪಶೆಟ್ಟಿ, ಶಂಕ್ರೆಪ್ಪ, ಅನ್ನಪೂರ್ಣ, ಮಾಯವ್ವ, ಸಂಗಪ್ಪ, ಚನ್ನಪ್ಪ, ಮಾದೇವ, ಮರಿಗೌಡ ಎಲ್ಲ ಪಾತ್ರಗಳೂ ಆಸೆಯೆಂಬ ಬಿಸಿಲುಗುದುರೆಯನ್ನು ಬೆನ್ನು ಹತ್ತಿವೆ. ಸಾಮಾಜಿಕ ಕಾಳಜಿಯೊಂದಿಗೆ ಶುರುವಾಗುವ ನಾಟಕ, ಹಳ್ಳಿಗಾಡಿನಲ್ಲಿ ಇಂದಿಗೂ ಬೇರೂರಿರುವ ಜಾತಿವ್ಯವಸ್ಥೆಯ ಕರಾಳ ಮುಖದ ಪರಿಚಯ ಮಾಡಿಸುತ್ತದೆ. ಸಂಗಪ್ಪ ಊರ ಗೌಡ ಬಸವಂತನ ಆಳು, ಕೀಳು ಜಾತಿಯವನು ಅನ್ನುವ ಕಾರಣಕ್ಕೆ, ಅವನ ಮಗ ಗೌಡನನ್ನು ಮುಟ್ಟಿದ್ದರಿಂದ ಕರುಣೆಯಿಲ್ಲದೆ ಹಿಗ್ಗಾಮುಗ್ಗಾ ಥಳಿಸಲ್ಪಡುತ್ತಾನೆ. ಎಲ್ಲಿ ತನ್ನ ಮಕ್ಕಳು ಶಾಲೆ ಕಲಿಯುತ್ತಾರೆಂಬ ವಿಷಯ ಗೌಡನಿಗೆ ಗೊತ್ತಾದರೆ ಅವರ ಕಲಿಕೆಗೆ ಸಂಚಕಾರ ಬರುತ್ತದೋ ಎನ್ನುವ ಭಯದಿಂದ ಕಲಿಸುವ ವಿಷಯವನ್ನು ಗೌಡನಿಂದ ಮುಚ್ಚಿಡುತ್ತಾನೆ ಸಂಗಪ್ಪ.

ಸದ್ಗುಣಾನಂದ ಸ್ವಾಮೀಜಿ ಊರನ್ನು ಪ್ರವೇಶಿಸಿ ಸಂಗಪ್ಪನ ಮನೆಯಲ್ಲಿ ನಿಧಿ ಇದೆ ಎಂದು ಹೇಳಿದ ಸುದ್ದಿ ಊರಿನ ಗೌಡ ಮತ್ತು ಹಿರಿಯರಿಗೆ ತಲುಪಿ ಸಂಗಪ್ಪನ ಭಾಗ್ಯವೇ ಬದಲಾಗುತ್ತದೆ. ಕೀಳುಜಾತಿಯವನೆಂದು ಸನಿಹವೂ ಸೇರಿಸಿಕೊಳ್ಳದ ಗೌಡ ಮತ್ತು ಊರಿನ ಹಿರಿಯರು ಅವನನ್ನು ತಲೆ ಮೇಲೆ ಕೂರಿಸಿಕೊಂಡು ಮೆರೆಸುತ್ತಾರೆ. ಅವನು ಬೇಡ ಬೇಡವೆಂದರೂ ಹಣವನ್ನು ಕೈಯಲ್ಲಿ ಇಟ್ಟು ಚಿಂತಿಸಬೇಡ ನಾವಿದ್ದೀವಿ ಎನ್ನುವ ಭರವಸೆ ನೀಡುತ್ತಾರೆ. ಕಾಳಪ್ಪಶೆಟ್ಟಿಯ ಮಗ ಸಂತೋಷ ನಿಧಿಯ ಕಾರಣಕ್ಕಾಗಿಯೇ ಸಂಗಪ್ಪನ ಮಗಳನ್ನು ಪ್ರೀತಿಸುವ ನಾಟಕವಾಡಿ ಹೊಟ್ಟೆ ತುಂಬಿಸುತ್ತಾನೆ. ಹೀಗೆ ಊರಿನ ಸಮುದಾಯದಿಂದ ತೀರಾ ನಿರ್ಲಕ್ಷ್ಯಕ್ಕೆ ಒಳಗಾದ ತಳ ಸಮುದಾಯದ ಕುಟುಂಬವೊಂದು 'ನಿಧಿ ಇದೆ ಎನ್ನುವ ಕಾರಣಕ್ಕೆ ಆಪ್ತವಾಗುತ್ತಾ ಹೋಗುತ್ತದೆ. 

ಸ್ವಾಮೀಜಿ ವರ್ಷವಾದರೂ ನಿಧಿ ಹೊರತೆಗೆಯದೆ ಏನಾದರೂ ಒಂದು ಸಬೂಬು ಹೇಳುತ್ತಾ ದಿನಗಳೆಯುವುದನ್ನು ನೋಡಿ ಗೌಡ, ಊರಿನ ಹಿರಿಯರು, ಪೊಲೀಸ್ ಅಧಿಕಾರಿ ಸಂಗಪ್ಪ ಮತ್ತು ಅವನ ಮಡದಿ ಮಾಯವ್ವಳ ಮೇಲೆ ರೇಗುವುದು, ಕೊಟ್ಟ ದುಡ್ಡು ವಾಪಸು ಕೇಳುವುದು ಮಾಡಿದಾಗ ಸಂಗಪ್ಪ ಆಡುವ ಸಂಭಾಷಣೆ ಗಮನಿಸಿ. "ಅಯ್ಯೋ ದೇವ್ರಾ ನಮಗ್ಯಾಕ ಹಿಂಗ ಮೋಸಾ ಮಾಡಾಕತ್ತಿಯೋ? ಉಪಾಸ ಇದ್ರೂ ಉಪದ್ರ ಇರಬಾರದಂತ. ನಾವು ಉಪವಾಸ ಬೀಳತಿದ್ವಿ ಅವಾಗ ನಮಗ ನೆಮ್ದಿ ಇತ್ತ. ಈಗ ಬದಕ(ನಿಧಿ) ಐತಿ ಅಂದಮ್ಯಾಗ ನೆಮ್ದಿ ಅದನ್ನೆಲ್ಲಾ ಕಿತ್ತಗೊಂಡು ಬಿಟ್ಟೆಯಲ್ಲೋ ದೇವ್ರ ಅದಕ್ಕೆ ಪೂರಕವಾಗಿ ಮಾಯವ್ವ ಹೇಳುವ "ಬ್ಯಾಡೋ ಯಪ್ಪಾ ಇದು ಏನೂ ಬ್ಯಾಡ ನಮಗ. ಬಿಟಗೋಟ ಎಲ್ಲೇರ ಹೋಗಿ ದುಡ್ಕೊಂಡ ತಿನ್ನೂಣ ನಡಿ. ಎಲ್ಲಾ ಅವ್ರ ತಗೋಲಿ" ಎನ್ನುವ ಮಾತುಗಳು ದುಡಿದುಕೊಂಡು ತಿನ್ನುವಾಗ ಇದ್ದ ನೆಮ್ಮದಿ ಈಗ ನಿಧಿ ಇದೆ ಎಂದು ತಿಳಿದಾಗ ಇಲ್ಲವಾಗಿದೆ. ದುಡ್ಡು ಬರುವುದರ ಜೊತೆಗೆ ನೆಮ್ಮದಿ, ಸಮಾಧಾನ, ಶಾಂತಿಯನ್ನು ಕಿತ್ತುಕೊಳ್ಳುತ್ತದೆ ಎಂಬ ವಾಸ್ತವವನ್ನು ತೆರೆದಿಡುತ್ತವೆ.

ಕೊನೆಗೂ ನಿಧಿ ಸಿಕ್ಕಿತಾ? ಸಂಗಪ್ಪ, ಮಾಯವ್ವಳ ಬಾಳಲ್ಲಿ ನೆಮ್ಮದಿ ನೆಲೆಸಿತಾ? ನಿಧಿಗಾಗಿ ಬಾಯಿ ಬಾಯಿ ಬಿಡುತ್ತಿದ್ದ ಗೌಡ, ಮಾಸ್ತರು, ಊರಿನ ಪ್ರಮುಖರು, ಪೊಲೀಸ್ ಅಧಿಕಾರಿಯ ಗತಿಯೇನಾಯಿತು? ಸಂತೋಷ ಮತ್ತು ಪ್ರೇಮಾಳ ಮದುವೆಯಾಯಿತಾ? ಡೋಂಗಿ ಸ್ವಾಮಿಯ ಸ್ಥಿತಿಯೇನಾಯಿತು? ಎಂಬ ಪ್ರಶ್ನೆಗಳಿಗೆ ಉತ್ತರವನ್ನೆಲ್ಲ ನಾಟಕ ಸಂಪೂರ್ಣ ಓದಿಯೇ ತಿಳಿಯಬೇಕು. ಇಡೀ ನಾಟಕದಲ್ಲಿ ಶಿವಬಸು ಎನ್ನುವ ಸಮಾಜ ಸೇವಕನ ಪಾತ್ರ ಗಮನ ಸೆಳೆಯುತ್ತದೆ. ಸೋಮು ರೆಡ್ಡಿಯವರು ಪಾತ್ರಗಳನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಉತ್ತರ ಕನರ್ಾಟಕ ಶೈಲಿಯ ಜವಾರಿ ಭಾಷೆ ತುಂಬಾ ಆಪ್ತವೆನಿಸಿದೆ. ಅಲ್ಲಲ್ಲಿ ಚನ್ನಪ್ಪನ ಪಾತ್ರದ ಮೂಲಕ ನವಿರಾದ ತಿಳಿ ಹಾಸ್ಯವನ್ನು ಎಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ. ನಡುನಡುವೆ ಬಳಸಿಕೊಂಡ ಗಾದೆ ಮಾತುಗಳು ಸನ್ನಿವೇಶಕ್ಕೆ ಪೂರಕವೆನಿಸಿವೆ. ರಂಗದಲ್ಲಿ ಯಶಸ್ವಿಯಾಗಿ ಪ್ರಯೋಗ ಮಾಡುವುದಕ್ಕೆ ಅಲ್ಲಲ್ಲಿ ನೀಡಿದ ಸೂಚನೆಗಳು ಸೂಕ್ತವೆನಿಸಿವೆ.

ನಟ, ನಿದರ್ೇಶಕ ಯಶವಂತ ಸರದೇಶಪಾಂಡೆ ಹೇಳುವಂತೆ "ಸೋಮುರೆಡ್ಡಿ ಪ್ರತಿಭಾವಂತ ನಾಟಕಕಾರರು ಅನ್ನೋದರಾಗ ಸಂಶಯ ಇಲ್ಲ. ಯಾಕಂದ್ರ ಈ 'ತಲಾಷ್ ನಾಟಕ ಬಾಳ ಚಲೋ ಮೂಡಿ ಬಂದದ. ಹೆಚ್ಚು ಕಡಿಮೆ ಹದಿನೈದ ಪಾತ್ರ ಇಟಗೊಂಡ ಜಗದಾಗಿರುವ ಸಾವಿರಾರ ವ್ಯಕ್ತಿಗಳ ಚಿತ್ರಣವನ್ನ ನಾಟಕದಾಗ ತೋರಿಸ್ಯಾರ. ಕನ್ನಡ ರಂಗಕಮರ್ಿಗಳು 'ತಲಾಷ್ನ್ನ ರಂಗದ ಮ್ಯಾಲ ತರುವ ಪ್ರಯತ್ನ ಮಾಡಬೇಕಂತ ಆಗ್ರಹಿಸ್ತೀನಿ." ಸಂಘಟನೆ, ನಿದರ್ೇಶನ, ಗೀತರಚನೆ, ನಾಟಕ ನಿದರ್ೇಶನ, ಫೋಟೋಗ್ರಫಿ, ವೆಬ್ ಡಿಸೈನಿಂಗ್ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ ಸೋಮು ರೆಡ್ಡಿ ಅವರು ಮತ್ತಷ್ಟು ಮೌಲ್ಯಯುತ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲಿ ಅಂತ ಹಾರೈಸುತ್ತ ಅವರ 'ತಲಾಷ್ ನಾಟಕ ಸಂಕಲನಕ್ಕೆ ಶುಭ ಕೋರುತ್ತೇನೆ.